ಬಿಜೆಪಿಗೆ ತೆರೆಯದ ದಕ್ಷಿಣದ ಬಾಗಿಲು
ಇನ್ನು 60 ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮಾರ್ಚ್ ಎರಡನೇ ವಾರದಲ್ಲಿ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಈ ಸಲ 400 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರಚಾರ ಯಾತ್ರೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಪಾಲಿಗೆ ಮಾತ್ರವಲ್ಲ ಹಿಂದುತ್ವವಾದಿ ಶಕ್ತಿಗಳ ಪಾಲಿಗೆ ದಕ್ಷಿಣ ಭಾರತ ನುಂಗಲಾಗದ ತುತ್ತಾಗಿದೆ. ದಕ್ಷಿಣದ ರಾಜ್ಯಗಳ 150 ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನಾದರೂ ಗೆಲ್ಲಲೇಬೇಕೆಂದು ಸಂಘಪರಿವಾರ ಅವಿಶ್ರಾಂತವಾಗಿ ಪರಿಶ್ರಮಿಸುತ್ತಿದೆ. ಆದರೆ, ಈ ಬಾರಿಯೂ ಇಲ್ಲಿ ಗೆಲ್ಲುವ ಕನಸು ನನಸಾಗುವುದು ಸುಲಭವಲ್ಲ.
ಎರಡು ಬಾರಿ ಅಧಿಕಾರಕ್ಕೆ ಬಂದರೂ ಜನಸಾಮಾನ್ಯರ ಯಾವುದೇ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಉದ್ಯೋಗ ಸೃಷ್ಟಿಯ ಭರವಸೆ ಹಳ್ಳ ಹಿಡಿಯಿತು. ಬೆಲೆ ಏರಿಕೆ ನಿಯಂತ್ರಿಸಲು ಆಗಲಿಲ್ಲ. ಅದು ಇವರ ಆದ್ಯತೆಯೂ ಅಲ್ಲ. ಇದರ ಬದಲಾಗಿ ಯಾರು ಯಾವ ಆಹಾರ ಊಟ ಮಾಡಬೇಕು? ಯಾರು ಯಾವ ಬಟ್ಟೆ ತೊಡಬೇಕು? ಯಾರು ಯಾರನ್ನು ಮದುವೆಯಾಗಬೇಕು ಎಂಬಂಥ ಅರ್ಥಹೀನ ವಿವಾದಗಳನ್ನು ಸೃಷ್ಟಿಸುವವರಿಗೆ ಉತ್ತೇಜನ ನೀಡುತ್ತ ಪ್ರಶ್ನೆ ಮಾಡಿದವರನ್ನು ರಾಷ್ಟ್ರ ದ್ರೋಹಿಗಳೆಂದು ಕೇಸು ಹಾಕುತ್ತ ಬಂದವರಿಗೆ ಚುನಾವಣೆ ಬಂದಾಗ ಒಮ್ಮಿಂದೊಮ್ಮೆಲೆ ಜನರ ನೆನಪಾಗಿದೆ. ಸೋಲಿನಿಂದ ತಪ್ಪಿಸಿಕೊಳ್ಳಲು ಪ್ರತಿಪಕ್ಷಗಳ ಏಕತೆಗೆ ಕಲ್ಲು ಹಾಕುತ್ತಾ, ಅವರನ್ನು ಬೆದರಿಸಲು ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ.
ಭಕ್ತ ಪಡೆಯ ವಿಶ್ವಗುರುಗಳಿಗೆ ಈಗ ದಕ್ಷಿಣ ಭಾರತದ ನೆನಪಾಗಿದೆ.ಇತ್ತೀಚೆಗೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಿಗೆ ಸಂಚರಿಸಿದರು. ಇವರಿಗಿಂತ ಮುಂಚೆ ಗೃಹ ಸಚಿವ ಅಮಿತ್ ಶಾ ಬಂದು ಹೋದರು. ಇವರು ಬಂದಲ್ಲೆಲ್ಲ ಜೈ ಶ್ರೀರಾಮ್ ಘೋಷಣೆ ಕೇಳಿದರೂ ಕೂಡ ಇದು ಚುನಾವಣೆಗೆ ಓಟುಗಳಾಗಿ ಪರಿವರ್ತನೆಯಾಗುವುದು ಕಷ್ಟ. ಭಾರತವನ್ನು ಹಿಂದೂ ರಾಷ್ಟ್ರ ವನ್ನಾಗಿ ಮಾಡಬೇಕೆಂದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ನೆಲೆಯೂರಬೇಕು.ಆದರೆ ಇದು ಸಾಧ್ಯವಾಗುತ್ತಿಲ್ಲ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ನೆಲೆಯೂರಲು ಸಂಘಪರಿವಾರ ತುಂಬಾ ವರ್ಷಗಳಿಂದ ತನ್ನೆಲ್ಲಾ ಶಕ್ತಿಯನ್ನು ತೊಡಗಿಸಿದೆ. ಸಾವಿರಾರು ಪ್ರಚಾರಕರು, ಮಠಾಧೀಶರು, ಸ್ವಾಮಿ, ಸನ್ಯಾಸಿಗಳು , ಜನಾಂಗ ದ್ವೇಷ ಇಷ್ಟೆಲ್ಲಾ ಇದ್ದರೂ ಅವರಿಗೆ ಇಲ್ಲಿ ಅಡ್ಡಿಯಾಗಿದ್ದು ದ್ರಾವಿಡ ಸಂಸ್ಕೃತಿ. ಆರೆಸ್ಸೆಸ್ ಏನೇ ಕಸರತ್ತು ಮಾಡಿದರೂ ಅದು ಉತ್ತರ ಭಾರತದ ಆರ್ಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಾತ್ರವಲ್ಲ ಅದನ್ನು ಇಡೀ ಭಾರತದ ಮೇಲೆ ಹೇರಲು ಹೊರಟ ಸಂಘಟನೆ ಎಂಬ ಅರಿವು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿದೆ. ಇದಕ್ಕೆ ಮುಖ್ಯ ಕಾರಣ ತಮಿಳುನಾಡಿನಲ್ಲಿ ಪೆರಿಯಾರ ರಾಮಸ್ವಾಮಿ ನಾಯ್ಕರ್, ದ್ರಾವಿಡ ಪಕ್ಷಗಳು ಮತ್ತು ದ್ರಾವಿಡ ಸಿದ್ಧಾಂತ. ಕೇರಳದಲ್ಲಿ ನಾರಾಯಣಗುರುಗಳು ಮತ್ತು ಕಮ್ಯುನಿಸ್ಟರು .ಅಷ್ಟೇ ಅಲ್ಲ ಕೇರಳದಲ್ಲಿ ಶೇ.45 ರಷ್ಟಿರುವ ಕ್ರೈಸ್ತ ಮತ್ತು ಮುಸ್ಲಿಮ್ ಅಲ್ಪಸಂಖ್ಯಾತರು, ಈಳವ ಮತ್ತಿತರ ಹಿಂದುಳಿದ ಸಮುದಾಯಗಳು. ಕರ್ನಾಟಕಕ್ಕೆ ಬಂದರೆ ಬಸವಣ್ಣನವರ ಬಹುದೊಡ್ಡ ವಚನಾಂದೋಲನದ ಪ್ರಭಾವ, ಆಂಧ್ರಪ್ರದೇಶದ ಮತ್ತು ತೆಲಂಗಾಣದಲ್ಲಿ ತೆಲುಗು ಆಸ್ಮಿತೆ, ಎಡಪಂಥೀಯ ಚಳವಳಿಯ ಪ್ರಭಾವ ಹೀಗೆ ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ. ಒಂದು ದೇಶ, ಒಂದು ಭಾಷೆ ಎಂದು ಹಿಂದಿಯನ್ನು ಹೇರಲು ಹೊರಟರೆ ದಕ್ಷಿಣದ ರಾಜ್ಯಗಳ ಜನ ಒಪ್ಪಿಕೊಳ್ಳುವುದಿಲ್ಲ.
ತಮಿಳುನಾಡಿನಲ್ಲಿ ಪಕ್ಷ ಕಟ್ಟಲು ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರನ್ನು ಕರೆದೊಯ್ದರು. ಅಲ್ಲಿನ ರಾಜ್ಯಪಾಲ ರವಿ ಮೂಲಕ ಡಿಎಂಕೆ ಸರಕಾರಕ್ಕೆ ಕಿರಿಕಿರಿ ಕೊಡತೊಡಗಿದರು. ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂದು ಹಿಂದೂ ಓಟ್ ಬ್ಯಾಂಕ್ ನಿರ್ಮಿಸಲು ಹೊರಟರು. ಇದಕ್ಕಾಗಿ ಟಿವಿ ಮಾಧ್ಯಮಗಳನ್ನು ಬಳಸಿಕೊಂಡರು. ಆದರೂ ರಾಜ್ಯದ ಮತಗಟ್ಟೆಯಲ್ಲಿ ಒಂದೊಂದು ಮತಗಟ್ಟೆಗೆ 150 ಕಾರ್ಯಕರ್ತರೂ ಇಲ್ಲ ಎಂದು ರಾಜ್ಯ ಬಿಜೆಪಿ ಇತ್ತೀಚೆಗೆ ಅಸಹಾಯಕತೆ ವ್ಯಕ್ತಪಡಿಸಿದೆ.
ತಮಿಳುನಾಡಿನಲ್ಲಿ ತಕ್ಷಣ ಅಧಿಕಾರಕ್ಕೆ ಬರುವುದು ಬಿಜೆಪಿ ಗುರಿಯಲ್ಲ. ಮೊದಲು ಮುಖ್ಯ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ಡಿಎಂಕೆ (ಎಐಎ ಡಿಎಂಕೆ) ಯನ್ನು ಮೂಲೆಗುಂಪು ಮಾಡಿ ಮುಖ್ಯ ವಿರೋಧ ಪಕ್ಷವಾಗುವುದು ಈಗ ಅದರ ಆದ್ಯತೆ. ಸಂಘಪರಿವಾರ ಯಾವಾಗಲೂ ತನ್ನ ಗುರಿ ಸಾಧನೆಗಾಗಿ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುತ್ತದೆ.
2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ದಕ್ಷಿಣ ಭಾರತದ ಮೇಲೆ ಕಣ್ಣು ಹಾಕಿತು. ಪುದುಚೇರಿಯಲ್ಲಿ ರಾಜ್ಯಪಾಲೆಯಾಗಿದ್ದ ಕಿರಣ್ ಬೇಡಿ ಅವರನ್ನು ಬಳಸಿಕೊಂಡು ಅಲ್ಲಿನ ಏಳು ಮಂದಿ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಸರಕಾರವನ್ನು ಉರುಳಿಸಿತು. ಈಗ ಶಾಸನಸಭೆಗೆ ಬರುವವರಿಗೆ ಯಾವುದೇ ಸಿದ್ಧಾಂತ, ತತ್ವ ಇರುವುದಿಲ್ಲ. ವ್ಯಾಪಾರಿಗಳು,ರಿಯಲ್ ಎಸ್ಟೇಟ್ ದಂಧೆಕೋರರು, ಗಣಿ ಲೂಟಿಕೋರರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ.ಅದರಲ್ಲೂ ಕಾಂಗ್ರೆಸ್ ನಂಥ ಪಕ್ಷದಲ್ಲಿ ಅಂಥವರದೇ ಸಾಮ್ರಾಜ್ಯ ಇರುತ್ತದೆ. ಇಂಥವರನ್ನೇ ಬುಟ್ಟಿಗೆ ಹಾಕಿಕೊಂಡು ಬಿಜೆಪಿ ತನ್ನ ಆಟ ಆಡುತ್ತದೆ. ಕರ್ನಾಟಕದಲ್ಲಿ ಕೂಡ ಜನ ಬಿಜೆಪಿ ಗೆ ಎಂದೂ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಇಲ್ಲಿ ಎಷ್ಟು ಸಲ ಬಂದರೂ ಆಪರೇಶನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದೆ.
ಬಿಜೆಪಿಗೆ ನುಂಗಲಾಗದ ತುತ್ತಾಗಿರುವ ಇನ್ನೊಂದು ರಾಜ್ಯ ಕೇರಳ. ಇಲ್ಲಿ ನೆಲೆಯೂರಲು ಆರೆಸ್ಸೆಸ್ 1940 ರಿಂದ ಯತ್ನಿಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಳ್ವಲ್ಕರ್ ಕೇರಳಕ್ಕೆ ಆಗಾಗ ಭೇಟಿ ಕೊಡುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೇರಳದಲ್ಲಿ 95 ಶಾಖಾಗಳು ಮತ್ತು 1,200 ಸ್ವಯಂ ಸೇವಕರು ಇದ್ದರು. ಈಗ 5,000 ಶಾಖಾಗಳಿವೆ ಮತ್ತು 1.75 ಲಕ್ಷ ಸದಸ್ಯರಿದ್ದಾರೆ. ಆದರೂ ಇಲ್ಲಿ ನೆಲೆಯೂರಲು ಅದಕ್ಕೆ ಸಾಧ್ಯವಾಗಿಲ್ಲ. ವಿಧಾನಸಭೆಯಲ್ಲಿ ಒಬ್ಬ ಸದಸ್ಯನೂ ಇಲ್ಲ. ಆದರೆ, ಅದರ ಮತ ಗಳಿಕೆಯ ಪ್ರಮಾಣ ಶೇಕಡಾ 5 ರಿಂದ 15ಕ್ಕೆ ಹೆಚ್ಚಿದೆ. ಇದಕ್ಕೆ ಆರ್ಥಿಕ, ಸಾಮಾಜಿಕ ಸೇರಿದಂತೆ ಹಲವು ಕಾರಣಗಳಿವೆ. ಇಲ್ಲಿ ಬಿಜೆಪಿಗೆ ಅಡ್ಡಿಯಾಗಿದ್ದು ಕಮ್ಯುನಿಸ್ಟರ ಜೊತೆ ಗಟ್ಟಿಯಾಗಿ ನಿಂತ ಈಳವರು ಮತ್ತು ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಅಲ್ಪಸಂಖ್ಯಾತರು. ಹೀಗಾಗಿ ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲದ ಬಿಜೆಪಿ ಇಲ್ಲಿ ಗೋಮಾಂಸ ಸೇವನೆ ಹಾಗೂ ಮಾರಾಟವನ್ನು ವಿರೋಧಿಸುವುದಿಲ್ಲ. ಬದಲಾಗಿ ಅಧಿಕಾರಕ್ಕೆ ಬಂದರೆ ಕಡಿಮೆ ಬೆಲೆಯಲ್ಲಿ ಶುದ್ಧ ಗೋಮಾಂಸ ನೀಡುವ ಭರವಸೆ ನೀಡುತ್ತದೆ.
ಕೇರಳದಲ್ಲಿ ನೆಲೆಯೂರಲು ಶತಾಯ ಗತಾಯ ಯತ್ನಿಸುತ್ತಿರುವ ಬಿಜೆಪಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ರೈಸ್ತ ಸಮುದಾಯದವರ ಬಗ್ಗೆ ಮೆದು ಧೋರಣೆ ಹೊಂದಿದೆ. ಇಲ್ಲಿ ಸಂಘಪರಿವಾರ ಮತಾಂತರದ ಬಗ್ಗೆ ಅಪ್ಪಿತಪ್ಪಿಯೂ ಮಾತಾಡುವುದಿಲ್ಲ. ಕ್ರೈಸ್ತರನ್ನು ಎಷ್ಟರ ಮಟ್ಟಿಗೆ ಓಲೈಸುತ್ತದೆಂದರೆ ಇತ್ತೀಚೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕೇರಳಕ್ಕೆ ಬಂದು ವಿವಿಧ ಕ್ರೈಸ್ತ ಧರ್ಮ ಗುರುಗಳನ್ನು, ಪ್ರಚಾರಕರನ್ನು ಭೇಟಿಯಾದರು. ಆದರೆ, ಕ್ರೈಸ್ತರು ಇವರನ್ನು ನಂಬುವುದಿಲ್ಲ. ಕೇರಳದ ಆಚೆ ಮಣಿಪುರದಲ್ಲಿ ಕ್ರೈಸ್ತ ಧರ್ಮೀಯರ ಮೇಲೆ ಯಾರು ದಾಳಿ ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಇಲ್ಲಿ ಆಗಾಗ ಕಮ್ಯುನಿಸ್ಟರು ಮತ್ತು ಆರೆಸ್ಸೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ.ಇಲ್ಲಿನ ಜನರ ಆಯ್ಕೆ ಒಂದೋ ಕಮ್ಯುನಿಸ್ಟರ ನೇತೃತ್ವದ ಎಡರಂಗ ಅಥವಾ ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗ.
ಇದು ಕೇರಳದ ಪರಿಸ್ಥಿತಿ.
ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದ ಸಂಸ್ಕೃತಿ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ.‘ಇವನಾರವ ಇವನಾರವ ಎನಬೇಡ, ಇವ ನಮ್ಮವ ಎಂದು ಬಸವಣ್ಣನವರು ಸಂದೇಶ ನೀಡಿದ ನೆಲವಿದು. ಕರ್ನಾಟಕದಲ್ಲಿ ಬಸವಣ್ಣನವರು, ಕೇರಳದಲ್ಲಿ ನಾರಾಯಣ ಗುರುಗಳು, ತಮಿಳುನಾಡಿನಲ್ಲಿ ಪೆರಿಯಾರ ರಾಮಸ್ವಾಮಿ ನಾಯ್ಕರ್, ಅವಿಭಜಿತ ಆಂಧ್ರಪ್ರದೇಶದಲ್ಲಿ ದೇಶವೆಂದರೆ ಮಣ್ಣಲ್ಲ, ಕಲ್ಲಲ್ಲ, ಮನುಷ್ಯರು ಎಂಬ ಸಂದೇಶ ಸಾರಿದ ಗುರುಜಾಡ ಇವರೆಲ್ಲರೂ ಕೋಮುವಾದಿ ಶಕ್ತಿಗಳ ಜನ ವಿಭಜಕ ರಾಜಕೀಯಕ್ಕೆ ತಡೆ ಗೋಡೆಯಾಗಿದ್ದಾರೆ. ಮೋದಿ, ಅಮಿತ್ ಶಾ ಎಷ್ಟು ಸಲ ಬಂದು ಹೋದರೂ ಜನರ ಮನೋಭಾವ ಬದಲಾಗುವುದಿಲ್ಲ.
ಆಂಧ್ರಪ್ರದೇಶದಲ್ಲಿ ಬೇರೆ ದಾರಿ ಇಲ್ಲದೇ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಮತ್ತು ನಟ ಪವನ್ ಕಲ್ಯಾಣರ ಜನಸೇನಾ ಪಕ್ಷಗಳ ಜೊತೆಗೆ ಹೊಂದಾಣಿಕೆಗೆ ಬಿಜೆಪಿ ಮುಂದಾಗಿದೆ. ಅವರು ಬಿಟ್ಟು ಕೊಟ್ಟಷ್ಟು ಸ್ಥಾನಗಳಿಗೆ ಸ್ಪರ್ಧಿಸಲು ಒಪ್ಪಿದೆ. ಕರ್ನಾಟಕದಲ್ಲಿ ಜೆಡಿಎಸ್ ಈಗಾಗಲೇ ಬಿಜೆಪಿ ಬುಟ್ಟಿಗೆ ಬಿದ್ದಿದೆ.ಕೊನೆಗೆ ಈ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವುದು ಬಿಜೆಪಿ ಲೆಕ್ಕಾಚಾರ.