ಜಾತಿಗಣತಿಗೆ ಅಪಸ್ವರ ಯಾರಿಂದ ?
Photo: freepik
ಹಿಂದುಳಿದ ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿ (ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ) ಸರಕಾರ ಸ್ವೀಕರಿಸುವ ಸೂಚನೆಗಳು ಕಾಣುತ್ತಿದ್ದಂತೆ ಅದರ ವಿರುದ್ಧ ಅಪಸ್ವರ ಕೇಳಿಬರತೊಡಗಿದೆ.ವೀರಶೈವ, ಲಿಂಗಾಯತ, ಮತ್ತು ಒಕ್ಕಲಿಗ ಸಮುದಾಯಗಳ ಜನಸಾಮಾನ್ಯರು ತಮ್ಮ ಪಾಡಿಗೆ ತಾವು ಸುಮ್ಮನಿದ್ದರೂ ಇವರನ್ನು ಜಾತಿ ಹೆಸರಿನಲ್ಲಿ ಬಳಸಿಕೊಂಡು ರಾಜಕೀಯ ಅಧಿಕಾರವನ್ನು ಮತ್ತು ಸಕಲ ಸಂಪನ್ಮೂಲಗಳನ್ನು ಗಳಿಸಿಕೊಂಡವರು ಇದನ್ನು ವಿರೋಧಿಸುತ್ತಿದ್ದಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ.ಕಾಂತರಾಜು ನೇತೃತ್ವದ ಹಿಂದುಳಿದ ಆಯೋಗ ಸಿದ್ಧಪಡಿಸಿದ ಈ ವರದಿಯನ್ನು ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ಆದರೆ ಅವರದೇ ಪಕ್ಷದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕರಿಗೆ ಇದು ಬೇಡವಾಗಿದೆ.
ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿಯವರು ಜಾತಿ ಗಣತಿ ನಡೆಯಲೇಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ನಿಂತುದರಿಂದ ಇದು ನುಂಗಲೂ ಆಗದ, ಉಗುಳಲೂ ಆಗದ ತುತ್ತಾಗಿ ಪರಿಣಮಿಸಿದೆ.
ಇದನ್ನೆಲ್ಲ ನೋಡುವಾಗ ನನಗೆ ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗಿನ ದಿನಗಳು ನೆನಪಿಗೆ ಬರುತ್ತವೆ. ಆಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನಕ್ಕೆ ಹೈಕೋರ್ಟ್ನ ಹಿರಿಯ ವಕೀಲರಾದ ಲಕ್ಷ್ಮಣ ಹಾವನೂರು ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗದ ವರದಿ ಬರುವ ಮುನ್ನವೇ ರಾಜ್ಯದಲ್ಲಿ ಇದರ ವಿರುದ್ಧ ಅಪಸ್ವರ ಕೇಳಿ ಬರತೊಡಗಿತು. ಅಲ್ಲಲ್ಲಿ ಪ್ರತಿಭಟನೆಗಳೂ ನಡೆದವು. ಆಗಲೂ ಇದನ್ನು ವಿರೋಧಿಸಿದವರು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ರಾಜಕೀಯ ನಾಯಕರು.ಈಗ ಶಾಮನೂರು ಅವರ ಜೊತೆಗೆ ಸೇರಿ ವಿರೋಧಿಸುತ್ತಿರುವ ಮಂತ್ರಿ ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಅಗ ಹಾವನೂರು ಆಯೋಗದ ವಿರುದ್ಧ ನಡೆದ ಚಳವಳಿಯ ಮುಂಚೂಣಿಯಲ್ಲಿದ್ದರು.ಕಾವಿಧಾರಿ ಮಠಾಧೀಶರೂ ಬೀದಿಗೆ ಬಂದಿದ್ದರು. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿಯನ್ನು ಪಟ್ಟು ಹಿಡಿದು ಜಾರಿಗೆ ತಂದರು.
ಆಗ ಹಾವನೂರ ಆಯೋಗದ ವರದಿಯನ್ನು ವಿರೋಧಿಸಿದವರು ದೇವರಾಜ ಅರಸು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದರು, ಈಗ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಇಂಥದೇ ಆರೋಪಗಳು ಕೇಳಿ ಬರುತ್ತಿವೆ. ಜಾತಿ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಶಾಮನೂರು ಶಿವಶಂಕರಪ್ಪ, ಡಿ.ಕೆ.ಶಿವಕುಮಾರ್,ಎಚ್.ಡಿ.ಕುಮಾರಸ್ವಾಮಿ , ಚೆಲುವರಾಯ ಸ್ವಾಮಿ, ಈಶ್ವರ ಖಂಡ್ರೆ ಹೀಗೆ ಎಲ್ಲರೂ ಒಂದಾಗಿದ್ದಾರೆ. ಇವರೇನು ರಾಜಕೀಯ ನಾಯಕರೋ ತಮ್ಮ ಜಾತಿಗಳ ನಾಯಕರೋ ಎಂಬ ಸಂದೇಹ ಬರುತ್ತದೆ. ಇನ್ನು ಬಸವಣ್ಣನವರ ಹೆಸರನ್ನು ಬಂಡವಾಳ ಮಾಡಿಕೊಂಡಿರುವ ಮಠಾಧೀಶರು ಈ ಬಗ್ಗೆ ಅಪ್ಪಿತಪ್ಪಿ ಮಾತಾಡುವುದಿಲ್ಲ. ಸುಮ್ಮನೆ ಯಾವುದಾವುದೋ ಅಪ್ರಸ್ತುತ ವಿಷಯಗಳನ್ನು ಕೆದಕಿ ಆಧುನಿಕ ಬಸವಣ್ಣನಾಗಲು ಹೊರಟಿದ್ದಾರೆ.
ಪ್ರತಿಯೊಂದು ಸಮುದಾಯದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಿ ನಿಖರ ಅಂಕಿ-ಅಂಶಗಳ ಸಹಿತ ಸಿದ್ಧಪಡಿಸಿದ ವರದಿ ಇನ್ನೂ ಸರಕಾರಕ್ಕೆ ಸಲ್ಲಿಸಿಲ್ಲ. ಸಲ್ಲಿಕೆಯಾಗದ ವರದಿಯಲ್ಲಿ ಏನಿದೆ ಎಂಬುದು ವಿರೋಧಿಸುವವರಿಗೆ ಗೊತ್ತಿದೆಯೆ?
ಕರ್ನಾಟಕದಲ್ಲಿ ಮಾತ್ರವಲ್ಲ ಬಿಹಾರದಲ್ಲೂ ಮುಖ್ಯಮಂತ್ರಿ ನಿತೀಶ್ಕುಮಾರ್ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದ್ದಾರೆ.ರಾಜಸ್ಥಾನದ ಕಾಂಗ್ರೆಸ್ ಸರಕಾರವೂ ಜಾತಿ ಸಮೀಕ್ಷೆಗೆ ಆದೇಶ ಮಾಡಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ದಿಗಿಲುಗೊಂಡು ‘ಜಾತಿ ಗಣತಿ ಸಮಾಜವನ್ನು ವಿಭಜಿಸುತ್ತದೆ’ ಎಂದು ಹೇಳಿದರು. ಇದನ್ನು ವಿರೋಧಿಸುವವರಿಗೆ ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ. ಮಂಡಲ ಆಯೋಗದ ವರದಿಯನ್ನು ತಡೆಯಲು ಕಮಂಡಲ ರಾಜಕೀಯ ಆರಂಭಿಸಿದವರಿಂದ ಇದಕ್ಕಿಂತ ಭಿನ್ನ ವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಜಾತಿ ಗಣತಿ ಮಾಡಿದರೆ ಸಮಾಜ ವಿಭಜಿಸುವ ಕಾರ್ಯ ಎಂದು ಅಗ್ಗದ ಟೀಕೆ ಮಾಡುವ ವಿಶ್ವಗುರು ನಡೆದು ಬಂದ ಹಾದಿ ಮತ್ತು ನಂಬಿದ ಸಿದ್ಧಾಂತವೇ ಸಮಾಜ ವಿಭಜಿಸುವ ಅಪಾಯಕಾರಿ ಹಾದಿ. ಹಿಂದುಳಿದವರನ್ನು ಹಿಂದುತ್ವದ ಗೂಟಕ್ಕೆ ಕಟ್ಟಿ ಹಾಕಿ ಓಟಿನ ರಾಶಿ ಮಾಡಲು ಹೊರಟವರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಜಾತಿ ಗಣತಿ ಸಮಾಜ ವಿಭಜಿಸುವ ಕೆಲಸವಲ್ಲ, ಒಂದು ಗೂಡಿಸುವ ಕೆಲಸ.
ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೊದಲು ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗಳ ಬಗ್ಗೆ ಅಧ್ಯಯನ ಮಾಡಬೇಕು. ಕಾಂತರಾಜು ನೇತೃತ್ವದ ಆಯೋಗ ಸಮಗ್ರ ಅಧ್ಯಯನ ಮಾಡಿ ವರದಿ ನೀಡಿದೆ. ಈ ವರದಿಯನ್ನು ಸರಕಾರ ಸ್ವೀಕರಿಸಿದ ನಂತರ ಅದನ್ನು ಪರಿಶೀಲಿಸಿ ಸದನದಲ್ಲಿ ಚರ್ಚೆಯಾಗಿ ಎಲ್ಲರ ಅಭಿಪ್ರಾಯ ಪಡೆದು ಜಾರಿಗೆ ತರಲಾಗುತ್ತಿದೆ.ಆದರೆ ಆ ವರದಿಯನ್ನೇ ಸ್ವೀಕರಿಸಬಾರದೆಂದು ಸರಕಾರದ ಮೇಲೆ ಒತ್ತಡ ತರುವುದು ಎಷ್ಟು ಸರಿ?. ಶಾಮನೂರು ಶಿವಶಂಕರಪ್ಪನವರಾಗಲಿ, ಡಿ.ಕೆ.ಶಿವಕುಮಾರ್ ಅವರಾಗಲಿ, ಇದನ್ನು ವಿರೋಧಿಸುವ ಯಾರೇ ಆಗಲಿ ತಮ್ಮ ಜಾತಿಯ ಮತಗಳಿಂದ ಮಾತ್ರ ಆರಿಸಿ ಬಂದಿಲ್ಲ. ಹಾಗೆ ನೋಡಿದರೆ ಶಾಮನೂರು ಅವರು ಗೆಲ್ಲುವ ದಾವಣಗೆರೆ ಮತಕ್ಷೇತ್ರದಲ್ಲಿ ಅವರ ಜಾತಿಯವರಿಗಿಂತ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನ್ಯಾಯವಾಗಿ ಒಂದು ಸಲವಾದರೂ ಮುಸ್ಲಿಮ್ ಸಮುದಾಯದ ಪ್ರತಿನಿಧಿ ಇಲ್ಲಿಂದ ಗೆದ್ದು ಬರಬೇಕಾಗಿತ್ತು. ಆದರೆ ಅವರು ಅದಕ್ಕೆ ಆಸೆ ಪಡದೆ ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಏಕೈಕ ಕಾರಣಕ್ಕಾಗಿ ಶಾಮನೂರು ಶಿವಶಂಕರಪ್ಪನವರನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ತಾವು ತಮ್ಮ ಜಾತಿಯ ನಾಯಕರು ಮಾತ್ರವಲ್ಲ ಎಲ್ಲ ಸಮುದಾಯಗಳ ನಾಯಕರು ಎಂಬ ವಿಶಾಲ ಮನಸ್ಸು ನಮ್ಮ ನಾಯಕರಿಗಿರಬೇಕು. ಬಾಯಿ ಬಿಟ್ಟರೆ ಬಸವಣ್ಣನವರ ಹೆಸರನ್ನು ಹೇಳುವ ಇವರು ತಮ್ಮ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಹಿಂದುಳಿದ ಆಯೋಗದ ವರದಿಯನ್ನು ವಿರೋಧಿಸುತ್ತಿದ್ದಾರೆ.
ಒಂದೆಡೆಯಿಂದ ವಿರೋಧ ಬರುತ್ತಿದ್ದರೆ, ಇನ್ನೊಂದೆಡೆ ಎಚ್.ಶಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ( ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಬೇಕೆಂದು ಅಹಿಂದ ವರ್ಗಗಳು ಒತ್ತಾಯ ತರುತ್ತಿವೆ. ಇನ್ನೊಂದೆಡೆ ಈ ವರದಿಯನ್ನು ಸ್ವೀಕರಿಸಿದರೆ ಹುಷಾರ್, ಈ ಹಿಂದೆ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಆದಂತೆ ಶೇ.100ರಷ್ಟು ತೊಂದರೆ ಆಗಲಿದೆ ಎಂದು ದಾವಣಗೆರೆಯ ಧಣಿ ಶಾಮನೂರು ಶಿವಶಂಕರಪ್ಪ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿಯನ್ನು ಸ್ವೀಕರಿಸಿದಾಗ ಅವರ ಬೆಂಬಲಕ್ಕೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜನವರ್ಗಗಳಿದ್ದವು. ಆದರೆ ಬಿಜೆಪಿ ಈ ಅಹಿಂದ ಓಟ್ ಬ್ಯಾಂಕನ್ನು ಒಡೆದು ಛಿದ್ರ ಗೊಳಸಿದೆ. ಅದು ಪ್ರಯೋಗಿಸಿದ ಮನುವಾದಿ, ಕೋಮುವಾದಿ ಹಿಂದುತ್ವದ ಅಸ್ತ್ರದಿಂದಾಗಿ ಶೋಷಿತ ಸಮುದಾಯಗಳು ಒಂದಾಗಿ ಉಳಿದಿಲ್ಲ. ವೀರಶೈವ, ಲಿಂಗಾಯತ ರನ್ನು ಎದುರು ಹಾಕಿಕೊಂಡು ಈ ವರದಿಯನ್ನು ಸ್ವೀಕರಿಸಿ , ಜಾರಿಗೆ ತರುವ ಸ್ಥಿತಿಯಲ್ಲಿ ಸಿದ್ದರಾಮಯ್ಯನವರು ಇಲ್ಲ.
ಈ ಗದ್ದಲದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರು ಏನನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ನಿರಂತರವಾಗಿ ನಿತ್ಯವೂ ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸುತ್ತಾ ಬದುಕಲು ಬಿಟ್ಟರೆ ಸಾಕೆಂಬ ಅಸಹಾಯಕತೆಯಲ್ಲಿ ಅವರಿದ್ದಾರೆ. ಸಾಚಾರ ವರದಿಯ ನೆನಪು ಯಾರಿಗೂ ಇಲ್ಲ. ಯು.ಟಿ. ಖಾದರ್ ಸ್ಪೀಕರ್ ಸ್ಥಾನ ಸಿಕ್ಕಿದ್ದು ಬಂಗಾರ ಸಿಕ್ಕಂತೆ ಎಂದು ಸಂಭ್ರಮಿಸುತ್ತಿದ್ದಾರೆ. ದಲಿತರನ್ನು ಎಡ-ಬಲಗಳನ್ನಾಗಿ ಒಡೆಯಲಾಗಿದೆ. ಹಿಂದುಳಿದ ವರ್ಗಗಳಲ್ಲಿ ಹಾಲುಮತ ಸಮುದಾಯ ಮಾತ್ರ ಸಿದ್ದರಾಮಯ್ಯನವರ ಜೊತೆ ಗಟ್ಟಿಯಾಗಿ ನಿಂತಿದೆ. ಇಂತಹ ಪರಿಸ್ಥಿತಿ ಯಲ್ಲಿ ಒಂದು ವೇಳೆ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದರೂ ಅದನ್ನು ಜಾರಿಗೆ ತರುವ ಸ್ಥಿತಿಯಲ್ಲಿ ಸರಕಾರ ಇಲ್ಲ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಚಳವಳಿಯಲ್ಲಿ ನಾಯಕತ್ವ ವಹಿಸಿದ್ದ ರಾಜಕೀಯ ನಾಯಕರು ಈಗ ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದಾರೆ. ಪರಸ್ಪರ ನೆಂಟಸ್ತಿಕೆಗಳು ಆಗಿವೆ. ಹೀಗೆ ಹಲವಾರು ಹೊಸ ಬೆಳವಣಿಗೆಗಳಿಂದಾಗಿ ಹಿಂದುಳಿದ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ
ಸಮೀಕ್ಷೆಯ ಭವಿಷ್ಯ ಏನಾಗುತ್ತದೋ ಕಾದು ನೋಡಬೇಕಾಗಿದೆ. ಅಕಸ್ಮಾತ್ ಹಿಂದುಳಿದ ಸಮುದಾಯಗಳು ಒಂದಾಗಿ ಪಟ್ಟು ಹಿಡಿದರೆ ಯಶಸ್ವಿಯಾಗಬಹುದು.