ಪ್ರತಿಭಟನೆ ಜನರ ಜನ್ಮಸಿದ್ಧ ಹಕ್ಕು
ಪ್ರಜಾಪ್ರಭುತ್ವದಲ್ಲಿ ಬರೀ ಚುನಾವಣೆ ನಡೆದು ಜನರು ತಮ್ಮ ಪ್ರತಿನಿಧಿ ಗಳನ್ನು ಚುನಾಯಿಸಿದರೆ ಸಾಲದು. 5 ವರ್ಷಕ್ಕೊಮ್ಮೆ ಚುನಾವಣೆ ಮಾತ್ರ ಪ್ರಜಾಪ್ರಭುತ್ವ ಎನಿಸಿಕೊಳ್ಳುವುದಿಲ್ಲ. ಪ್ರಜೆಗಳು ತಮ್ಮ ಬೇಡಿಕೆ, ಅಹವಾಲುಗಳಿಗೆ ಧ್ವನಿಯೆತ್ತುವುದು, ಹೋರಾಡುವುದು ಮತ್ತು ಅಧಿಕಾರದಲ್ಲಿ ಇರುವವರನ್ನು ಟೀಕಿಸುವುದು ಹಾಗೂ ಪ್ರಭುತ್ವದ ಸೂತ್ರ ಹಿಡಿದ ತಮ್ಮ ಪ್ರತಿನಿಧಿಗಳಿಂದ ಉತ್ತರ ಬಯಸುವುದು ನಿಜವಾದ ಪ್ರಜಾಪ್ರಭುತ್ವ. ಜನರ ಪ್ರತಿಭಟನೆಗಳಿಗೆ ಅಧಿಕಾರದಲ್ಲಿ ಇರುವವರು ಬೇಸರ ಮಾಡಿಕೊಳ್ಳಬಾರದು. ಪ್ರತಿರೋಧವನ್ನು ನಿಯಂತ್ರಿಸುವ ಇಲ್ಲವೇ ಕಡಿವಾಣ ಹಾಕುವ ದುಸ್ಸಾಹಸಕ್ಕೆ ಕೈ ಹಾಕಬಾರದು.
ಆದರೆ, ಜಗತ್ತು ಮಾರುಕಟ್ಟೆ ಆರ್ಥಿಕತೆಯ ಅಡ್ಡದಾರಿ ಹಿಡಿದ ನಂತರ ಪ್ರತಿಭಟನೆ ಮತ್ತು ಪ್ರತಿರೋಧಗಳನ್ನು ಪ್ರಭುತ್ವದ ಸೂತ್ರ ಹಿಡಿದವರು ಇಷ್ಟಪಡುವುದಿಲ್ಲ. ಅಂತಲೇ ಪೊಲೀಸ್ ಬಲ ಬಳಸಿ ಪ್ರತಿಭಟನೆ ಮತ್ತು ಚಳವಳಿಗಳನ್ನು ಹತ್ತಿಕ್ಕುವ ಮಸಲತ್ತು ನಡೆಯುತ್ತಲೇ ಇವೆ. ಸಾಮಾನ್ಯವಾಗಿ ರಾಜ್ಯದ ಜನಸಾಮಾನ್ಯರು ಮತ್ತು ವಿವಿಧ ಜನವರ್ಗಗಳ ಜನರು ಸರಕಾರದ ಕಿವಿಗೆ ತಮ್ಮ ಅಹವಾಲುಗಳನ್ನು ತಲುಪಿಸಲು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬರುತ್ತಾರೆ. ಅದೇ ರೀತಿ ಭಾರತದ ಎಲ್ಲ ರಾಜ್ಯಗಳ ಜನ ದೇಶದ ರಾಜಧಾನಿ ಹೊಸದಿಲ್ಲಿಗೆ ಬರುತ್ತಾರೆ. ನಾನೂ ಕೂಡ ಇಂಥ ಬೆಂಗಳೂರು ಚಲೋ ಮತ್ತು ದಿಲ್ಲಿ ಚಲೋ ಪ್ರತಿಭಟನೆ, ಚಳವಳಿಗಳಲ್ಲಿ ಪಾಲ್ಗೊಂಡಿದ್ದೇನೆ. ಬೆಂಗಳೂರಿಗೆ ನರಗುಂದ ಜಾಥಾ ಸೇರಿ ಅನೇಕ ಜಾಥಾಗಳೊಂದಿಗೆ ಬಂದಿದ್ದೇನೆ. 80ರ ದಶಕದ ಕೊನೆಯವರೆಗೆ ಪ್ರತಿಭಟನೆಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ವಿಧಾನಸೌಧದ ಎದುರು ಆಗ ಪ್ರತಿಭಟನೆಗಳು ನಡೆಯು ತ್ತಿದ್ದವು. ನಂತರ ಅದನ್ನು ನಿರ್ಬಂಧಿಸಿ ಕೆ.ಆರ್.ಸರ್ಕಲ್ ಬಳಿ ಪ್ರತಿಭಟನೆಗೆ ಅವಕಾಶ ನೀಡಲಾಯಿತು. ಈಗ ಬೆಂಗಳೂರಿನ ಸ್ವಾತಂತ್ರ ಉದ್ಯಾನದ ಆವರಣ ಬಿಟ್ಟು ಬೇರೆಲ್ಲೂ ಪ್ರತಿಭಟನೆ ನಡೆಸಬಾರದೆಂದು ನಿರ್ಬಂಧ ವಿಧಿಸಲಾಗಿದೆ.
ತಾವೇ ಚುನಾಯಿಸಿದ ಸರಕಾರದ ಎದುರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಜನರಿಗೆ ಇರುವ ಏಕೈಕ ಅಸ್ತ್ರ ಪ್ರತಿಭಟನೆ. ಅನೇಕ ಬಾರಿ ಇಂಥ ಜನಾಕ್ರೋಶಗಳಿಂದಲೇ ಜನರ ಸಮಸ್ಯೆಗಳು ಪರಿಹಾರವಾದ ಉದಾಹರ ಣೆಗಳಿವೆ. 70ರ ದಶಕದಲ್ಲಿ ನಾನು ಮೊದಲು ನಮ್ಮ ಬಿಜಾಪುರದಿಂದ ಬೆಂಗಳೂರಿಗೆ ಬಂದದ್ದು ಇಂಥ ಪ್ರತಿಭಟನೆಯಲ್ಲಿ ಭಾಗವಹಿಸಲು. ವಿಧಾನ ಸೌಧದ ಎದರಿನ ಕಬ್ಬನ್ ಪಾರ್ಕ್‌ನಲ್ಲಿ ರಾಜ್ಯದ ನಾನಾ ಊರುಗಳಿಂದ ಬಂದ ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹೀಗೆ ನಾನಾ ಜನ ವರ್ಗಗಳ ನೊಂದವರು ಮೆರವಣಿಗೆ ಮೂಲಕ ಕಬ್ಬನ್ ಪಾರ್ಕ್‌ಗೆ ಬಂದು ಅಲ್ಲಿ ಭಾರೀ ಬಹಿರಂಗ ಸಭೆ ನಡೆದು ನಾಯಕರು ಮಾತನಾಡುತ್ತಿ ದ್ದರು. ಕೊನೆಗೆ ಮಂತ್ರಿಗಳು ಪ್ರತಿಭಟನೆಯ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಭರವಸೆ ನೀಡಿ ಹೋಗುತ್ತಿದ್ದರು. ಈ ಕಬ್ಬನ್ ಉದ್ಯಾನದಲ್ಲಿ ಹೆಸರಾಂತ ಕಮ್ಯುನಿಸ್ಟ್ ನಾಯಕರಾದ ಭೂಪೇಶ್ ಗುಪ್ತಾ, ಹರಕಿಷನ್ ಸಿಂಗ್ ಸುರ್ಜಿತ್, ಎಂ.ಎಸ್. ಕೃಷ್ಣನ್, ಬಿ.ವಿ.ಕಕ್ಕಿಲ್ಲಾಯರು, ರೈತ ಸಂಘದ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ, ಸೋಷಲಿಸ್ಟ್ ನಾಯಕರಾದ ಶಾಂತವೇರಿ ಗೋಪಾಲಗೌಡರ ಭಾಷಣಗಳನ್ನು ನಾನು ಕೇಳಿದ್ದೇನೆ. ನರಗುಂದ ರೈತ ಜಾಥಾ ಸಂದರ್ಭದಲ್ಲಿ (ಆಗ ಗುಂಡೂರಾವ್ ಮುಖ್ಯಮಂತ್ರಿ) ರೈತರು ವಿಧಾನಸೌಧದ ಮುಖ್ಯದ್ವಾರದ ಮೆಟ್ಟಿಲು ಏರಿ ಬಾಗಿಲವರೆಗೆ ಹೋಗಿ ಆಳುವವರ ಕಿವಿಗೆ ಅಪ್ಪಳಿಸುವಂತೆ ಘೋಷಣೆಗಳನ್ನು ಕೂಗಿದರು.
ಈಗ ಟೌನ್‌ಹಾಲ್ ಮುಂದೆ ಕೂಡ ಪ್ರತಿಭಟನೆ ನಡೆಸಲು ನಿರ್ಬಂಧವಿದೆ. ಪ್ರತಿಭಟನೆ ನಡೆಸಲು ಅನುಮತಿ ಮತ್ತು ಅವಕಾಶ ಇರುವುದು ಶೇಷಾದ್ರಿ ರಸ್ತೆಯ ಸ್ವಾತಂತ್ರ ಉದ್ಯಾನದ ಬಳಿ ಮಾತ್ರ.ವಾಹನ ಸಂಚಾರಕ್ಕೆ ವ್ಯತ್ಯಯವಾಗುತ್ತದೆ ಎಂದು ಪೊಲೀಸರು ಜನ ಪ್ರತಿಭಟನೆಯನ್ನು 2021ರ ವರ್ಷದಿಂದ ಸ್ವಾತಂತ್ರ ಉದ್ಯಾನಕ್ಕೆ ಸೀಮಿತಗೊಳಿಸಿದ್ದಾರೆ. ಈ ನಿರ್ಬಂಧವನ್ನು ತೆಗೆದುಹಾಕಿ ಟೌನ್ ಹಾಲ್ ಸೇರಿದಂತೆ ಎಲ್ಲೆಡೆ ಪ್ರತಿಭಟನೆ ನಡೆಸಲು ಜನಪರ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಒಂದು ಉದ್ಯಾನಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಕೇರಳದಲ್ಲಿ ಕಮ್ಯುನಿಸ್ಟ್ ನಾಯಕ ಇ.ಎಂ.ಎಸ್. ನಂಬೂದ್ರಿಪಾದರು ಮುಖ್ಯಮಂತ್ರಿಯಾಗಿದ್ದಾಗ ಜನಸಾಮಾನ್ಯರ, ರೈತ, ಕಾರ್ಮಿಕರ, ವಿದ್ಯಾರ್ಥಿ, ಯುವಜನರ ಮತ್ತು ಮಹಿಳೆಯರ ಪ್ರತಿಭಟನೆ ಮತ್ತು ನಿರಶನ ನಡೆಸಲು ತಿರುವನಂತಪುರದ ಶಾಸನ ಸಭೆಯ ಎದುರು ಜಾಗ ನಿಗದಿಪಡಿಸಿ ಮಳೆ ಬಂದರೆ ತೊಂದರೆ ಆಗಬಾರ ದೆಂದು ಮೇಲ್ಛಾವಣಿ ಹಾಕಿದ ವೇದಿಕೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಂಥ ಪ್ರತಿಭಟನೆಗೆ ಕ್ರಮೇಣ ಪ್ರಭುತ್ವ ಕಡಿವಾಣ ಹಾಕುತ್ತ ಬರತೊಡಗಿತು. ಅಧಿಕಾರದ ಕುರ್ಚಿಯಲ್ಲಿ ಕೂತವರಿಗೆ ತಮ್ಮನ್ನು ಚುನಾಯಿಸಿದ ಜನಸಾಮಾನ್ಯರ ಘೋಷಣೆಗಳ ಬಗ್ಗೆ ಅಸಹನೆ ಬೆಳೆಯತೊಡಗಿತು.ಮೊದಲು ವಿಧಾನಸೌಧದ ಮುಂದಿನ ಪ್ರತಿಭಟನೆ ಯನ್ನು ನಿರ್ಬಂಧಿಸಿದರು.ನಂತರ ಕೃಷ್ಣ ರಾಜ ವರ್ತುಲದ ವರೆಗೆ ಪ್ರತಿಭಟನಾ ಮೆರವಣಿಗೆ ಬರುವುದನ್ನು ನಿಷೇಧಿಸಿದರು. ವಿಧಾನಸೌಧದಿಂದ ಒಂದು ಕಿ.ಮೀ. ದೂರದ ಬನ್ನಪ್ಪ ಪಾರ್ಕ್ ನಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಲು ಅನುಮತಿ ನೀಡಿದರು. ನಂತರ ಅದನ್ನೂ ನಿರ್ಬಂಧಿಸಿದರು. ಬೆಂಗಳೂರಿನ ಟೌನ್ ಹಾಲ್ ಎದುರು ಜನಸಾಮಾನ್ಯರು ಸೇರಿ ಪ್ರತಿಭಟನೆಗೆ ಅವಕಾಶ ದೊರಕಿತು. ಟೌನ್ ಹಾಲ್ ಅಂದರೆ ಪುರಭವನದ ಮುಂದಿನ ಪ್ರತಿಭಟನೆಯಲ್ಲಿ ನಾನೂ ಅನೇಕ ಸಲ ಭಾಗವಹಿಸಿದ್ದೇನೆ. ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೋಮುವಾದಿ ಪುಂಡರು ಕೆಡವಿದಾಗ ಲಂಕೇಶ್, ಗಿರೀಶ್ ಕಾರ್ನಾಡ್, ಶೂದ್ರ ಶ್ರೀನಿವಾಸ್ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟಿಸಿ ಬಂಧನಕ್ಕೆ ಒಳಗಾಗಿದ್ದೆವು. ಡಾ. ಎಂ.ಎಂ.ಕಲಬುರ್ಗಿಯವರ ಹತ್ಯೆಯಾದಾಗ, ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಹಂತಕರು ಗುಂಡಿಕ್ಕಿ ಕೊಂದಾಗ ಇಲ್ಲಿ ಭಾರೀ ಪ್ರತಿಭಟನೆ ಮಾಡಿದ್ದೆವು. ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಅನಂತ ಮೂರ್ತಿ ಸಿ.ಎಸ್.ದ್ವಾರಕಾನಾಥ್, ರವಿವರ್ಮ ಕುಮಾರ್, ದಿನೇಶ್ ಅಮಿನ್ ಮಟ್ಟು, ಜಿ.ರಾಮಕೃಷ್ಣ ಹೀಗೆ ಅನೇಕ ಚಿಂತಕರು ಪಾಲ್ಗೊಂಡು ಪ್ರತಿಭಟನೆ ದಾಖಲಿಸಿದ್ದರು.
ಸಂವಿಧಾನದ ಪ್ರಕಾರ, ಪ್ರತಿಭಟನೆ ಜನತಂತ್ರದ ಜೀವಾಳ. ಚಳವಳಿಜನಸಾಮಾನ್ಯರ ಮೂಲಭೂತ ಹಕ್ಕು. ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತದೆ ಎಂದು ಜನರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕಡಿವಾಣ ಹಾಕುವುದು ಸರಿಯಲ್ಲ. ಬೆಂಗಳೂರು ಸೇರಿ ರಾಜ್ಯದ ದೊಡ್ಡ ನಗರಗಳಲ್ಲಿ ವಾಹನ ಸಂಚಾರದ ದಟ್ಟಣೆ ನಡುವೆಯೂ ರಾಜಕೀಯ ಪಕ್ಷಗಳ ರಾಜಕೀಯ ನಾಯಕರ ಭಾರೀ ಮೆರವಣಿಗೆ, ಸಭೆಗಳಿಗೆ, ಅತಿ ಗಣ್ಯ ವ್ಯಕ್ತಿಗಳ ವಾಹನಗಳ ಸಂಚಾರಕ್ಕೆ, ಮದುವೆಯ ಮೆರವಣಿಗೆಗಳಿಗೆ ಅವಕಾಶ ನೀಡಲಾಗಿದೆ. ಇವುಗಳಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗುವುದಿಲ್ಲವೇ? ಇವುಗಳಿಗಿಲ್ಲದ ನಿರ್ಬಂಧ ಜನಸಾಮಾನ್ಯರ ಪ್ರತಿಭಟನೆಗಳಿಗೆ ಏಕೆ? ಪ್ರತಿಭಟನೆ ಮಾಡುವುದು ಸರಕಾರದ ಮತ್ತು ಪೊಲೀಸರ ದೃಷ್ಟಿಯಲ್ಲಿ ಅಪರಾಧವೇ? ಪ್ರತಿಭಟನೆ ನಡೆಸಬೇಕಾದ ಜಾಗದಲ್ಲಿ ಪ್ರತಿಭಟನೆ ನಡೆಸಿದರೆ ಅದಕ್ಕೊಂದು ಅರ್ಥವಿರುತ್ತದೆ. ಪ್ರತಿಭಟನೆ ಒಂದು ಉದ್ಯಾನಕ್ಕೆ ಸೀಮಿತಗೊಳಿಸುವುದು ಕೇವಲ ಕಾಟಾಚಾರದ ಕ್ರಮವಾಗುತ್ತದೆ. ರಾಜ್ಯದ ಜನರು ಕೇವಲ ತಮ್ಮ ಪಾಡಿಗೆ ತಾವು ಪ್ರತಿಭಟನೆ ಮಾಡಿ ಊರಿಗೆ ವಾಪಸ್ ಹೋಗಲು ಬಂದಿರುವುದಿಲ್ಲ. ಸರಕಾರದ ಕಿವಿಗೆ ತಮ್ಮ ಅಹವಾಲುಗಳನ್ನು ತಲುಪಿಸಲು ಬಂದಿರುತ್ತಾರೆ. ಪ್ರಭುತ್ವ ಪಂಚೇಂದ್ರಿಯಗಳನ್ನು ಕಳೆದು ಕೊಂಡಾಗ ಇಂಥ ಪ್ರತಿಭಟನೆ ಅನಿವಾರ್ಯವಾಗುತ್ತದೆ.
ಜನಸಾಮಾನ್ಯರ ಪ್ರತಿಭಟನೆಯ ಸ್ವಾತಂತ್ರವನ್ನು ದಮನ ಮಾಡುವ ಕರ್ನಾಟಕ ಸರಕಾರದ, ಪೊಲೀಸರ ಆದೇಶ ನ್ಯಾಯ ಸಮ್ಮತವಲ್ಲ. ಜನರ ಶಾಂತಿಯುತ ಪ್ರತಿಭಟನೆಯ, ವಾಕ್ ಸ್ವಾತಂತ್ರದ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ನ ಹಲವಾರು ತೀರ್ಪುಗಳಿಗೆ ಇದು ವ್ಯತಿರಿಕ್ತ ವಾಗಿದೆ. ಪ್ರತಿಭಟನೆಗೆ ಪೊಲೀಸರು ತಾವೇ ಒಂದು ಸ್ಥಳ ನಿಗದಿಪಡಿಸುವುದು ಸರಿಯಲ್ಲ. ನಾಗರಿಕರ ಚಲನವಲನಗಳನ್ನು ನಿರ್ಬಂಧಿ ಸುವುದು ಜನತಂತ್ರ ವಿರೋಧಿ ಕ್ರಮವಾಗುತ್ತದೆ.
ಬೆಂಗಳೂರಿಗೆ ದೂರದ ಊರುಗಳಿಂದ ಬುತ್ತಿ ಗಂಟುಗಳ ಜೊತೆಗೆ ತಮ್ಮ ಮನವಿಗಳನ್ನು ಹೊತ್ತು ಬರುವವರ ರೈಲು ಚಾರ್ಜ್ ಗೆ ಹಣವಿಲ್ಲದೇ ಕಷ್ಟಪಟ್ಟು ನಿದ್ದೆಗೆಟ್ಟು ಮಕ್ಕಳು ಮರಿಗಳನ್ನು ಹೊತ್ತುಕೊಂಡು ಬಂದಿರುತ್ತಾರೆ. ಸರಕಾರ ಈ ಜನರನ್ನು ಅತಿಥಿಗಳಂತೆ ಕಂಡು ಅವರ ಬೇಡಿಕೆಗಳಿಗೆ ಸ್ಪಂದಿಸ ಬೇಕು.ಅವರು ನಿಮ್ಮ ಬಂಗಲೆಗಳನ್ನು, ಕುರ್ಚಿಗಳನ್ನು, ಮಹಲುಗಳನ್ನು ಕೇಳುವುದಿಲ್ಲ. ಬದುಕಲು ಬೇಕಾದ ಕನಿಷ್ಠ ಅಗತ್ಯಗಳಿಗಾಗಿ ಮನವಿ ಸಲ್ಲಿಸಲು ಬಂದಿರುತ್ತಾರೆ. ಅಂಗನವಾಡಿ, ಬಿಸಿಯೂಟದ ತಾಯಂದಿರು ಇರಲಿ, ರೈತ ಕಾರ್ಮಿಕರರಿಲಿ, ನಾಗರಿಕ ಹಕ್ಕುಗಳ ಸಂಘಟನೆಗಳ ಕಾರ್ಯಕರ್ತರಾಗಿರಲಿ ಅವರ ಬೇಡಿಕೆಗಳನ್ನು ಸರಕಾರ ಸಹಾನುಭೂತಿಯಿಂದ ಆಲಿಸಬೇಕು.
ಕರ್ನಾಟಕದ ಹಿಂದಿನ ಸರಕಾರಗಳು ಹೇಗಿದ್ದವೆಂದು ವಿವರಿಸಬೇಕಾಗಿಲ್ಲ. ಆದರೆ, ಈಗಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ‘ಜನಪರ ಸರಕಾರ’ ಎಂದು ಹೆಸರಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿ ಚಳವಳಿಯಿಂದ ಬಂದವರು, ರೈತ ಆಂದೋಲನದಲ್ಲಿ ಗುರುತಿಸಿ ಕೊಂಡವರು. ದುಡಿಯುವ ಜನರನ್ನು ಜಾತಿ ಮತ್ತು ಕೋಮು ಆಧಾರದಲ್ಲಿ ವಿಭಜಿಸುವ ದುಷ್ಟ ಮತಾಂಧ ಶಕ್ತಿಗಳ ಎದುರು ಧ್ವನಿ ಎತ್ತಿದವರು.ಇವರು ಅಧಿಕಾರದಲ್ಲಿ ಇದ್ದಾಗಲಾದರೂ ಜನ ಪ್ರತಿಭಟನೆಯ ಮೇಲೆ ಸರಕಾರದ, ಪೊಲೀಸರ ನಿರ್ಬಂಧಗಳನ್ನು ರದ್ದುಗೊಳಿಸಲಿ.ಜನಸಾಮಾನ್ಯರು ಟೌನ್ ಹಾಲ್, ಕೆ.ಆರ್.ಸರ್ಕಲ್ ಸೇರಿ ಎಲ್ಲಿ ಬೇಕೆಂದಲ್ಲಿ ಪ್ರತಿಭಟನೆ, ಸಭೆಗಳನ್ನು ನಡೆಸಲು ಅವಕಾಶ ನೀಡಲಿ.
ಜನರ ಪ್ರತಿರೋಧ ಮತ್ತು ಪ್ರತಿಭಟನೆಯಿಂದ ಮಾತ್ರ ಜನತಂತ್ರದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಪ್ರಭುತ್ವ ತನ್ನ ಕರ್ತವ್ಯ ಪಾಲನೆ ಯಲ್ಲಿ ವಿಫಲಗೊಂಡಾಗ ಅದರ ಕಿವಿ ಹಿಂಡಿ ತಿಳಿ ಹೇಳಲು ಚಳವಳಿ ಮತ್ತು ಹೋರಾಟಗಳು ಬೇಕು. ಹಾಡಹಗಲೇ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡುವ ಮಣಿಪುರದ ದುರಂತ ನಮ್ಮ ಕಣ್ಣೆದುರಿಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕಾದ ಸರಕಾರ ಪಂಚೇಂದ್ರಿಯಗಳನ್ನು ಅದಾನಿ, ಅಂಬಾನಿಗಳಂಥ ಕಾರ್ಪೊರೇಟ್ ದಗಾಕೋರರಿಗೆ ಒತ್ತೆ ಇಟ್ಟಿದೆ. ಅದನ್ನು ತಡೆಯಬೇಕಾದ ವಿಶ್ವಗುರು ರಾಜಸ್ಥಾನದಲ್ಲೂ ಬೆತ್ತಲೆ ಮೆರವಣಿಗೆ ನಡೆದಿದೆ ಎಂದು ಹೊಣೆ ಹಾರಿಸಿಕೊಳ್ಳುತ್ತಿದ್ದಾರೆೆ. ಇಂಥ ಗಂಭೀರ ಸನ್ನಿವೇಶದಲ್ಲಿ ಜನತೆಯ ಸಂಘಟಿತ ಪ್ರತಿರೋಧ ಮತ್ತು ಪ್ರತಿಭಟನೆ ಮಾತ್ರ ಭಾರತದ ಪ್ರಜಾಪ್ರಭುತ್ವವನ್ನು ಕಾಪಾಡಬಲ್ಲದು.