ನ್ಯಾಯಮೂರ್ತಿ ಲೋಯಾ ಹತ್ಯೆಯ ದಾರುಣ ಕತೆ
ಭಾರತದ ಪ್ರಜಾಪ್ರಭುತ್ವ ಅಪಾಯದ ಅಂಚಿಗೆ ಬಂದು ನಿಂತಿರುವ ಇಂದಿನ ಸನ್ನಿವೇಶದಲ್ಲಿ ನ್ಯಾಯಾಂಗ ಮಾತ್ರ ಈ ಗಂಡಾಂತರದಿಂದ ದೇಶವನ್ನು ಪಾರು ಮಾಡಬಹುದು ಎಂಬ ನಂಬಿಕೆ ಸಾಮಾನ್ಯವಾಗಿದೆ. ಆದರೆ, ನ್ಯಾಯಾಂಗವೇ ಅಂದರೆ ಕೆಲ ನ್ಯಾಯಾಧೀಶರೇ ಸರ್ವಾಧಿಕಾರಕ್ಕೆ ಶರಣಾಗತವಾದ ಉದಾಹರಣೆ ಗುಜರಾತ್ ನಲ್ಲಿದೆ. ಇದರ ನಡುವೆಯೂ ಯಾವುದೇ ಒತ್ತಡಕ್ಕೆ ಮಣಿಯದೆ ವೃತ್ತಿ ಬದ್ಧತೆಗೆ ಪ್ರಾಣವನ್ನೇ ಕೊಟ್ಟ ನ್ಯಾಯಮೂರ್ತಿ ಬ್ರಿಜ್ ಗೋಪಾಲ ಲೋಯಾ ಅವರಂಥ ಹುತಾತ್ಮರೂ ನಮ್ಮ ಕಣ್ಣೆದುರು ನಿರ್ಗಮಿಸಿದ್ದಾರೆ. ಆಕಸ್ಮಿಕ ಸಾವು ಎಂದು ಮುಚ್ಚಿ ಹೋಗಬಹುದಾಗಿದ್ದ ಲೋಯಾ ಹತ್ಯೆಯ ಆಳಕ್ಕೆ ಇಳಿದು ಸತ್ಯ ಬಯಲು ಮಾಡಿದ ಮಹಾರಾಷ್ಟ್ರದ ಪತ್ರಕರ್ತ ನಿರಂಜನ ಟಕ್ಲೆ ಅವರು ಈ ಕುರಿತು ಪುಸ್ತಕ ಬರೆದಿದ್ದಾರೆ. ನಾಡಿನ ಹೆಸರಾಂತ ಹೋರಾಟಗಾರ್ತಿ, ಸಿಪಿಐ ನಾಯಕಿ ಜ್ಯೋತಿ ಅನಂತ ಸುಬ್ಬರಾವ್ ಈ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.
೨೯೫ ಪುಟಗಳ ಈ ಪುಸ್ತಕದಲ್ಲಿ ಲೋಯಾ ಹತ್ಯೆಯ ಸುತ್ತಮುತ್ತಲಿನ ವಿವರಗಳನ್ನು ನಿರಂಜನ ಟಕ್ಲೆ ತುಂಬ ಕಷ್ಟಪಟ್ಟು ತನಿಖೆ ಮಾಡಿ ಬಯಲಿಗೆ ತಂದಿದ್ದಾರೆ. ಸೊಹ್ರಾಬುದ್ದೀನ್ ಶೇಕ್ ಮತ್ತು ಆತನ ಪತ್ನಿ ಕೌಸರ್ ಬಿ, ಸಹಚರ ತುಳಸಿರಾಮ ಪ್ರಜಾಪತಿ ಹತ್ಯೆಯ ಪ್ರಕರಣದಲ್ಲಿ ಜೈಲು ಸೇರಿದ್ದ ಅಮಿತ್ ಶಾ ಹೇಗೆ ಬಿಡುಗಡೆಯಾಗಿ ಬಂದರು? ಲೋಯಾ ಹತ್ಯೆಗೂ ಅವರ ಬಿಡುಗಡೆಗೂ ಇರುವ ಸಂಬಂಧವನ್ನು ಟಕ್ಲೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಜ್ಯೋತಿ ಅನಂತಸುಬ್ಬರಾವ್ ಅವರು ಅಷ್ಟೇ ಸರಳವಾಗಿ ಓದಿಸಿಕೊಂಡು ಹೋಗುವಂತೆ ಅನುವಾದ ಮಾಡಿದ್ದಾರೆ.
ಇದು ಪ್ರಭುತ್ವದ ಸೂತ್ರಧಾರರ ಒತ್ತಡಕ್ಕೆ ಮಣಿಯದ ನೇರ, ನಿಷ್ಠುರ, ನ್ಯಾಯಮೂರ್ತಿಯೊಬ್ಬರ ಕತೆ. ಈ ಕಾಲದಲ್ಲಿ ಇಂಥ ನ್ಯಾಯಮೂರ್ತಿ ಸಿಗುವುದು ಅಪರೂಪ. ಆಳುವವರ ಬ್ಲ್ಯಾಕ್‌ಮೇಲ್ ಕುತಂತ್ರಕ್ಕೆ ಮಣಿದು ಅವರಿಷ್ಟದಂತೆ ತೀರ್ಪು ಬರೆದು ರಾಜ್ಯಸಭೆಯ ಸದಸ್ಯರಾದ ನ್ಯಾಯಮೂರ್ತಿಗಳೂ ಈ ದೇಶದಲ್ಲಿ ಇದ್ದಾರೆ. ಆದರೆ, ಮುಂಬೈಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಬ್ರಿಜ್ ಗೋಪಾಲ ಲೋಯಾ ಅವರು ಯಾವುದೇ ಒತ್ತಡಕ್ಕೆ ಮಣಿಯುವ ಅಥವಾ ಮಾರಾಟವಾಗುವ ವ್ಯಕ್ತಿಯಾಗಿರಲಿಲ್ಲ.
೨೦೧೪ರಲ್ಲಿ ಸಂಶಯಾಸ್ಪದವಾಗಿ ನಾಗಪುರದಲ್ಲಿ ಲೋಯಾ ಕೊನೆಯುಸಿರೆಳೆದರು. ಅವರು ಆ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಆರೋಪಿಯಾಗಿರುವ ಪ್ರಕರಣವೊಂದರ ವಿಚಾರಣೆಯನ್ನು ನ್ಯಾಯಮೂರ್ತಿ ನಡೆಸುತ್ತಿದ್ದರು. ಅದು ಅತ್ಯಂತ ಮಹತ್ವದ ಪ್ರಕರಣ. ಆಡಳಿತ ಪಕ್ಷದ ಅಧ್ಯಕ್ಷನೇ ದಂಡನೆಗೆ ಗುರಿಯಾಗಬೇಕಾದ ಪ್ರಕರಣ. ಈ ಸನ್ನಿವೇಶದಲ್ಲಿ ನ್ಯಾಯಮೂರ್ತಿ ಲೋಯಾ ಏಕಾಏಕಿ ಸಾವಿಗೀಡಾದರು. ಅದು ಸಾವಲ್ಲ, ಕೊಲೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿಬಂದವು.
ನ್ಯಾಯಮೂರ್ತಿ ಲೋಯಾ ಅವರ ಈ ಸಂಶಯಾಸ್ಪದ ಸಾವಿನ ಬಗ್ಗೆ ತಲೆ ಕೆಡಿಸಿಕೊಂಡ ಮಹಾರಾಷ್ಟ್ರದ ಪತ್ರಕರ್ತ ನಿರಂಜನ ಟಕ್ಲೆ ಅವರು ಹೇಗಾದರೂ ಮಾಡಿ ಈ ಸಾವಿನ ಹಿಂದಿರುವ ಸತ್ಯ ವನ್ನು ಪತ್ತೆ ಹಚ್ಚಲು ಮುಂದಾದರು. ತುಂಬಾ ಕಷ್ಟ ಪಟ್ಟು ಈ ಪ್ರಕರಣದ ಸಾಕ್ಷ್ಯಾಧಾರಗಳು, ವೈದ್ಯಕೀಯ ವರದಿಗಳು ಮುಂತಾದವುಗಳನ್ನು ಪತ್ತೆ ಹಚ್ಚಿ ನ್ಯಾಯ ಮೂರ್ತಿ ಲೋಯಾ ಅವರದು ಸಹಜ ಸಾವಲ್ಲ, ಕಗ್ಗೊಲೆ ಎಂದು ಪುರಾವೆ ಸಹಿತ ಸಾಬೀತು ಪಡಿಸಿದರು.
ನ್ಯಾಯಮೂರ್ತಿ ಲೋಯಾ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ಸತ್ಯ ಸಂಗತಿಯನ್ನು ಬಯಲಿಗೆಳೆಯಲು ಹೊರಟ ನಿರಂಜನ ಟಕ್ಲೆ ಅವರ ತನಿಖಾ ಕಾರ್ಯ ಸುಲಭದ್ದಾಗಿರಲಿಲ್ಲ. ಈ ಪ್ರಕ್ರಿಯೆಯಲ್ಲಿ ಅವರ ಮೇಲೆ ಅನೇಕ ಸಲ ಹಲ್ಲೆ ಗಳು ನಡೆದವು.ಅವರನ್ನು ಕೊಲೆ ಮಾಡುವ ಯತ್ನವೂ ನಡೆಯಿತು. ‘ದಿ ವೀಕ್’ ಪತ್ರಿಕೆಯ ವರದಿಗಾರ
ರಾಗಿದ್ದ ಟಕ್ಲೆ ಅವರು ಇಷ್ಟೆಲ್ಲ ಕಷ್ಟಪಟ್ಟು ತನಿಖಾ ವರದಿ ಸಿದ್ಧಪಡಿಸಿ ತಾನು ಕೆಲಸ ಮಾಡುವ ಪತ್ರಿಕೆಯ ಸಂಪಾದಕರಿಗೆ ನೀಡಿದರೆ ಅವರು ಅದನ್ನು ಪ್ರಕಟಿಸಲಿಲ್ಲ.
ಯಾವುದೇ ಸ್ವಾಭಿಮಾನ ಇರುವ ಪತ್ರಕರ್ತ ದಿಟ್ಟ ಹೆಜ್ಜೆ ಇಡುವಂತೆ ಟಕ್ಲೆ ಕೂಡ ತನ್ನ ತನಿಖಾ ವರದಿಯನ್ನು ಪ್ರಕಟಿಸದ ‘ದಿ ವೀಕ್’ ಪತ್ರಿಕೆ ಕೆಲಸಕ್ಕೆ ರಾಜೀನಾಮೆ ನೀಡಿದರು. ಕೊನೆಗೆ ನ್ಯಾಯಮೂರ್ತಿ ಲೋಯಾ ಸಾವಿನ ಸಂಚಿನ ಕತೆಯನ್ನು ‘ಕ್ಯಾರವಾನ್’ ಪತ್ರಿಕೆ ಪ್ರಕಟಿಸಿತು. ಆದರೆ, ಈ ಪ್ರಕರಣದಲ್ಲಿ ನಿರಂಜನ ಟಕ್ಲೆ ತಮ್ಮ ಕೆಲಸ ಕಳೆದುಕೊಂಡು ನಿರುದ್ಯೋಗಿಯಾದರು. ಆದರೆ, ಬದ್ಧತೆ ಬಿಟ್ಟುಕೊಡಲಿಲ್ಲ.
ಮುಚ್ಚಿ ಹೋಗಬಹುದಾಗಿದ್ದ ಲೋಯಾ ಹತ್ಯೆಯ ಪ್ರಕರಣ ಬಯಲಿಗೆ ಬಂತು. ಹತ್ಯೆಯ ಹಿಂದೆ ಯಾರಿದ್ದರು ಎಂಬ ಸಂಗತಿ ಬಯಲಾಯಿತು. ದೇಶದ ಗೃಹ ಸಚಿವ ಅಮಿತ್ ಶಾ ಅವರನ್ನು ಅನೇಕ ಮಂದಿ ಸಂಶಯದಿಂದ ನೋಡುವಂತಾಯಿತು. ಈ ಇಡೀ ಪ್ರಕರಣದಲ್ಲಿ ತಮ್ಮ ಅನುಭವಗಳನ್ನು ಟಕ್ಲೆ ಅವರು ಅತ್ಯಂತ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಇದು ನ್ಯಾಯಾಮೂರ್ತಿಗಳು, ನ್ಯಾಯವಾದಿಗಳು ಮತ್ತು ಯುವ ಪತ್ರಕರ್ತರು ಓದಲೇಬೇಕಾದ ಅತ್ಯಂತ ಅಪರೂಪದ ಪುಸ್ತಕ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ನಿರಂಜನ ಟಕ್ಲೆ ಅವರ ಈ ಪುಸ್ತಕ ನ್ಯಾಯಮೂರ್ತಿ ಬ್ರಿಜ್ ಹರಕಿಶನ್ ಲೋಯಾ ಅವರ ಕುಟುಂಬದ ಹತಾಶೆ, ಕಣ್ಣೀರು, ಅಭದ್ರತೆ ಇವುಗಳನ್ನು ಮಾತ್ರವಲ್ಲ ಸ್ವತಂತ್ರ ಭಾರತದಲ್ಲಿ ಕುಸಿಯುತ್ತಿರುವ ಪ್ರಜಾಪ್ರಭುತ್ವ, ದುರ್ಬಲಗೊಳ್ಳುತ್ತಿರುವ ನ್ಯಾಯಾಂಗ,ನಂಬಿಕೆ ಕಳೆದುಕೊಂಡ ಮಾಧ್ಯಮ ಇವುಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.
ಫ್ಯಾಶಿಸಮ್ ಕಾಲೂರಿ ಪ್ರಭುತ್ವದ ಮೇಲೆ ಹಿಡಿತ ಸಾಧಿಸಿದ ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ತಬ್ಬಲಿಯಾಗುತ್ತದೆ. ಇದನ್ನು ಸಂವಿಧಾನ ನಿರ್ಮಾಪಕ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೊದಲೇ ಎಚ್ಚರಿಸಿದ್ದರು. ‘ಎಂಥ ಒಳ್ಳೆಯ ಸಂವಿಧಾನ ಇದ್ದರೂ ಕೆಟ್ಟ ಆಡಳಿತಗಾರರ ಕೈಯಲ್ಲಿ ಸಿಕ್ಕರೆ ನಿಷ್ಪ್ರಯೋಜಕ ವಾಗುತ್ತದೆ’ ಎಂಬ ಅವರ ಮಾತುಗಳು ಈಗ ಸತ್ಯವಾಗುತ್ತಿವೆ. ಇದನ್ನೆಲ್ಲ ಬಯಲಿಗೆಳೆಯಬೇಕಾದ ಪತ್ರಿಕೆ ಸೇರಿದಂತೆ ಎಲ್ಲಾ ಮಾಧ್ಯಮಗಳು ಆಳುವವರ್ಗದ ತುತ್ತೂರಿಯಾಗಿರುವ ಇಂದಿನ ದಿನಗಳಲ್ಲಿ ಇದೇ ಮಾಧ್ಯಮದಲ್ಲಿ ನಿರಂಜನ ಟಕ್ಲೆ ಅವರಂಥ ದಿಟ್ಟ, ಜನಕಾಳಜಿಯ ಪತ್ರಕರ್ತರು ನಮ್ಮ ನಡುವೆ ಇದ್ದಾರೆ ಎಂಬುದು ನಮ್ಮಲ್ಲಿ ಮತ್ತೆ ಭರವಸೆ ಮೂಡಿಸುತ್ತದೆ.
Who killed Judge Loya ಎಂಬ ಇಂಗ್ಲಿಷ್ ಪುಸ್ತಕವನ್ನು ‘ಜಡ್ಜ್ ಲೋಯಾ ಅವರನ್ನು ಕೊಂದವರಾರು’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿರುವ ಜ್ಯೋತಿ ಅನಂತ ಸುಬ್ಬರಾವ್ ಅವರು ಕಾದಂಬರಿ ಓದಿಸಿಕೊಂಡು ಹೋಗುವಂತೆ ಸರಳವಾಗಿ ಅನುವಾದ ಮಾಡಿದ್ದಾರೆ. ಮೂಲ ಕೃತಿಯ ಪ್ರತೀ ಶಬ್ದವನ್ನು ಬಿಡದೆ ತುಂಬಾ ಪರಿಶ್ರಮಪಟ್ಟು ಅನುವಾದಿಸಿರುವ ಜ್ಯೋತಿ ಅವರ ನಾಲ್ಕನೇ ಅನುವಾದ ಪುಸ್ತಕವಿದು. ಇದರಿಂದ ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಒಬ್ಬರಾಗಿ ಜ್ಯೋತಿ ಅನಂತಸುಬ್ಬರಾವ್ ಹೊರ ಹೊಮ್ಮಿದ್ದಾರೆ.
ಕನ್ನಡದಲ್ಲಿ ಅನುವಾದಗೊಂಡ ಈ ಪುಸ್ತಕ ಹೆಚ್ಚು ಜನರನ್ನು ತಲುಪಿದಂತೆ ಕಾಣುವುದಿಲ್ಲ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ಜನಪರ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆಗಳು ಈ ಪುಸ್ತಕವನ್ನು ಜನಸಾಮಾನ್ಯರಿಗೆ ತಲುಪಿಸುವ ಹೊಣೆ ಹೊರಬೇಕು.ಮೂಲ ಲೇಖಕ ನಿರಂಜನ ಟಕ್ಲೆ ಅ ವರು ತಮ್ಮ ಸ್ವಂತ ‘ನಿರಂಜನ ಪ್ರಕಾಶನ’ದಿಂದ ಇದನ್ನು ಪ್ರಕಟಿಸಿದ್ದಾರೆ.ದೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಹೆಡೆಯೆತ್ತಿದ ಈ ಕಾಲದಲ್ಲಿ ಜ್ಯೋತಿ ಅನಂತಸುಬ್ಬರಾವ್ ಅವರು ಇದನ್ನು ಕನ್ನಡಕ್ಕೆ ತಂದಿರುವುದು ಶ್ಲಾಘನೀಯ.