ಮಣಿಪುರ ಶಾಂತ ಆಗುವುದು ಯಾವಾಗ ?
ಭಾರತದ ಈಶಾನ್ಯ ಭಾಗದ ಪುಟ್ಟ ರಾಜ್ಯ ಮಣಿಪುರ ಕಳೆದ ಒಂದೂವರೆ ವರ್ಷದಿಂದ ಧಗ ಧಗ ಉರಿಯುತ್ತಿದೆ. ಅಲ್ಲಿ ಹೋಗಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಾದ ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್ ಗೆ ಹೋಗಿ ಅಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಮುಂದಾಗಿದ್ದಾರೆ. ಅದರಲ್ಲೂ ಕಳೆದ ಕೆಲ ತಿಂಗಳುಗಳ ಘಟನಾವಳಿ ಗಮನಿಸಿದರೆ ಪರಿಸ್ಥಿತಿ ತೀರ ವಿಕೋಪಕ್ಕೆ ಹೋಗಿದೆ. ಜನಾಂಗೀಯ ಕಲಹ ಮಿತಿ ಮೀರಿದೆ.
ಅಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಉಗ್ರ ಗಾಮಿಗಳು ಅಲ್ಲಿನ ನಾಗರಿಕ ಪ್ರದೇಶದ ಮೇಲೆ ನಿರಂತರವಾಗಿ ರಾಕೆಟ್ ಚಾಲಿತ ಗ್ರೆನೇಡ್‌ಗಳನ್ನು, ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದ್ದಾರೆ. ಇಂಫಾಲ ಸಮೀಪದ ಮೆತೈ ಸಮಾಜದವರ ಗ್ರಾಮದ ಮೇಲೆ ಕುಕಿ ಜನಾಂಗದ ಉಗ್ರಗಾಮಿಗಳು ಕಳೆದ ವಾರ ಬಾಂಬ್ ದಾಳಿ ನಡೆಸಿದ್ದಾರೆ.
ರಾಕೆಟ್ ಚಾಲಿತ ಗ್ರೇನೆಡ್‌ಗಳು (ಆರ್‌ಪಿಜಿ) ಡ್ರೋನ್‌ಗಳನ್ನು ಬಳಸಿದ್ದಾರೆ. ಕುಕಿ ಮತ್ತು ಮೈತೈ ಜನಾಂಗೀಯ ಕಲಹ ಯುದ್ಧದ ಸ್ವರೂಪ ಪಡೆಯುತ್ತಿದೆ. ಈ ದಾಳಿಯಲ್ಲಿ ಅಮಾಯಕರು ಸಾವಿಗೀಡಾಗಿದ್ದಾರೆ. ಮಣಿಪುರದ ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತ ಹಾಗೂ ಬಂಡುಕೋರರ ನಡುವೆ ಘರ್ಷಣೆ ನಡೆದಿದೆ. ಬಾಂಗ್ಲಾದೇಶದ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಮಣಿಪುರದಲ್ಲಿ ನಡೆದಿರುವ ದಾಳಿ ಗಮನಿಸಿದರೆ, ತಾಂತ್ರಿಕ ಪರಿಣತಿಯುಳ್ಳವರ ಕೈವಾಡ ಇದ್ದಂತೆ ಕಾಣುತ್ತದೆ.
ಅಲ್ಲಿನ ಮುಖ್ಯಮಂತ್ರಿ ಬಿರೇನ್ ಸಿಂಗ್ ಬಿಜೆಪಿಗೆ ಸೇರಿದವರು. ‘ಕೆಲವೇ ತಿಂಗಳುಗಳಲ್ಲಿ ಮಣಿಪುರದಲ್ಲಿ ಶಾಂತಿ ನೆಲೆಸಲಿದೆ’ ಎಂದು ಅವರು ಹೇಳುತ್ತಲೇ ಇದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ತಾವು ಎಲ್ಲ ಸಮುದಾಯಗಳ ನಾಯಕ, ರಾಜ್ಯದ ಎಲ್ಲರನ್ನೂ ರಕ್ಷಿಸುವುದು ತಮ್ಮ ಕರ್ತವ್ಯ ಎಂದು ಅವರು ಪದೇ ಪದೇ ಹೇಳುತ್ತಲೇ ಇದ್ದಾರೆ.
ಆದರೆ, ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ರಾಜ್ಯದಲ್ಲಿ ಜನಸಾಮಾನ್ಯರನ್ನು ಅವರು ಆಸ್ತಿಪಾಸ್ತಿಗಳನ್ನು ರಕ್ಷಿಸುವಲ್ಲಿ ಅವರು ವಿಫಲಗೊಂಡಿರುವವು ಸ್ಪಷ್ಟವಾಗುತ್ತದೆ. ಕಳೆದ ವರ್ಷ ಮೇ ತಿಂಗಳಿನಿಂದ ಆರಂಭವಾದ ಜನಾಂಗೀಯ ಹಿಂಸಾಚಾರ ಇತರ ಪ್ರದೇಶಗಳಿಗೂ ವಿಸ್ತರಿಸುತ್ತಿದೆ. ಅಲ್ಲಿನ ಅಧಿಕಾರರೂಢ ಬಿಜೆಪಿ ಪಕ್ಷದ ಒಂದು ಗುಂಪು ರಾಜ್ಯದಲ್ಲಿ ಇರುವ ಕೇಂದ್ರೀಯ ಪಡೆ ಹಿಂಪಡೆಯಲು ಮತ್ತು ಭದ್ರತಾ ಪಡೆಗಳ ನಿಯಂತ್ರಣಾಧಿಕಾರವನ್ನು ಮುಖ್ಯಮಂತ್ರಿ ಕಚೇರಿ ಗೆ ವಹಿಸಲು ಒತ್ತಾಯಿಸುತ್ತಿದೆ. ಆದರೆ, ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.
ಮಣಿಪುರ ರಾಜ್ಯ ಕುಕಿ ಸಮುದಾಯ ಹಾಗೂ ಮೈತೈ ಸಮುದಾಯಗಳ ಪ್ರದೇಶಗಳ ನಡುವೆ ಒಡೆದು ಹೋಗಿದೆ. ಎರಡೂ ಸಮುದಾಯಗಳ ನಡುವೆ ದ್ವೇಷದ ದಳ್ಳುರಿ ಎದ್ದಿದೆ. ಹಿಂಸಾಚಾರದಿಂದ ನೆಲೆ ಕಳೆದುಕೊಂಡ 60 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಇದ್ದಾರೆ. ಸರಕಾರದ ಶಸ್ತ್ರಾಗಾರದಿಂದ ಲೂಟಿ ಮಾಡಲ್ಪಟ್ಟ ಶಸ್ತ್ರಾಸ್ತ್ರಗಳು ಉಗ್ರರ ಕೈ ಸೇರಿವೆ. ಆದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಣಿಪುರ ಎಂಬ ರಾಜ್ಯ ತನಗೆ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳತ್ತಿರುವುದು ಆತಂಕದ ಸಂಗತಿ.
ಈಶಾನ್ಯ ಭಾರತದ ಮಣಿಪುರ ಎಂಬ ಈ ಪುಟ್ಟ ರಾಜ್ಯ ಒಂದೂವರೆ ವರ್ಷದಿಂದ ಹೊತ್ತಿ ಉರಿಯುತ್ತಿದೆ. ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಬೆಂದು ಹೋಗುತ್ತಿದೆ. ರಕ್ತಪಾತದಿಂದ ನಲುಗಿದೆ. ಈ ಬೆಂಕಿ ಆರಿಸಬೇಕಾದವರು ಮೇಲೇಳುತ್ತಿರುವ ಜ್ವ್ವಾಲೆಗಳಲ್ಲಿ ಮೈ ಕಾಯಿಸಿಕೊಳ್ಳಲು ಹೊರಟಿದ್ದಾರೆ. ಮಾಜಿ ಪ್ರಧಾನಿಗೆ ‘ಮೌನಿ ಬಾಬಾ’ ಎಂದು ಕುಹಕದ ಮಾತನಾಡಿದವರು ಗಾಢ ಮೌನ ತಾಳಿದ್ದಾರೆ.
ಕರ್ನಾಟಕದ ಮಾಧ್ಯಮಗಳಲ್ಲಿ ಮಣಿಪುರದ ಸುದ್ದಿ ಅಷ್ಟಾಗಿ ಬರುತ್ತಿಲ್ಲ. ಆದರೆ, ಯಾದವೀ ಕಲಹದ ಅಂಚಿಗೆ ಮಣಿಪುರ ಬಂದು ನಿಂತಿದೆ. ಬಹುಸಂಖ್ಯಾತ ಮೈತೈ ಮತ್ತು ಅಲ್ಪಸಂಖ್ಯಾತ ಕುಕಿ ಮತ್ತಿತರ ಬುಡಕಟ್ಟು ಸಮುದಾಯಗಳ ನಡುವೆ ದ್ವೇಷದ ಅಡ್ಡಗೋಡೆ ಎದ್ದು ನಿಂತು ಅದೀಗ ಹತ್ಯಾಕಾಂಡದ ರೂಪ ತಾಳಿದೆ.
ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಕಳೆದ ವರ್ಷ ಮಣಿಪುರ ಮೂಲದ ವಿದೇಶಾಂಗ ಖಾತೆಯ ರಾಜ್ಯ ಸಚಿವ ಆರ್.ಕೆ.ರಂಜನ್‌ಸಿಂಗ್ ತಮ್ಮ ಪಕ್ಷದ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು .
ಇಂಫಾಲ್‌ದಲ್ಲಿರುವ ತನ್ನ ಮನೆಯ ಮೇಲೆ ಉದ್ರಿಕ್ತ ಗುಂಪುಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದರೂ ರಾಜ್ಯ ಸರಕಾರ ಸೂಕ್ತ ಭದ್ರತೆ ಒದಗಿಸಿಲ್ಲವೆಂದು ಕೆಂಡ ಕಾರಿದ್ದಾರೆ.
ಕೇಂದ್ರದಲ್ಲೂ ಮತ್ತು ಮಣಿಪುರ ರಾಜ್ಯದಲ್ಲೂ ಬಿಜೆಪಿ ಸರಕಾರಗಳಿದ್ದರೂ ಮಣಿಪುರದ ಹಿಂಸಾಚಾರವನ್ನು ನಿಯಂತ್ರಿಸಲು ಡಬಲ್ ಇಂಜಿನ್ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಇಂಜಿನ್ ಕೆಟ್ಟು ನಿಂತಿದೆ.ಕೇಂದ್ರದ ಇಂಜಿನ್ ದಿಲ್ಲಿ ಬಿಟ್ಟು ಬರುತ್ತಿಲ್ಲ. ಜನಾಂಗೀಯ
ದ್ವೇಷದ ದಳ್ಳುರಿಯಲ್ಲಿ ಓಟಿನ ಬೆಳೆಯನ್ನು ತಗೆಯಲು ಹೊರಟವರು ತಮಗೇನೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ.
ಮಣಿಪುರದ ಜನಾಂಗೀಯ ದ್ವೇಷದ ದಳ್ಳುರಿ ಕಳೆದ ವರ್ಷ ಮೇ 3 ರಿಂದ ಆರಂಭವಾದರೂ ಅದನ್ನು ನಿಯಂತ್ರಿಸಲು ಅಲ್ಲಿನ ಬಿಜೆಪಿ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ತಕ್ಷಣ ಸ್ಪಂದಿಸಬೇಕಾದ ದೇಶದ ಗೃಹ ಮಂತ್ರಿ ಅಮಿತ್‌ಶಾ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿದ್ದರು.ಕರ್ನಾಟಕವನ್ನು ಹೇಗಾದರೂ ಗೆಲ್ಲುವ ಮೂಲಕ ಇಡೀ ದಕ್ಷಿಣ ಭಾರತವನ್ನು ಕಬಳಿಸಲು ಹೊಂಚು ಹಾಕಿದವರು ಮಣಿಪುರದತ್ತ ಕಣ್ಣೆತ್ತಿ ನೋಡಲಿಲ್ಲ. ದೇಶದ ಪ್ರಧಾನಿಯೇ 15 ದಿನ ಕರ್ನಾಟಕದಲ್ಲಿ ಝಂಡಾ ಊರಿ ಜಿಲ್ಲೆ, ತಾಲೂಕು, ಹಳ್ಳಿ, ಪಟ್ಟಣಗಳನ್ನು ಸುತ್ತಿ ವೇದಿಕೆಯ ಮೇಲಿನಿಂದ ಜನರಿಗೆ ನಡು ಬಗ್ಗಿಸಿ, ನಮಸ್ಕಾರ ಮಾಡುವ ಪ್ರಹಸನ ನಡೆಸಿದಾಗ ಮಣಿಪುರ ದಳ್ಳುರಿಯಲ್ಲಿ ಬೆಂದು ಹೋಗುತ್ತಿತ್ತು.
ಅವರು ಕರ್ನಾಟಕ ಚುನಾವಣೆಯನ್ನು ಮುಗಿಸಿ ದಿಲ್ಲಿಗೆ ಹೋಗಿ ಹೊಸ ಸಂಸತ್ ಭವನವನ್ನು ಪುರೋಹಿತರ ಸಮ್ಮುಖದಲ್ಲಿ ಉದ್ಘಾಟಿಸಿದ ನಂತರ ಮಣಿಪುರದ ಬೆಂಕಿಯ ಜ್ವ್ವಾಲೆಯ ಬಿಸಿ ಇವರಿಗೆ ತಟ್ಟಿತು. ಕೊನೆಗೂ ಗೃಹ ಮಂತ್ರಿ ಅಮಿತ್ ಶಾ ಮಣಿಪುರ ರಾಜಧಾನಿ ಇಂಫಾಲಗೆ ಹೋಗಿದ್ದು ಹಿಂಸಾಚಾರ ನಡೆದು 26 ದಿನಗಳ ನಂತರ. ಅಲ್ಲಿ ಹೋಗಿ ಪರಿಸ್ಥಿತಿಯ ಅವಲೋಕನ ಮಾಡಿ ಕಾಟಾಚಾರದ ಶಾಂತಿ ಸಮಿತಿಯನ್ನು ಮಾಡಿ ಬಂದರು.
ಆದರೆ, ಮಣಿಪುರ ತಣ್ಣಗಾಗಲಿಲ್ಲ. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಮಣಿಪುರವನ್ನು ಭಾರತದ ಆಭರಣ ಎಂದು ಕರೆದಿದ್ದರು. ಮೈತೈ, ನಾಗಾ, ಕುಕಿ, ಜೋಮಿ ಸೇರಿ ಹಲವಾರು ಬುಡಕಟ್ಟು ಸಮುದಾಯಗಳು ಇಲ್ಲಿ ನೆಲೆಸಿವೆ. ವಿಭಿನ್ನ ಸಮುದಾಯಗಳು ಒಂದು ಭೂ ಪ್ರದೇಶದಲ್ಲಿ ಕೂಡಿ ಸೌಹಾರ್ದದಿಂದ ಬದುಕುತ್ತಿರುವ ನೂರಾರು ಉದಾಹರಣೆಗಳು ಜಗತ್ತಿನಲ್ಲಿ ಇವೆ.
ಮಣಿಪುರದಲ್ಲೂ ಜೊತೆಗೂಡಿ ಬದುಕಬಹುದಿತ್ತು. ಆದರೆ, ಎಲ್ಲ ಸಮುದಾಯಗಳಲ್ಲಿ ಉಗ್ರವಾದಿಗಳು, ಜನಾಂಗೀಯ ದ್ವೇಷಿಗಳು ಇರುವಂತೆ ಮಣಿಪುರದ ಮೈತೈ ಮತ್ತಿತರ ಸಮುದಾಯಗಳಲ್ಲಿ ಇದ್ದಾರೆ. ಹೀಗಾಗಿ ಬಂಡುಕೋರ ಚಟುವಟಿಕೆಗಳಿಗೂ ಇದು ಹೆಸರಾಗಿದೆ. ಇಂಥ ಮಣಿಪುರ 198ರಿಂದಲೂ ಅಶಾಂತಿಯ ತಾಣವಾಗಿದೆ.
ಇಲ್ಲಿನ ಬಂಡುಕೋರರನ್ನು , ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಲು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್ ಪಿಎ) ಜಾರಿಯಲ್ಲಿದೆ. ಈ ವಿಶೇಷಾಧಿಕಾರ ಕಾಯ್ದೆಯನ್ನು ಅಲ್ಲಿನ ಸೈನಿಕರು ದುರ್ಬಳಕೆ ಮಾಡಿಕೊಂಡು ಅನುಮಾನ ಬಂದವರನ್ನೆಲ್ಲ ಗುಂಡಿಕ್ಕಿ ಕೊಲ್ಲುತ್ತ ಬಂದಿದ್ದಾರೆ.ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಉದಾಹರಣೆಗಳೂ ಇವೆ.ಇದನ್ನು ಪ್ರತಿಭಟಿಸಿ 2000ದಲ್ಲಿ ಬೆತ್ತಲೆ ಪ್ರತಿಭಟನೆಯನ್ನು ನಡೆಸಿದ್ದರು.
ಅಲ್ಲಿನ ಸೇನೆಯ ದೌರ್ಜನ್ಯವನ್ನು ವಿರೋಧಿ ಸುವುದಕ್ಕಾಗಿ ವಿಧವೆಯರೆಲ್ಲ ಸೇರಿ ಸಂಘಟನೆ ಕಟ್ಟಿಕೊಂಡಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಮೆತೈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರಕಾರ ಮುಂದಾದಾಗ ಕುಕಿ ಸೇರಿದಂತೆ ಕೆಲವು ಬುಡಕಟ್ಟು ಸಮುದಾಯಗಳು ಸಾಂಕೇತಿಕ ವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದೇ ನೆಪವಾಗಿ ಮೆತೈ ಸಮುದಾಯದ ಕೆಲವು ಉಗ್ರಗಾಮಿ, ಜನಾಂಗವಾದಿ ಗುಂಪುಗಳು ಕುಕಿಗಳ ಮೇಲೆ ದ್ವೇಷದ ದಾಳಿಯನ್ನು ಆರಂಭಿಸಿದವು.ಇಂಥ ಸಂದರ್ಭದಲ್ಲಿ ಎಲ್ಲ ಬುಡಕಟ್ಟು ಸಮುದಾಯಗಳು ಹಾಗೂ ಮೈತೈ ಜನಾಂಗದ ಪ್ರಮುಖರ ಸಭೆಯನ್ನು ಕರೆದು ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬಹುದಾಗಿತ್ತು. ಇಂಥ ಪರಿಹಾರ ಕಂಡು ಹಿಡಿಯಬೇಕಾದರೆ ಸರಕಾರದ ಚುಕ್ಕಾಣಿ ಹಿಡಿದವರು ಎಲ್ಲ ಜಾತಿ, ಮತ, ಸಮುದಾಯ, ಬುಡಕಟ್ಟುಗಳ ಆಚೆಗೆ ನಿಂತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ಹಿಂದೆ ನಾಗಾಲ್ಯಾಂಡ್‌ನಂಥ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿದ ಉದಾಹರಣೆಗಳಿವೆ.ಆದರೆ ಜನ ವಿಭಜನೆಯನ್ನೇ ರಾಜಕೀಯ ಸಿದ್ಧಾಂತವನ್ನಾಗಿ ಮಾಡಿಕೊಂಡವರಿಂದ ಇಂಥ ಮನಸ್ಸು ಕಟ್ಟುವ, ಹೃದಯ ಬೆಸೆಯುವ ಕಾರ್ಯ ಸಾಧ್ಯವಾಗುವುದಿಲ್ಲ.ಮಣಿಪುರದಲ್ಲಿ ಇವರು ಮಾಡಿದ್ದು ಅದನ್ನೇ, ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಸಮುದಾಯದ ವಿರುದ್ಧ ಬಹುಸಂಖ್ಯಾತ ಮೈತೈ ಸಮುದಾಯವನ್ನು ಎತ್ತಿಕಟ್ಟಿದರು. ಮೈತೈ ಸಮುದಾಯದ ಕೆಲವು ಉಗ್ರಗಾಮಿ ಗುಂಪುಗಳು ಹಿಂದುತ್ವದ ಅಮಲನ್ನು ಏರಿಸಿಕೊಂಡವು.ಈಗ ಪರಿಸ್ಥಿತಿ ಕೈ ಮೀರಿದೆ.
ಮಣಿಪುರ ಸಮಸ್ಯೆಗೆ ವಿಶೇಷ ಸಶಸ್ತ್ರ ಪಡೆಗಳಿಂದ, ಸೇನಾಪಡೆಯ ತುಕಡಿಗಳಿಂದ, ಪೊಲೀಸ್ ಪಡೆಗಳಿಂದ ಬಂದೂಕನ್ನು ಎದೆಗೆ ಹಿಡಿದು ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ. ಮೊದಲು ಸರಕಾರದ ಧೋರಣೆ ಬದಲಾಗಬೇಕು.ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುವ ವಿಭಜನಕಾರಿ ರಾಜಕೀಯದ ಬದಲು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ, ಮನಸ್ಸು ಗೆಲ್ಲುವ ಮಾರ್ಗ ಅನುಸರಿಸಬೇಕು.
ಇಂಥ ಸಮಸ್ಯೆಗಳಿಗೆ ಪರಿಹಾರ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳಲ್ಲಿ ಸಿಗುವುದಿಲ್ಲ. ಅದರ ಬದಲಾಗಿ ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಷ್‌ಶ್ಚಂದ್ರ ಬೋಸ್, ಭಗತ್ ಸಿಂಗ್ ಮಾರ್ಗದಲ್ಲಿ ಹೊಸ ದಾರಿ ಕಂಡು ಹಿಡಿಯಬೇಕು. ಆದರೆ ಇಂದಿನ ಅಧಿಕಾರ ಸೂತ್ರ ಹಿಡಿದವರಿಗೆ ಅಂಥ ಬೌದ್ಧಿಕ ಶಕ್ತಿಯಾಗಲಿ, ಪ್ರಾಮಾಣಿಕತೆ ಯಾಗಲಿ ಇಲ್ಲ ಎಂಬುದಕ್ಕೆ ನಿಯಂತ್ರಣಕ್ಕೆ ಬಾರದ ಮಣಿಪುರ ಕಣ್ಣೆದುರಿನ ಸಾಕ್ಷಿಯಾಗಿದೆ.
ಭಾರತ ವಿದೇಶಿ ಆಳ್ವಿಕೆಯಿಂದ ಸ್ವತಂತ್ರ ಗೊಂಡಾಗ ವ್ಯಾಪಕ ಕೋಮು ಹಿಂಸಾಚಾರ ನಡೆಯಿತು.ಆಗ ಮಹಾತ್ಮ್ಮಾ ಗಾಂಧಿ ಉರಿಯುತ್ತಿದ್ದ ನೌಖಾಲಿಗೆ ಬರಿಗಾಲಲ್ಲಿ ಕೋಲೂರುತ್ತ ಹೋದರು.ಅಲ್ಲಿನ ಅತಿರೇಕವಾದಿಗಳು ಗಾಂಧಿ ಬರಬಾರದೆಂದು ದಾರಿಯುದ್ದಕ್ಕೂ ಕಲ್ಲು, ಮುಳ್ಳು, ಗಾಜಿನ ಚೂರುಗಳನ್ನು ಹಾಕಿದರು. ಗಾಂಧೀಜಿ ಕಲ್ಲು ಮುಳ್ಳಿನ ಮೇಲೆ ಕಾಲೂರುತ್ತ ಅಲ್ಲಿ ಹೋಗಿ ಉರಿಯುವ ಬೆಂಕಿಯನ್ನು ನಂದಿಸಿ ಬೆಳಕು ಚೆಲ್ಲುವ ದೀಪವನ್ನು ಹಚ್ಚಿದರು. ಗಾಯಗೊಂಡ ಮಣಿಪುರಕ್ಕೆ ಅಂಥ ಹೊಸ ಪರಿಹಾರ ಮಾರ್ಗ ಬೇಕಾಗಿದೆ.
ಆದರೆ ಸಮಸ್ಯೆಗಳ ಪರಿಹಾರದಲ್ಲಿ ಈಗ ಅಧಿಕಾರದಲ್ಲಿ ಇರುವವರಿಗೆ ಆಸಕ್ತಿ ಇಲ್ಲ.ಮಣಿಪುರ ಹೊತ್ತಿ ಉರಿಯುತ್ತಿರುವಾಗ ಇವರು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವುದು, ಬಿಜೆಪಿಯೇತರ ಸರಕಾರಗಳನ್ನು ಉರುಳಿಸುವಲ್ಲಿ ನಿರತರಾಗಿದ್ದಾರೆ. ಭಾರತ ಎಂಬುದು ಯಾವುದೇ ಒಂದು ಧರ್ಮಕ್ಕೆ, ಸಮುದಾಯಕ್ಕೆ, ಜನಾಂಗಕ್ಕೆ ಬುಡಕಟ್ಟಿಗೆ ಸೇರಿದ್ದಲ್ಲ.
ಇದು ಎಲ್ಲ ಸಮುದಾಯಗಳಿಗೆ ಸೇರಿದ ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲರೂ ಪರಸ್ಪರ ಪ್ರೀತಿಸಿ,ಗೌರವಿಸಿ, ಸೌಹಾರ್ದ ದಿಂದ ಬದುಕಿದರೆ ಮಾತ್ರ ಇದು ಸುರಕ್ಷಿತವಾಗಿ ಉಳಿಯುತ್ತದೆ.