ಕುಂಟುತ್ತ ಸಾಗಿದ ಪ್ರತಿಪಕ್ಷ ಒಕ್ಕೂಟ
Photo:PTI
ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಂತರ ಬಿಜೆಪಿಗೆ ಹೊಸ ಚೈತನ್ಯ ಬಂದಂತಾಗಿದೆ. ಕಳೆದ ಒಂಭತ್ತು ವರ್ಷಗಳ ಆಡಳಿತದ ಸಾಧನೆಗಿಂತ ಮತ್ತು ವೈಫಲ್ಯಗಳ ಪರಿಣಾಮವಾಗಿ ಕುಸಿದಿದ್ದ ಆಳುವ ಪಕ್ಷದ ಆತ್ಮಸ್ಥೈರ್ಯ ಈ ಒಂದೆರಡು ವಾರಗಳಲ್ಲಿ ಮತ್ತೆ ಚಿಗುರೊಡೆಯತೊಡಗಿದೆ. ದೇವರು, ಧರ್ಮ, ಜಾತಿಗಳಂಥ ಭಾವನಾತ್ಮಕ ವಿಷಯಗಳೇ, ಆರ್ಥಿಕ, ಸಾಮಾಜಿಕ ಅಂಶಗಳಿಗಿಂತ ಹೆಚ್ಚು ಪ್ರಭಾವ ಬೀರುವ ಭಾರತದಲ್ಲಿ ಈ ನಿರಂಕುಶ ಚೈತ್ರ ಯಾತ್ರೆ ಗೆ ಕಡಿವಾಣ ಹಾಕಬೇಕೆಂದರೆ ಬಿಜೆಪಿಯನ್ನು ವಿರೋಧಿಸುವ ಪ್ರತಿಪಕ್ಷ ಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಾದರೂ ಹೊಂದಾಣಿಕೆ ಮಾಡಿಕೊಂಡು ಒಂದಾಗಬೇಕು. ಆದರೆ, ಅದು ಸಾಧ್ಯವಾಗುವ ಸೂಚನೆಗಳು ಗೋಚರಿಸುತ್ತಿಲ್ಲ. ಬಹುತೇಕ ವಿಫಲಗೊಳ್ಳುವ ಬೆಳವಣಿಗೆಗಳು ನಡೆಯುತ್ತಿವೆ.
ಪ್ರತಿಪಕ್ಷಗಳು ಒಂದು ಗೂಡಿ ಕಟ್ಟಿಕೊಂಡ ‘ಇಂಡಿಯಾ’ ಎಂಬ ಒಕ್ಕೂಟ ಅಸ್ತಿತ್ವಕ್ಕೆ ಬಂದು ಏಳು ತಿಂಗಳ ಮೇಲಾಯಿತು.ಇನ್ನು ಮೂರು ತಿಂಗಳಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗುವ ನಿರ್ಣಾಯಕ ಸಂದರ್ಭದಲ್ಲೂ ಯಾವುದೇ ತಯಾರಿ ಕಾಣುತ್ತಿಲ್ಲ. ಹಿಂದೆ ಪಾಟ್ನಾದಲ್ಲಿ ನಾಯಕರ ರಹಸ್ಯ ಸಭೆ ನಡೆದುದ್ದನ್ನು ಬಿಟ್ಟರೆ ಬಹಿರಂಗವಾಗಿ ಯಾವುದೇ ಕಾರ್ಯಕ್ರಮ ನಡೆದಿಲ್ಲ.
ಇದಕ್ಕೆ ಬದಲಾಗಿ ಒಡಕಿನ ಅಪಸ್ವರಗಳೇ ಕೇಳಿ ಬರುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಮೈತ್ರಿ ಸಾಧ್ಯವಿಲ್ಲ ಎಂದು ಆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಹಿರಂಗವಾಗಿ ಹೇಳಿದ್ದಾರೆ.
ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ನಾಯಕರು ಹಾಕಿರುವ ಕೆಲ ಷರತ್ತುಗಳು ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರ ನಕಾರಾತ್ಮಕ ಧೋರಣೆ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.ಇನ್ನೊಂದೆಡೆ ಪಂಜಾಬಿನಲ್ಲಿ ಮೈತ್ರಿ ಅಥವಾ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಆಮ್ ಆದ್ಮಿ ನಾಯಕ ಹಾಗೂ ಅಲ್ಲಿನ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದ್ದಾರೆ. ಶಿವಸೇನೆಯ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ದೂರ ಸರಿದಂತೆ ಕಾಣುತ್ತದೆ.
ಪಶ್ಚಿಮ ಬಂಗಾಳ ಮತ್ತು ಪಂಜಾಬ್ನಂಥ ರಾಜ್ಯದಲ್ಲಿ ಹೀಗಾಗಿದ್ದರೆ ಬಿಹಾರದಲ್ಲಿ ಸಂಯುಕ್ತ ಜನತಾ ದಳ (ಜೆಡಿಯು) ಮತ್ತೆ ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಸೇರುವ ಊಹಾಪೋಹಗಳು ಹರಡಿದ್ದವು. ಇಂಡಿಯಾ ಮೈತ್ರಿ ಕೂಟದ ಇತ್ತೀಚಿನ ಕೆಲವು ವಿದ್ಯಮಾನಗಳ ಬಗ್ಗೆ ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೇಸರಗೊಂಡಿದ್ದಾರೆಂದು ಹೇಳಲಾಗುತ್ತದೆ. ಇಂಡಿಯಾ ಮೈತ್ರಿ ಕೂಟದ ಸಂಚಾಲಕತ್ವ ಹಾಗೂ ಪ್ರಧಾನಿ ಅಭ್ಯರ್ಥಿಯನ್ನಾಗಿ ತಮ್ಮನ್ನು ಬಿಂಬಿಸದಿರುವ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇದೇ ಸಂದರ್ಭ ಬಳಸಿಕೊಂಡು ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ‘ಭಾರತ ರತ್ನ’ ನೀಡಿದ್ದು ಮತ್ತು ಅದಕ್ಕಾಗಿ ನಿತೀಶ್ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದು ಗಮನಾರ್ಹ ಬೆಳವಣಿಗೆಗಳಾಗಿವೆ. ಆರ್ಜೆಡಿ ಜೊತೆಗಿನ ಮೈತ್ರಿ ಮುರಿದುಕೊಂಡು ಮತ್ತೆ ಬಿಜೆಪಿ ಜೊತೆ ಸೇರಿ ನಿತೀಶ್ ಕುಮಾರ್ ಸರಕಾರ ರಚಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಲಾಲು ಪ್ರಸಾದ್ ಯಾದವ್ರಂತೆ ನಿತೀಶ್ ಕೋಮುವಾದವನ್ನು ಪ್ರಧಾನ ಶತ್ರು ಎಂದು ಪರಿಗಣಿಸಿದವರಲ್ಲ.
ಬಿಜೆಪಿಗೆ ಆರೆಸ್ಸೆಸ್ನಂಥ ಬಲಿಷ್ಠ ಕಾರ್ಯಕರ್ತರ ಪಡೆ ಇದೆ. ಕಾರ್ಪೊರೇಟ್ ಹಣದ ಹೊಳೆ ಹರಿದು ಬರುತ್ತದೆ. ಜೊತೆಗೆ ಬಹುಸಂಖ್ಯಾತ ಧಾರ್ಮಿಕ ಕೇಂದ್ರಗಳು ಹಾಗೂ ಗುಡಿ ಗುಂಡಾರಗಳ ಮೇಲೆ ಅದು ಹಿಡಿತ ಸಾಧಿಸಿದೆ. ಆಡಳಿತಾಂಗದ ಎಲ್ಲ ಕಡೆ ಸ್ವಯಂ ಸೇವಕರ ಪಡೆ ನುಸುಳಿದೆ. ಮಾಧ್ಯಮ ಕ್ಷೇತ್ರ ಅದರ ಪರವಾಗಿದೆ. ಪೊಲೀಸ್ ಮತ್ತು ನ್ಯಾಯಾಂಗಗಳಲ್ಲೂ ಅದು ಬೆಂಬಲಿಗರನ್ನು ಹೊಂದಿದೆ. ಇದನ್ನು ಎದುರಿಸಲು ಹೊರಟ ಪಕ್ಷಗಳು ಇನ್ನೂ ಗೊಂದಲದಲ್ಲಿವೆ. ಮೈತ್ರಿ ಕೂಟದ ನಾಯಕತ್ವದ ಪ್ರಶ್ನೆ ಇನ್ನೂ ಇತ್ಯರ್ಥವಾಗಿಲ್ಲ. ಮೈತ್ರಿ ಕೂಟದ ಕಾರ್ಯಸೂಚಿ ಇನ್ನೂ ರೂಪುಗೊಂಡಿಲ್ಲ. ಬಿಜೆಪಿ ಗೆ ಯಾವ ಕಾರ್ಯಸೂಚಿಯ ಅಗತ್ಯವೂ ಇಲ್ಲ. ಜೈ ಶ್ರೀರಾಮ್ ಅಂದರೆ ಸಾಕು ಅದರ ಕೆಲಸ ಆಗುತ್ತದೆ. ಆದರೆ ಈ ಭಾವನಾತ್ಮಕ ವಿಷಯವನ್ನು ಅತ್ಯಂತ ಜಾಣ್ಮೆಯಿಂದ ಎದುರಿಸುವ ಸಿದ್ಧತೆ ಪ್ರತಿಪಕ್ಷ ಗಳಲ್ಲಿ ಕಾಣುತ್ತಿಲ್ಲ.
ಸಂಘಪರಿವಾರ ನಿಯಂತ್ರಿತ ಬಿಜೆಪಿಯನ್ನು ಎದುರಿಸಲು ಮುಂದಾಗಿರುವ 28 ಪಕ್ಷಗಳು ಭಿನ್ನವಾದ ಸಿದ್ಧಾಂತ, ಭಿನ್ನವಾದ ಹಿತಾಸಕ್ತಿ ಹಾಗೂ ವಿಭಿನ್ನವಾದ ಮತದಾರರ ಬೆಂಬಲವನ್ನು ಹೊಂದಿವೆ. ಇವು ಒಂದಾಗಿರುವುದು ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯನ್ನು ಇಟ್ಟುಕೊಂಡು ಮಾತ್ರ. ಆದರೆ, ಸಾಮಾನ್ಯವಾಗಿ ಈ ಎಲ್ಲ ಪಕ್ಷಗಳು ಜಾತ್ಯತೀತತೆ ಮತ್ತು ಸಂವಿಧಾನದ ವಿಷಯದಲ್ಲಿ ಮಾತ್ರ ಅಂಥ ಭಿನ್ನಾಭಿಪ್ರಾಯ ಗಳನ್ನು ಹೊಂದಿಲ್ಲ. ಆದರೂ ಚುನಾವಣೆ ಎದುರಿಸುವ ಕಾರ್ಯತಂತ್ರ ರೂಪಿಸುವಲ್ಲಿ ವಿಳಂಬವನ್ನು ಮಾಡುತ್ತಿವೆ. ಇದೇ ಉದಾಸೀನತೆ ಮುಂದುವರಿದರೆ ಭಾರೀ ಬೆಲೆ ತೆರಬೇಕಾಗುತ್ತದೆ.
ಕಳೆದ ಶತಮಾನದ 70ರ ದಶಕದಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅವರನ್ನು ಸೋಲಿಸಲು ಜಯಪ್ರಕಾಶ್ ನಾರಾಯಣ್ ಸಾರಥ್ಯ ವಹಿಸಿದ್ದರು. ಆಗಿನ ಜನಸಂಘ (ಈಗಿನ ಬಿಜೆಪಿ) ಅಷ್ಟು ಪ್ರಭಾವಿ ಪಕ್ಷವಾಗಿರಲಿಲ್ಲ. ಸಂಘಪರಿವಾರ ನಿಯಂತ್ರಿತವಾದ ಅದರ ಸಿದ್ಧಾಂತ ಉಳಿದ ಪಕ್ಷಗಳಿಗೆ ಹೊಂದಾಣಿಕೆ ಆಗುತ್ತಿರಲಿಲ್ಲ. ಆದರೂ ತತ್ವ, ಸಿದ್ಧಾಂತಗಳನ್ನು ಗಂಟು ಕಟ್ಟಿ ಮೂಲೆಗೆ ಬಿಸಾಕಿದ ಜೆಪಿಯವರು ಆ ವರೆಗೆ ಕೋಮುವಾದಿ ಎಂದು ಉಳಿದ ಪಕ್ಷಗಳು ದೂರವಿಟ್ಟಿದ್ದ ಜನಸಂಘವನ್ನು ತಮ್ಮ ಕೂಟದಲ್ಲಿ ಸೇರಿಸಿಕೊಂಡು ಅದಕ್ಕೆ ಮಾನ್ಯತೆಯನ್ನು ತಂದು ಕೊಟ್ಟರು. ರಾಮ ಮನೋಹರ್ ಲೋಹಿಯಾ ಅವರಿಗೂ ಕಾಂಗ್ರೆಸ್ ಪ್ರಧಾನ ಶತ್ರುವಾಗಿತ್ತೇ ಹೊರತು ಗಾಂಧೀಜಿ ಹತ್ಯೆಯ ಆರೋಪ ಹೊತ್ತವರು ದೋಷಿಗಳೆನಿಸಲಿಲ್ಲ. ಇದೆಲ್ಲದರ ಪರಿಣಾಮವಾಗಿ ಲೋಕಸಭೆಯಲ್ಲಿ ಕೇವಲ 2 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈಗ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ದಿಲ್ಲಿಯ ಗದ್ದುಗೆಯನ್ನು ಹಿಡಿದು ಕುಳಿತಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳಿಗೆ ಮಾರಕವಾಗಿ ಪರಿಣಮಿಸಿದೆ. ಈ ಅಪಾಯದಿಂದ ಭಾರತವನ್ನು ಪಾರು ಮಾಡಬೇಕೆಂದರೆ ಪ್ರತಿಪಕ್ಷಗಳು ಒಂದಾಗಬೇಕು.ಇಂದಿರಾ ಗಾಂಧಿ ಅವರನ್ನು ಎದುರಿಸಲು ಜೆಪಿ ಕಟ್ಟಿದ ಕೂಟದಲ್ಲಿದ್ದ ಪಕ್ಷಗಳಿಗೆ ಒಂದೇ ಸಿದ್ಧಾಂತ ಇರಲಿಲ್ಲ. ಆದರೆ ಈಗ ಬಿಜೆಪಿಯನ್ನು ಎದುರಿಸಲು ಹೊರಟ ಪಕ್ಷಗಳಿಗೆ ಒಂದೇ ಆರ್ಥಿಕ, ಸಾಮಾಜಿಕ ಕಣ್ಣೋಟವಿಲ್ಲದಿದ್ದರೂ ಪ್ರಜಾಪ್ರಭುತ್ವದ ಮತ್ತು ಬಹುತ್ವ ಭಾರತದ ರಕ್ಷಣೆಯ ವಿಷಯದಲ್ಲಿ ಅಂಥ ಭಿನ್ನಾಭಿಪ್ರಾಯಗಳೇನೂ ಇಲ್ಲ.
ದಿಲ್ಲಿಯ ಅಧಿಕಾರವನ್ನು ಹಿಡಿದು ಕೂತಿರುವ ಬಿಜೆಪಿಯನ್ನು ಸೋಲಿಸಲು ಒಂದಾಗಿರುವ ಪಕ್ಷಗಳು ಆರಂಭದಲ್ಲಿ ತೋರಿದ ಉತ್ಸಾಹವನ್ನು ಈಗ ತೋರಿಸುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಮೈತ್ರಿ ಕೂಟದ ಅಧ್ಯಕ್ಷರನ್ನಾಗಿ ಮಾಡಲು ಒಮ್ಮತ ಮೂಡಿದೆ ಎಂದು ಹೇಳಲಾಗುತ್ತಿದ್ದರೂ ಅದಿನ್ನೂ ಪ್ರಕಟವಾಗಿಲ್ಲ. ಮೈತ್ರಿ ಕೂಟದ ಬಹುದೊಡ್ಡ ಪಕ್ಷ ಕಾಂಗ್ರೆಸ್ ಎಂಬುದು ಪ್ರಶ್ನಾತೀತ. ಆದ್ದರಿಂದ ಸಂಚಾಲಕತ್ವ ಮಾತ್ರವಲ್ಲ ಪ್ರಧಾನಿ ಅಭ್ಯರ್ಥಿ ಎಂದು ಖರ್ಗೆಯವರನ್ನು ಬಿಂಬಿಸುವುದು ಅಗತ್ಯವಾಗಿದೆ. ಇದರ ಜೊತೆಗೆ ಲೋಕಸಭಾ ಚುನಾವಣೆಯ ಸ್ಥಾನಗಳ ಹಂಚಿಕೆಯ ಕುರಿತು ಮಾತುಕತೆಗಳ ಪ್ರಕ್ರಿಯೆ ಆರಂಭವಾಗಿದ್ದರೂ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಅಷ್ಟರಲ್ಲಿ ಮಮತಾ ಬ್ಯಾನರ್ಜಿಯವರ ಅಪಸ್ವರ ಮತ್ತು ಭಗವಂತ ಮಾನ್ ಗೊಣಗಾಟ ಕೇಳಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.
ಈಗ ಅಧಿಕಾರ ಹಿಡಿದು ಕೂತ ಬಿಜೆಪಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸಿ 2029 ರ ವೇಳೆಗೆ ‘ಹಿಂದೂ ರಾಷ್ಟ್ರ’ ನಿರ್ಮಾಣದ ಗುರಿಯನ್ನು ಇರಿಸಿಕೊಂಡಿದೆ. ಅದರ ಬತ್ತಳಿಕೆಯಲ್ಲಿ ಎಲ್ಲ ಅಸ್ತ್ರಗಳೂ ಇವೆ. ಮೋದಿಯವರಂತಹ ಪ್ರಭಾವಿ ನಾಯಕತ್ವವನ್ನು ಅದು ಹೊಂದಿದೆ. ಸಂಘಪರಿವಾರದ ಕಾರ್ಯಕರ್ತರು ಈಗಾಗಲೇ ಮನೆ, ಮನೆಗೆ ಹೋಗಿ ಮಂತ್ರಾಕ್ಷತೆಯ ಜೊತೆಗೆ ಮೊದಲ ಸುತ್ತಿನ ಚುನಾವಣಾ ಸಂದೇಶವನ್ನೂ ನೀಡಿದ್ದಾರೆ. ರಾಮ ಮಂದಿರದ ವಿಷಯದಲ್ಲಿ ಭಾರತದಾದ್ಯಂತ ಕಂಡು ಬಂದ ಸಂಭ್ರಮದ ವಾತಾವರಣ ಬಿಜೆಪಿಯ ಪರವಾದ ಅಲೆಯಾಗಿ ರೂಪಾಂತರ ಗೊಳ್ಳುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಮಾಧ್ಯಮಗಳು ಕೂಡ ರಾಹುಲ್ ಗಾಂಧಿ ಯವರ ನ್ಯಾಯಯಾತ್ರೆಗೆ ಪ್ರಚಾರ ಕೊಡದೇ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಹೆಚ್ಚು ಆದ್ಯತೆಯನ್ನು ನೀಡಿದವು. ಇದನ್ನೆಲ್ಲ ಗಮನಿಸುತ್ತಿದ್ದ ಜಗದೀಶ್ ಶೆಟ್ಟರ್ ಅವರಂತಹ ರಾಜಕಾರಣಿಗಳು ಮತ್ತೆ ಬಿಜೆಪಿ ಪಾಳೆಯದಲ್ಲಿ ಜಂಪ್ ಮಾಡಿದ್ದಾರೆ. ಇದನ್ನು ಪ್ರತಿಪಕ್ಷ ಗಳು ಹೇಗೆ ಎದುರಿಸುತ್ತವೆ?
ಭಾರತವನ್ನು ಪ್ರತಿಪಕ್ಷ ಮುಕ್ತ ದೇಶವನ್ನಾಗಿ ಮಾಡಲು ಕೇಂದ್ರದ ಬಿಜೆಪಿ ಸರಕಾರ ಷಡ್ಯಂತ್ರ ರೂಪಿಸಿದೆ. ಅಂತಲೇ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಚುನಾಯಿತ ಸರಕಾರಗಳನ್ನು ಉರುಳಿಸಲು ಹುನ್ನಾರ ನಡೆಸಿದೆ. ಉದಾಹರಣೆಗೆ ಕೇರಳ.ನಾರಾಯಣ ಗುರುಗಳ ಬೆಳಕಿನಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನು ಚುನಾಯಿಸುತ್ತ ಬಂದ ಕೇರಳ ರಾಜ್ಯದಲ್ಲಿ ಆರೆಸ್ಸೆಸ್ ಎಷ್ಟೇ ಮಸಲತ್ತು ಮಾಡಿದರೂ ಒಂದು ಶಾಸಕ ಸ್ಥಾನವನ್ನು ಗೆಲ್ಲಲು ಆಗಿಲ್ಲ. ಈ ವಿದ್ಯಾವಂತ ರಾಜ್ಯದ ಜನ ಎಡರಂಗ ಬೇಸರವಾದರೆ ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗವನ್ನು ಗೆಲ್ಲಿಸುತ್ತ ಬಂದಿದ್ದಾರೆ.ಐದು ವರ್ಷದ ನಂತರ ಎಡರಂಗದ ಕೈಗೆ ಮತ್ತೆ ಅಧಿಕಾರ ನೀಡುತ್ತಾರೆ. ಅಂತಲೇ ಇಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ಎಡರಂಗ ಸರಕಾರ ಉರುಳಿಸುವ ಕುತಂತ್ರ ನಡೆದಿದೆ.ಶಾಬಾನು ಪ್ರಕರಣದಲ್ಲಿ ಮಹಾ ಸಮಾಜ ಸುಧಾರಕನಂತೆ ಪೊಸ್ ಕೊಟ್ಟ ಆರೀಫ್ ಮುಹಮ್ಮದ್ ಖಾನ್ ಎಂಬ ರಾಜ್ಯಪಾಲ ಬೀದಿಯಲ್ಲಿ ಸರಕಾರದ ವಿರುದ್ಧ ಧರಣಿ ನಡೆಸುವಷ್ಟು ಹತಾಶ ಸ್ಥಿತಿಗೆ ತಲುಪಿದ್ದಾರೆ. ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಸರಕಾರವನ್ನು, ತಮಿಳುನಾಡಿನಲ್ಲಿ ಡಿಎಂಕೆ ಸರಕಾರವನ್ನು ಉರುಳಿಸಲು ಬಿಜೆಪಿ ಹತಾಶ ಯತ್ನ ನಡೆಸಿದೆ.
ಕೇರಳ, ಪ.ಬಂಗಾಳ ಮತ್ತು ಪಂಜಾಬ್ನಂಥ ರಾಜ್ಯಗಳಲ್ಲಿ ಬಿಜೆಪಿ ಪ್ರಭಾವ ಅಷ್ಟಿಲ್ಲ. ಈ ರಾಜ್ಯಗಳಲ್ಲಿ ಇಂಡಿಯಾ ಕೂಟದ ಪಕ್ಷಗಳೇ ಪರಸ್ಪರ ಎದುರಾಳಿಗಳು. ಉದಾಹರಣೆಗೆ ಕೇರಳದಲ್ಲಿ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷಕ್ಕೆ ಕಾಂಗ್ರೆಸ್ ನೇರ ಎದುರಾಳಿ. ಇಂಥ ರಾಜ್ಯಗಳಲ್ಲಿ ಪೈಪೋಟಿಗೆ ಇಳಿಯದೇ ಹೊಂದಾಣಿಕೆಯಿಂದ ನಡೆದುಕೊಂಡರೆ ಮಾತ್ರ ಗುರಿಸಾಧಿಸಲು ಸಾಧ್ಯ.
ಹಾಗೆ ನೋಡಿದರೆ ಭಾರತದ ಶೇ.65 ರಷ್ಟು ಮತದಾರರು ಬಿಜೆಪಿಯನ್ನು ಒಪ್ಪುವುದಿಲ್ಲ. ಅದು ಕಳೆದ ಚುನಾವಣೆಯಲ್ಲಿ ಕೂಡ ಪಡೆದ ಶೇಕಡಾವಾರು ಮತಗಳ ಪ್ರಮಾಣ ಶೇ.40 ಕೂಡ ದಾಟುವುದಿಲ್ಲ. ವಿರೋಧ ಪಕ್ಷಗಳ ಮತಗಳು ಹರಿದು ಹಂಚಿ ಹೋಗಿ ಅದರ ಪ್ರಯೋಜನ ಬಿಜೆಪಿ ಪಡೆಯುತ್ತ ಬಂದಿದೆ. ವಿರೋಧ ಪಕ್ಷಗಳು ಒಂದಾಗಲು ಬಿಜೆಪಿ ಬಿಡುವುದಿಲ್ಲ. ತನಿಖಾ ಸಂಸ್ಥೆಗಳು ಎಂಬ ಬ್ರಹ್ಮಾಸ್ತ್ರಗಳನ್ನು ಬಳಸಿ ಪ್ರತಿಪಕ್ಷ ನಾಯಕರನ್ನು ಬೆದರಿಸುತ್ತದೆ. ಇದರ ಜೊತೆಗೆ ಪ್ರತಿಪಕ್ಷ ನಾಯಕರೂ ತಮ್ಮ ಸಣ್ಣಪುಟ್ಟ ಸಂಕುಚಿತ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗುವುದಿಲ್ಲ. ವಿರೋಧ ಪಕ್ಷಗಳಿಗೆ ಮೊದಲ ಆದ್ಯತೆ ಬಿಜೆಪಿಯನ್ನು ಸೋಲಿಸುವುದಾಗಿರಬೇಕು. ಆದರೆ ಬಹುತೇಕ ಪಕ್ಷಗಳು ಮೈತ್ರಿ ಕೂಟದಿಂದ ತಮಗೇನು ಲಾಭ ಎಂಬ ಲೆಕ್ಕಾಚಾರದ ಲ್ಲಿ ಮುಳುಗುತ್ತವೆ. ಇತ್ತೀಚೆಗೆ ನಡೆದ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟದ ಪಕ್ಷಗಳು ಒಂದಾಗಿ ಚುನಾವಣೆಯನ್ನು ಎದುರಿಸಲಿಲ್ಲ.ಇಂಥ ವಿಷಯದಲ್ಲಿ ಕಾಂಗ್ರೆಸ್ ನಂಥ ದೊಡ್ಡ ಪಕ್ಷ ಹೆಚ್ಚು ಹೊಂದಾಣಿಕೆಯಿಂದ ವರ್ತಿಸಬೇಕು. ಕೆಲವು ಸ್ಥಾನಗಳನ್ನು ಬಿಟ್ಟು ಕೊಡಲು ತಯಾರಾಗಿರಬೇಕು.
ಈ ವಿದ್ಯಮಾನಗಳನ್ನು ಗಮನಿಸಿದರೆ ಲೋಕಸಭಾ ಚುನಾವಣೆಗೆ ಮುನ್ನ ಪ್ರತಿಪಕ್ಷ ಒಕ್ಕೂಟವಾದ ಇಂಡಿಯಾದ ಸ್ಥಾನ ಹೊಂದಾಣಿಕೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಕಂಡು ಬರುತ್ತಿಲ್ಲ .ಆದರೂ ಇನ್ನೂ ಅವಕಾಶವಿದೆ. ಕೋಮುವಾದಿ ಬಿಜೆಪಿಯನ್ನು ರಾಜಕೀಯ ಅಧಿಕಾರದಿಂದ ದೂರವಿಡುವ ಪ್ರಾಮಾಣಿಕ ಉದ್ದೇಶ ಮತ್ತು ಬದ್ಧತೆ ಹೊಂದಿರುವ ಪಕ್ಷಗಳಾದರೂ ಒಂದು ತಿಳಿವಳಿಕೆಗೆ ಬರಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ತಮ್ಮ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಒಂದುಗೂಡುವುದು ಚಾರಿತ್ರಿಕ ಕರ್ತವ್ಯವಾಗಿದೆ.