ಶಿಸ್ತಿನ ಪಕ್ಷದ ಅಧೋಗತಿ
ದೇಶದ ಉಳಿದೆಲ್ಲ ಪಕ್ಷಗಳಿಗಿಂತ ತಮ್ಮದು ಭಿನ್ನ ಪಕ್ಷ, ಕಾಂಗ್ರೆಸ್ ಸಂಸ್ಕೃತಿ ನಮ್ಮದಲ್ಲ ಎಂದು ಬಿಜೆಪಿ ನಾಯಕರು ಆಗಾಗ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ವೇದಿಕೆಯಾದ ಬಿಜೆಪಿ ಕಾರ್ಯಕರ್ತರು ಸಂಘದಲ್ಲಿ ನಿತ್ಯ ಶಾಖೆಗೆ ಹೋಗಿ ಕವಾಯತು ಜೊತೆಗೆ ಜನ ವಿಭಜಕ ಸಿದ್ಧಾಂತವನ್ನು ಮೈ ಗೂಡಿಸಿಕೊಂಡವರು. ರಾಷ್ಟ್ರೀಯ ಪಕ್ಷವೆಂದು ಕರೆದುಕೊಳ್ಳುವ ಅದು ಚುನಾವಣೆಯ ಮೂಲಕ ಕೇಂದ್ರದಲ್ಲಿ ಇತರ ಪ್ರಾದೇಶಿಕ ಪಕ್ಷಗಳ ನೆರವಿನಿಂದ ಅಧಿಕಾರಕ್ಕೆ ಬಂದಿದ್ದರೂ ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಜನಪರವಾದ ಅಭಿವೃದ್ಧಿ ಯೋಜನೆಯನ್ನು ರೂಪಿಸದೇ ಕೋಮುದ್ವೇಷವನ್ನೇ ಕೆರಳಿಸುತ್ತ, ಅದರಲ್ಲೂ ಮುಸ್ಲಿಮ್ ಸಮುದಾಯದ ವಿರುದ್ಧ ಬಹುಸಂಖ್ಯಾತ ಹಿಂದೂಗಳನ್ನು ಎತ್ತಿ ಕಟ್ಟುತ್ತ, ಅದನ್ನೇ ರಾಜಕೀಯ ಅನುಕೂಲ ಮತ್ತು ಅಧಿಕಾರಕ್ಕೆ ಬಳಸಿಕೊಂಡಿದೆ. ಆದರೆ ಕರ್ನಾಟಕದ ರಾಜಕೀಯದ ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಈ ಶಿಸ್ತಿನ ಪಕ್ಷದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಅಧಿಕಾರ ರಾಜಕೀಯವನ್ನು ಅಪ್ಪಿಕೊಂಡ, ಅದರಿಂದ ಸಕಲ ಸುಖ ಸಂಪತ್ತನ್ನು ಗಳಿಸುವ ಚಾಳಿಗೆ ಬಿದ್ದ ಯಾವುದೇ ರಾಜಕೀಯ ಪಕ್ಷದಲ್ಲಿ ಅಶಿಸ್ತು ಸಾಮಾನ್ಯ ಸಂಗತಿ. ಆದರೆ, ಬಿಜೆಪಿಯನ್ನು ಸದಾ ನಿಯಂತ್ರಿಸುತ್ತ ಬಂದ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರಕ್ಕೆ ಕರ್ನಾಟಕದ ಬಿಜೆಪಿಯ ಬೀದಿಗೆ ಬಂದ ಕಿತ್ತಾಟವನ್ನು ನಿಯಂತ್ರಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಅಥವಾ ಈ ಕಿತ್ತಾಟದ ಹಿಂದೆ ಅದರ ಕೈವಾಡವೂ ಇದೆಯಾ ಎಂಬುದು ಗೊತ್ತಾಗುತ್ತಿಲ್ಲ. ಅಶಿಸ್ತಿನ ಪಕ್ಷ ಎಂದು ಬಿಜೆಪಿಯು ಟೀಕಿಸುವ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಪಕ್ಷದ ಆಂತರಿಕ ವಿದ್ಯಮಾನಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಬಿಜೆಪಿಯ ನಾಗಪುರ ಹೈ ಕಮಾಂಡ್‌ಗೆ ಕರ್ನಾಟಕದ ಬಿಜೆಪಿಯೊಳಗಿನ ಬಿಕ್ಕಟ್ಟನ್ನು ಬಗೆಹರಿಸಲು ಯಾಕೆ ಸಾಧ್ಯವಾಗುತ್ತಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿಗಳು ಒಂದು ತಿಂಗಳ ಕಾಲ ಇಲ್ಲೇ ತಳ ಊರಿ ನಾಡಿನ ಮೂಲೆಮೂಲೆಗಳಿಗೆ ಸುಳ್ಳಿನ ರೈಲು ಬಿಡುತ್ತ ಓಡಾಡಿದರೂ ಬಿಜೆಪಿಯನ್ನು ಕರ್ನಾಟಕದ ಜನರು ತಿರಸ್ಕರಿಸಿದರು. ಜನಾದೇಶವನ್ನು ಒಪ್ಪಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಸೋತವರು ಮತ್ತು ಗೆದ್ದವರ ಇಬ್ಬರ ಕರ್ತವ್ಯ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಜನತೆ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಲೇ ಇಲ್ಲ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜನಾದೇಶದ ವಿರುದ್ಧ ಚಳವಳಿ ಎಂಬ ಪ್ರಹಸನವನ್ನು ನಡೆಸಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವವರೆಗೆ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಖಾತ್ರಿ ಮಾಡಿಕೊಂಡ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಲ್ಲ ಕುತಂತ್ರಗಳನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವರು ಮೊರೆ ಹೋಗಿದ್ದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳೆಂಬ ತನಿಖಾ ಸಂಸ್ಥೆಗಳನ್ನು.
ಮಾಧ್ಯಮಗಳಿಗೆ ಇಷ್ಟೇ ಬೇಕಾಗಿತ್ತು. ಬೀದಿಗೆ ಬಂದ ಬಿಜೆಪಿಯ ರಾಜ್ಯ ನಾಯಕರ ಕಚ್ಚಾಟವನ್ನು ಮುಚ್ಚಿಟ್ಟು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಯಾರು ಮುಖ್ಯಮಂತ್ರಿ ಯಾಗಬೇಕೆಂಬ ಬಗ್ಗೆ ಕಿತ್ತಾಟಗಳಿವೆ ವದಂತಿಗಳನ್ನು ಉದ್ದೇಶ ಪೂರ್ವಕವಾಗಿ ಹರಡಲಾಯಿತು. ಆದರೆ, ಅಂತಿಮವಾಗಿ ಕಾಂಗ್ರೆಸ್ ಹೈ ಕಮಾಂಡ್ ಕೈಗೊಳ್ಳುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಶಾಸಕರು ಒಪ್ಪಿದರು.
ಇಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಪರಸ್ಪರ ಕಿತ್ತಾಟ ನಡೆಸುತ್ತಿರುವಾಗಲೇ ಮಾಜಿ ಪ್ರಧಾನಿ ಎಚ್.ಡಿ. ಕುಮಾರಸ್ವಾಮಿ ದಿಲ್ಲಿಗೆ ಹಾರಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಗುಟ್ಟಾಗಿ ಭೇಟಿ ಮಾಡಿದರು. ಈ ಹಿನ್ನೆಲೆಯಲ್ಲಿ ಸದಾ ಕಿತ್ತಾಟದಲ್ಲಿ ತೊಡಗಿರುವ ಕರ್ನಾಟಕದ ಬಿಜೆಪಿ ನಾಯಕರನ್ನು ಕಡೆಗಣಿಸಿ, ಕುಮಾರಸ್ವಾಮಿಯವರ ಜೊತೆಗೆ ಮೋದಿ, ಶಾ ರಹಸ್ಯ ಮಾತುಕತೆ ನಡೆಸಿದರು. ಪರಿಣಾಮವಾಗಿ ಹೇಗಾದರೂ ಮಾಡಿ ನಿಚ್ಚಳ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವನ್ನು ಆಪರೇಷನ್ ಕಮಲ ಮೂಲಕ ಕೆಡವಿ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸರಕಾರ ತರುವ ತಂತ್ರ, ಕುತಂತ್ರ ನಡೆಯತೊಡಗಿತು. ಅಧಿಕಾರ ರಾಜಕಾರಣ ಎಂಬುದು ತಮ್ಮ ಮನೆತನದ ಆಸ್ತಿ ಎಂದು ತನ್ನ ಮಗನನ್ನು ಚನ್ನಪಟ್ಟಣದಲ್ಲಿ ಚುನಾವಣಾ ಕಣಕ್ಕೆ ಇಳಿಸಿದರು. ಆದರೆ ಚನ್ನಪಟ್ಟಣದ ಜನತೆ ಕುಮಾರ ಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನಲವತ್ತು ವರ್ಷಗಳಿಂದ ರಾಜ್ಯದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಸದಾ ಒಂದಿಲ್ಲೊಂದು ಅಧಿಕಾರದಲ್ಲಿದ್ದರೂ ಅವರ ಹೆಸರಿಗೆ ಎಂದೂ ಹೊಲಸನ್ನು ಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಸಿದ್ದರಾಮಯ್ಯನವರು ಅಧಿಕಾರ ರಾಜಕೀಯಕ್ಕೆ ಬರುವ ಮುಂಚೆ ಚಳವಳಿಯ ರಾಜಕಾರಣದಲ್ಲಿ ಇದ್ದವರು. ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರ ನೇತೃತ್ವದಲ್ಲಿ ಸಮಾಜವಾದಿ ಯುವಜನ ಸಭಾದಲ್ಲಿ ತೊಡಗಿಸಿಕೊಂಡವರು. ಇವತ್ತಿನ ರಾಜಕಾರಣಿಗಳು ಜುಜುಬಿ ನಗರ ಪಾಲಿಕೆ ಸದಸ್ಯರಾದರೂ. ಕೋಟಿಗಟ್ಟಲೇ ಲಪಟಾಯಿಸಿ ತಮ್ಮದೇ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಸಕ್ಕರೆ ಕಾರ್ಖಾನೆಗಳನ್ನು ಮಾಡಿಕೊಂಡವರು. ಆದರೆ ಸಿದ್ದರಾಮಯ್ಯನವರು ಯಾವುದೇ ಆಸ್ತಿಪಾಸ್ತಿಗಳನ್ನು ಮಾಡಿಕೊಂಡಿಲ್ಲ. ಇದು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ನಾಯಕರಿಗೂ ಗೊತ್ತು. ಕರ್ನಾಟಕದ ಹಳ್ಳಿಗಳಲ್ಲಿ ಸಿದ್ದರಾಮಯ್ಯನವರ ಬಗ್ಗೆ ಸಾಮಾನ್ಯ ಜನರು ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಪ್ರತೀ ಚುನಾವಣೆ ಬಂದಾಗ, ದೂರದ ಚಿಕ್ಕೋಡಿ, ಅಥಣಿ, ಹುಕ್ಕೇರಿ ಮುಂತಾದ ಊರುಗಳ ಹಿಂದುಳಿದ ಸಮುದಾಯಗಳ ಮುಗ್ಧ ಜನರು, ಅದರಲ್ಲೂ ಹಾಲುಮತ ಸಮುದಾಯದ ಜನ ಕಂಬಳಿಯಲ್ಲಿ ಒಂದಿಷ್ಟು ಗಳಿಕೆಯ ಹಣವನ್ನು ಸಿದ್ದರಾಮಯ್ಯನವರ ಕೈಗೆ ಕೊಟ್ಟು ಗೆದ್ದು ಬರ್ರಿ ಎಂದು ಹಾರೈಸಿ ತಮ್ಮ ಊರಿಗೆ ವಾಪಸಾಗುವುದನ್ನು ಕಣ್ಣಾರೆ ಕಂಡಿದ್ದೇನೆ. ಇಂಥ ಅಪರೂಪದ ಮುತ್ಸದ್ದಿಯ ವಿರುದ್ಧ ಬಳ್ಳಾರಿ ಗಣಿಗಾರಿಕೆಯಲ್ಲಿ ಕೋಟಿ ಕೋಟಿ ಮಾಡಿಕೊಂಡವರು, ರಿಯಲ್ ಎಸ್ಟೇಟ್ ದಗಾಕೋರರು ಆಡುವ ಹಗುರ ಮಾತುಗಳನ್ನು ಜನಸಾಮಾನ್ಯರು ನಂಬುವುದಿಲ್ಲ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ನವರನ್ನು ಸಿಲುಕಿಸಿದ ನಂತರ ಬಿಜೆಪಿಯ ಜೈಲಿಗೆ ಹೋಗಿಬಂದವರು, ಮುಖ್ಯಮಂತ್ರಿಗಳ ನಕಲಿ ಸಹಿ ಮಾಡಿ ಸಿಕ್ಕಿಬಿದ್ದವರು ತುಂಬಾ ಹಗುರಾಗಿ ಮಾತಾಡುತ್ತಿದ್ದಾರೆ. ಮುಡಾ ಪ್ರಕರಣದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಮಸಲತ್ತು ನಡೆಯುತ್ತಲೇ ಇವೆ. ಆದರೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಕಾಂಗ್ರೆಸ್ ಹೈ ಕಮಾಂಡ್ ಕೂಡ ಸಿದ್ದರಾಮಯ್ಯನವರ ಜೊತೆಗೆ ನಿಂತಿದೆ. ಆದರೂ ಸುಳ್ಳು ಹೇಳುವ ಫ್ಯಾಶಿಸ್ಟ್ ಶಕ್ತಿಗಳು ನಿರಂತರ ಅಪಪ್ರಚಾರವನ್ನು ನಡೆಸಿವೆ.
ಇಂಥ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ರಾಜೀನಾಮೆ ಒತ್ತಾಯಿಸುವುದು ಸಹಜ. ಆದರೆ ಕಾಂಗ್ರೆಸ್ ಶಾಸಕರು ಹಾಗೂ ಮಂತ್ರಿಗಳು ನಿರೀಕ್ಷಿದಷ್ಟು ನೆರವನ್ನು ಕೊಡಲಿಲ್ಲ. ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಕೆಲವು ಮಂತ್ರಿಗಳು ಹಾಗೂ ಶಾಸಕರು ರಾಜ್ಯದ ಮುಖ್ಯಮಂತ್ರಿ ಯಾಗಲು ಟವೆಲ್ ಹಾಸಿ ಕಾಯುತ್ತಿರುವುದು ಸರಿಯಲ್ಲ. ದೇಶಪಾಂಡೆ ಅವರಂಥ ಹಿರಿಯರು ಈ ಇಳಿ ವಯಸ್ಸಿನಲ್ಲೂ ಸಿದ್ದರಾಮಯ್ಯನವರ ನಂತರ ತಾನು ಮುಖ್ಯಮಂತ್ರಿ ಆಗುವ ಸ್ಥಾನದ ಆಕಾಂಕ್ಷೆ ಇಟ್ಟುಕೊಂಡು ಲಾಬಿ ನಡೆಸಿದ್ದಾರೆ. ಕಾಂಗ್ರೆಸ್ ಸುರಕ್ಷಿತವಾಗಿ ಉಳಿಯಬೇಕಂದರೆ, ಇಂಥವರಿಗೆ ಎಂದೂ ಅವಕಾಶ ನೀಡಬಾರದು.