ಚರಿತ್ರೆಯಿಂದ ಪಾಠ ಕಲಿಯದವರ ಕರಾಳ ಇತಿಹಾಸ

ಮಾನವ ಕುಲದ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತ ಹೊರಟಾಗ, ದುರಂತಗಳು ಮರುಕಳಿಸುತ್ತಲೇ ಇವೆ. ಭೂಮಿಯ ಮೇಲೆ ಹೇಗೆ ಬದುಕಬೇಕೆಂಬುದನ್ನು ಮನುಷ್ಯ ಕಲಿಯಲೇ ಇಲ್ಲ. ನಾಗರಿಕತೆ ವಿಸ್ತಾರಗೊಳ್ಳುತ್ತ ಹೊರಟಾಗಲು ಮನಸ್ಸು ಅರಳಲಿಲ್ಲ. ಮನುಷ್ಯ ಎಂಬ ಗುರುತು ಸಾಕಾಗದೆ ಯಾವುದೋ ಜಾತಿ, ಮತದ ಐಡಂಟಿಟಿಗೋಸ್ಕರ ಬೀದಿ ಕಾಳಗ ನಡೆಯುವ ಹಂತಕ್ಕೆ ನಾವೀಗ ಬಂದು ತಲುಪಿದ್ದೇವೆ. ಕಾರಣವಿಲ್ಲದ ಅಸಹನೆ, ಜನಾಂಗ ದ್ವೇಷ ತೀವ್ರವಾಗುತ್ತಲೇ ಇದೆ.
ಸಹಜೀವಿಗಳನ್ನು ಕಂಡರಾಗದ, ತಾನು ಹೇಳಿದಂತೆ ಕೇಳಬೇಕು, ತನ್ನಂತೆ ಬದುಕಬೇಕು, ಭಿನ್ನತೆ ಇರಕೂಡದು ಎಂದು ತೋಳೇರಿಸಿ ನಿಂತವರ ನಡುವೆ ಜೀವ ಮಿಡಿತದ ಸದ್ದು ಕೇಳುತ್ತಲೇ ಇಲ್ಲ. ಈ ಹಿನ್ನೆಲೆಯಲ್ಲಿ ಫ್ಯಾಶಿಸ್ಟ್ ಮತ್ತು ಫ್ಯಾಶಿಸಮ್ ಎಂಬ ಪದಗಳು ಈಗ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿವೆ.
ಜರ್ಮನಿ ಹಾಗೂ ಇಟಲಿಯಂಥ ದೇಶಗಳಲ್ಲಿ ಈ ಶಬ್ದ ಕೇಳಿದರೆ ಜನ ಬೆಚ್ಚಿ ಬೀಳುತ್ತಾರೆ. ನಿದ್ರೆಯಲ್ಲೂ ನಡುಗುತ್ತಾರೆ. ಆದರೆ, ನಮ್ಮ ದೇಶದಲ್ಲಿ ಈಗ ಅನೇಕರು ಅದರಲ್ಲೂ ಯುವಕರು ಅದರ ಅಮಲೇರಿಸಿಕೊಂಡು ಕುಣಿಯುತ್ತಿದ್ದಾರೆ. ಇದರಲ್ಲಿ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳ ಪಾತ್ರ ದೊಡ್ಡದು. ಪುಸ್ತಕ ಓದುವುದು ನಿಂತೇ ಹೋಗಿದೆ. ವಿವೇಕ ಮಾಯವಾಗಿದೆ. ಏಕ ರಾಷ್ಟ್ರ, ಏಕ ಧರ್ಮ, ಏಕ ಸಂಸ್ಕೃತಿ, ಏಕ ಪಕ್ಷ, ಏಕ ನಾಯಕ (ಏಕ ಜಾತಿ ಮಾತ್ರ ಇಲ್ಲ) ಎಂಬ ಹುಚ್ಚು ಹಿಡಿದಿದೆ. ಇದು ವಿವಿಧ ಸಂಸ್ಕೃತಿಗಳ, ಭಾಷೆಗಳ ವಿಶಿಷ್ಟ ನೆಲ ಎಂದು ಹೇಳಿದರೂ ಮತ್ತೇರಿಸಿಕೊಂಡವರಿಗೆ ಅರ್ಥವಾಗುವುದಿಲ್ಲ.
ಯಾವುದೇ ದೇಶವೊಂದರಲ್ಲಿ ಆರ್ಥಿಕತೆ ಕುಸಿದಾಗ, ವ್ಯವಸ್ಥೆ ದಿಕ್ಕು ತಪ್ಪಿದಾಗ ಕಾನೂನು ದುರ್ಬಲವಾದಾಗ, ಜನ ಸಾಮಾನ್ಯರು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದಾಗ, ಫ್ಯಾಶಿಸ್ಟ್ ಮನಸ್ಥಿತಿ ಅವತರಿಸುತ್ತದೆ. ಕ್ರಮೇಣ ಆ ಮನಸ್ಥಿತಿ ಸಂಘಟಿತ ರೂಪ ಪಡೆಯುತ್ತದೆ. ನಿರ್ದಿಷ್ಟ ಜನ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದಾಳಿ, ಹಲ್ಲೆ, ದ್ವೇಷ ಆರಂಭವಾಗುತ್ತವೆ. ಸದ್ಯದ ಸಮಸ್ಯೆಗಳಿಗೆ ಒಂದು ಸಮುದಾಯವೇ ಕಾರಣ ಎಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಒಂದೇ ದೇಶದ ಪ್ರಜೆಗಳಲ್ಲಿ ಅಪನಂಬಿಕೆಯ ಗೋಡೆ ಎದ್ದು ನಿಲ್ಲುತ್ತದೆ. ಕ್ರಮೇಣ ಅದು ದ್ವೇಷವಾಗಿ ರೂಪಾಂತರಗೊಳ್ಳುತ್ತದೆ. ಹಿಂದೆ ಜರ್ಮನಿ, ಇಟಲಿಗಳಲ್ಲಿ ಕಾಣಿಸಿಕೊಂಡ ಈ ವ್ಯಾಧಿ ಈಗ ಭಾರತದಲ್ಲಿ ವ್ಯಾಪಿಸತೊಡಗಿದೆ.
ಇದು ಒಂದು ದೇಶದ ಕತೆಯಲ್ಲ, ದೇಶದಲ್ಲಿ ಆಳುವ ವರ್ಗ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಧರ್ಮದ ಆಧಾರದಲ್ಲಿ , ಜನಾಂಗ ದ್ವೇಷದ ಆಧಾರದಲ್ಲಿ ಬಹುಸಂಖ್ಯಾತ ಸಮುದಾಯಗಳನ್ನು ಒಂದುಗೂಡಿಸಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿಗೆ ಪ್ರಚೋದನೆ ನೀಡಲಾಗುತ್ತದೆ. ಕಳೆದ ಶತಮಾನದ ಎರಡನೇ ದಶಕದಲ್ಲಿ ಜರ್ಮನಿಯಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡು ನಿರುದ್ಯೋಗ ಮಿತಿ ಮೀರಿದಾಗ ಜನಾಕ್ರೋಶದ ದಿಕ್ಕನ್ನು ತಿರುಗಿಸಲು ಆಳುವ ವರ್ಗಗಳು ನಾಝಿ ಪಾರ್ಟಿಯನ್ನು ಕಟ್ಟಿ ಹಿಟ್ಲರ್ ಎಂಬ ಸರ್ವಾಧಿಕಾರಿಯನ್ನು ಸೃಷ್ಟಿಸಿದವು. ಜರ್ಮನಿಯ ಸಮಸ್ಯೆಗಳಿಗೆಲ್ಲ ಅಲ್ಪಸಂಖ್ಯಾತ ಯಹೂದಿಗಳೇ ಕಾರಣವೆಂದು ಕತೆ ಕಟ್ಟಿ ಸುಳ್ಳು ಪ್ರಚಾರ ಮಾಡಿ ಜರ್ಮನಿಯ ಜನಸಾಮಾನ್ಯರನ್ನು ಯಹೂದಿಗಳ ವಿರುದ್ಧ ಎತ್ತಿ ಕಟ್ಟಿದವು. ಅಲ್ಲಿ ನಡೆದ ಯಹೂದಿಗಳ ರಕ್ತಪಾತ, ಹಿಟ್ಲರ್ ನಿರ್ಮಿಸಿದ ಗ್ಯಾಸ್ ಚೇಂಬರ್, ಕಾನ್ಸೆಂಟ್ರೇಶನ್ ಕ್ಯಾಂಪ್‌ಗಳು ಚರಿತೆಯಲ್ಲಿ ಕಪ್ಪುಕಲೆಯಾಗಿ ಉಳಿದಿವೆ.
ಅದೇ ಕಾಲಘಟ್ಟದಲ್ಲಿ ಇಟಲಿಯಲ್ಲಿ ಶೋಷಕ ವರ್ಗಗಳು ಫ್ಯಾಶಿಸ್ಟ್ ಪಾರ್ಟಿಯನ್ನು ಹುಟ್ಟು ಹಾಕಿ ಮುಸ್ಸೋಲಿನಿ ಎಂಬ ನರಹಂತಕನನ್ನು ಸೃಷ್ಟಿಸಿದವು. ಆತನೂ ತನ್ನ ಪ್ರಜೆಗಳ ಜೀವ ಹಿಂಡಿದ. ಅಂಟೋನಿಯಾ ಗ್ರಾಮ್ಶಿಯಂಥ ಕಮ್ಯುನಿಸ್ಟ್ ಚಿಂತಕನನ್ನು ಜೈಲಿಗೆ ಹಾಕಿ ಹಿಂಸಿಸಿದ. ಗೋಳ್ವಾಲ್ಕರ್ ಅವರು ಇಂಥ ಹಿಟ್ಲರ್, ಮುಸ್ಸೋಲಿನಿಯನ್ನು ಹಾಡಿ ಹೊಗಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರೆಸ್ಸೆಸ್‌ಸ್ಥಾಪನೆಯಾಗುವ ಮುನ್ನ ಅದರ ಸಂಸ್ಥಾಪಕ ಹೆಗಡೆವಾರ್ ಅವರು ಡಾ. ಮೂಂಜೆ ಅವರನ್ನು ಇಟಲಿಗೆ ಕಳಿಸಿದ್ದರು. ಮೂಂಜೆ ಅಲ್ಲಿ ಮುಸ್ಸೋಲಿನಿಯನ್ನು ಭೇಟಿ ಮಾಡಿ ಅವನ ಫ್ಯಾಶಿಸ್ಟ್ ಪಾರ್ಟಿಯ ಧೇಯ, ಕಾರ್ಯಕ್ರಮಗಳನ್ನು ಎರವಲು ಪಡೆದು ಭಾರತಕ್ಕೆ ಬಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಲು ನೆರವಾದರು.
ಭಾರತದ ಸಂದರ್ಭದಲ್ಲಿ ಫ್ಯಾಶಿಸಮ್‌ಗೆ ಮನುವಾದದ ಸ್ಪರ್ಶವೂ ದೊರೆತು ಇಲ್ಲಿ ತನ್ನದೇ ಆದ ರೀತಿಯಲ್ಲಿ ನೆಲೆಗೊಂಡಿದ್ದು ಪ್ರತ್ಯೇಕ ಇತಿಹಾಸ. ಫ್ಯಾಶಿಸಮ್ ಇತಿಹಾಸವನ್ನು ಒಂದು ಪುಟ್ಟ ಅಂಕಣ ಬರಹದಲ್ಲಿ ವಿವರವಾಗಿ ಬರೆಯಲು ಆಗುವುದಿಲ್ಲ. ಒಟ್ಟಾರೆ ನಮ್ಮ ದೇಶದಲ್ಲಿ ಅದೀಗ ಭಯಾನಕ ಸ್ವರೂಪ ತಾಳಿ ನಿಂತಿದೆ. ಜರ್ಮನಿಯ ಕಾರ್ಮಿಕ ವರ್ಗದಂತೆ ಭಾರತದ ಸಂಘಟಿತ ಕಾರ್ಮಿಕ ವರ್ಗವೂ ತಿಳಿದೋ ತಿಳಿಯದೆಯೋ ಅದಕ್ಕೆ ಮಾರು ಹೋಗಿರುವ ಭೀತಿ ಎದುರಾಗಿದೆ.
ಹೆಸರಾಂತ ಎಡಪಂಥೀಯ ಚಿಂತಕ ಡಿಮಿಟ್ರೋವ ಹೇಳಿದಂತೆ, ‘ಫ್ಯಾಶಿಸಮ್ ಜನರ ಮುಂದೆ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ವೇಷ ಹಾಕಿಕೊಂಡು ಬರುತ್ತದೆ. ಆದರೆ, ಅತ್ಯಂತ ಭ್ರಷ್ಟ ಆಡಳಿತವನ್ನು ನೀಡುತ್ತದೆ. ಜನ ಅದನ್ನು ಪ್ರಶ್ನಿಸದಂತೆ ಜನಾಂಗೀಯ ದ್ವೇಷದ ಸಂಘರ್ಷದಲ್ಲಿ ಅವರನ್ನು ತೊಡಗಿಸುತ್ತದೆ. ಕಾರ್ಮಿಕ ವರ್ಗದ ಒಂದು ವಿಭಾಗವೂ ಅದರ ಬಲೆಗೆ ಬೀಳುತ್ತದೆ’.
ಈಗ ಭಾರತದ ಚಿತ್ರಣವನ್ನು ಕಣ್ಣ ಮುಂದೆ ತಂದುಕೊಂಡಾಗ ಡಿಮಿಟ್ರೋವ ಮಾತು ಮತ್ತೆ, ಮತ್ತೆ ನೆನಪಾಗುತ್ತದೆ. ತಾನು ಇತರ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಳ್ಳುತ್ತ, ಗಾಂಧಿ, ನೆಹರೂ ಅವರಂಥ ರಾಷ್ಟ್ರೀಯ ನಾಯಕರ ತೇಜೋವಧೆ ಮಾಡುತ್ತ ಹೊಸ ಪೀಳಿಗೆಯ ಹುಡುಗರ ತಲೆಯಲ್ಲಿ ಜನಾಂಗೀಯ ದ್ವೇಷದ ವಿಷ ತುಂಬುತ್ತ, ಮೋದಿ ಒಬ್ಬರಿಂದ ಈ ದೇಶ ಉದ್ಧಾರ ವಾಗುತ್ತದೆ ಎಂಬ ಹುಸಿ ಭ್ರಮೆಯನ್ನು ತುಂಬಲಾಗಿದೆ
ಆದರೆ, ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ. ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಕೈಗಾರಿಕೆಗಳು ಒಂದೊಂದಾಗಿ ಮುಚ್ಚಿ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಹೂಡಿಕೆ ನಿಂತು ಹೋಗಿದೆ ಎಂಬುದು ದೇಶದ ಪ್ರಮುಖ ಉದ್ಯಮಪತಿಗಳ ಆತಂಕವಾಗಿದೆ.
ನೋಟು ಅಮಾನ್ಯೀಕರಣದಿಂದ ಸಣ್ಣ ಕೈಗಾರಿಕೆಗಳು ಹಾಳಾಗಿವೆ. ಇದನ್ನೆಲ್ಲ ಮುಚ್ಚಿಕೊಳ್ಳಲು ಏಕ ರಾಷ್ಟ್ರ, ಏಕ ನಾಯಕ, ನಮೋ ಭಜನೆ ನಡೆದಿದೆ.
ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗಿದೆ. ಉದ್ಯಮಪತಿಗಳು ಮಾಡಿದ ಸಾಲವನ್ನು ಸರಕಾರ ಮನ್ನಾ ಮಾಡುತ್ತಲೇ ಇದೆ. ಈವರೆಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ರಿಸರ್ವ್ ಬ್ಯಾಂಕ್‌ನ ಮೀಸಲು ನಿಧಿಗೂ ಸರಕಾರ ಕೈ ಹಾಕಲು ಹೊರಟಿದೆ. ಬಿಎಸೆನ್ನೆಲ್ ಸೇರಿದಂತೆ ಸರಕಾರದ ಅಂದರೆ ಸಾರ್ವಜನಿಕ ರಂಗದ ಉದ್ಯಮಗಳು ಒಂದೊಂದಾಗಿ ಮುಚ್ಚುತ್ತಿವೆ. ಆಟೊಮೊಬೈಲ್ ಉದ್ಯಮ ಬಾಗಿಲು ಹಾಕಿ 3 ಲಕ್ಷ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಕಿವಿಯ ಮೇಲೆ ಹೂ ಇಡುವಂತೆ ಭರವಸೆ ಹುಸಿಯಾಗಿದೆ. ದೇಶದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ರಂಗ ಕುಸಿಯುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಮರೆಮಾಚಲು ಆಳುವ ವರ್ಗಕ್ಕೆ ಈಗ ಭಾವನಾತ್ಮಕ ವಿಷಯಗಳು ಬೇಕು. ಅದಕ್ಕಾಗಿ ಧರ್ಮೋನ್ಮಾದ, ಯುದ್ಧೋನ್ಮಾದ, ದ್ವೇಷೋನ್ಮಾದದ ಮಡುವಿಗೆ ದೇಶವನ್ನು ತಳ್ಳುವ ಮಸಲತ್ತು ನಡೆದಿದೆ. ಕೆಂಪು ಕೋಟೆಯ ಮೇಲೆ ನಿಂತು ಮಾಡುವ ಭಾಷಣಗಳು ಈ ಸಮಸ್ಯೆಗಳಿಗೆ ಪರಿಹಾರವಲ್ಲ,ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರನೂ ಇದೇ ರೀತಿ ರೊಚ್ಚಿಗೆಬ್ಬಿಸುವ ಭಾಷಣ ಮಾಡುತ್ತಿದ್ದ. ಕೊನೆಗೆ ಏನಾದ, ಜರ್ಮನಿ ಏನಾಯಿತು ಎಂದು ಚರಿತ್ರೆ ಓದಿದ ಎಲ್ಲರಿಗೂ ಗೊತ್ತಿದೆ.
ಫ್ಯಾಶಿಸಮ್ ನಾನಾ ರೀತಿಗಳಲ್ಲಿ, ನಾನಾ ವೇಷಗಳಲ್ಲಿ ನಾನಾ ದೇಶಗಳಲ್ಲಿ ವಕ್ಕರಿಸುತ್ತದೆ. ಇದೊಂದು ರೋಗ. ಇದರ ಅಪಾಯವನ್ನು ಅರಿತ ಜರ್ಮನಿಯ ಜನ ಅದನ್ನು ದೂರವಿಟ್ಟಿದ್ದಾರೆ. ಭಾರತದ ಜನ ಅದರ ಬಲೆಗೆ ಬಿದ್ದಿದ್ದಾರೆ.
ಕಳೆದ ಶತಮಾನದಲ್ಲಿ ಜರ್ಮನಿಯ ಜನ ದೇಶದ ಎಲ್ಲ ಸಮಸ್ಯೆಗಳಿಗೆ ಹಿಟ್ಲರ್ ಪರಿಹಾರ ಎಂದು ನಂಬಿ ಮೋಸ ಹೋದರು. ಇಟಲಿಯ ಜನ ಮುಸ್ಸೋಲಿನಿಯನ್ನು ನಂಬಿ ಕೊನೆಗೆ ಗೊತ್ತಾಗಿ ತಕ್ಕ ಪಾಠ ಕಲಿಸಿದರು. ಈಗ ಭಾರತದ ಜನ ಎಲ್ಲ ಸಮಸ್ಯೆಗಳಿಗೆ ಒಬ್ಬ ವ್ಯಕ್ತಿಯಲ್ಲಿ ಪರಿಹಾರ ಹುಡುಕುತ್ತಿದ್ದಾರೆ. ಚರಿತ್ರೆಯಿಂದ ಪಾಠ ಕಲಿಯದವರು ಭಾರೀ ಬೆಲೆ ತೆರಲೇಬೇಕಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಇರುತ್ತದೆ.