ಈ ಕೆಟ್ಟ ಕಾಲದಲ್ಲಿ ಯೆಚೂರಿ ನಿರ್ಗಮನ
ಭಾರತದ ಪ್ರಭುತ್ವವನ್ನು ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ವಶಪಡಿಸಿಕೊಂಡಿರುವಾಗ, ಸಂವಿಧಾನಕ್ಕೆ ಅಪಾಯ ಎದುರಾದಾಗ, ಬಹುತ್ವ ಭಾರತ ಬಿಕ್ಕಟ್ಟಿನಲ್ಲಿರುವಾಗ ಎಲ್ಲ ಸಮಾನ ಮನಸ್ಕ ಶಕ್ತಿಗಳು, ಪ್ರಜಾಪ್ರಭುತ್ವ ವಾದಿಗಳು, ಜಾತ್ಯತೀತ ಸಂಘಟನೆಗಳನ್ನು ಒಂದುಗೂಡಿಸುವ, ಪರಸ್ಪರ ವಿಶ್ವಾಸ ಕುದುರಿಸುವ, ಸದಾ ನಗುಮುಖದ ಸೀತಾರಾಮ ಯೆಚೂರಿಯಂಥ ಅಜಾತಶತ್ರುಗಳು ಎಲ್ಲಿ ಸಿಗುತ್ತಾರೆ?. ಬಹುತ್ವ ಭಾರತದ ಪ್ರಜಾಪ್ರಭುತ್ವ ಯೆಚೂರಿ ಅವರಂಥ ನೂರಾರು ಯೆಚೂರಿಗಳನ್ನು ಸೃಷ್ಟಿಸುತ್ತದೆ ಎಂಬ ಭರವಸೆಯ ಜೊತೆಗೆ ಮುನ್ನಡೆಯೋಣ.
ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಸೀತಾರಾಮ ಯೆಚೂರಿ ನಿರ್ಗಮಿಸಿದ ನಾಲ್ಕು ದಿನಗಳ ನಂತರವೂ ಮತ್ತೆ ಮತ್ತೆ ಅವರು ನೆನಪಾಗುತ್ತಾರೆ. ಸರಳತೆ, ಸಜ್ಜನಿಕೆ, ಸೌಜನ್ಯ ಮತ್ತು ಬದ್ಧತೆಗೆ ಇನ್ನೊಂದು ಹೆಸರಾಗಿದ್ದ ಯೆಚೂರಿ ಅವರ ಅಗಲಿಕೆಯಿಂದ ಕೇವಲ ಒಂದು ಪಕ್ಷ, ಸಂಘಟನೆಗೆ ಮಾತ್ರವಲ್ಲ, ಜಾತ್ಯತೀತ, ಬಹುತ್ವ ಭಾರತದ ಸುರಕ್ಷತೆಯ ಬಗ್ಗೆ ನಂಬಿಕೆ ಇರುವ ಕೋಟ್ಯಂತರ ಜನರಿಗೆ ತಮ್ಮ ಒಡನಾಡಿ ಬಂಧುವನ್ನು ಕಳೆದುಕೊಂಡಷ್ಟು ನೋವಾಗಿದೆ.
ಕಳೆದ ಏಳೂವರೆ ದಶಕಗಳ ಕಾಲಾವಧಿಯಲ್ಲಿ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ. ಬಿ.ಆರ್.ಅಂಬೇಡ್ಕರ್, ರಾಮ ಮನೋಹರ ಲೋಹಿಯಾ, ನಂಬೂದ್ರಿಪಾದ್, ಜ್ಯೋತಿ ಬಸು, ಮೌಲಾನಾ ಅಬುಲ್ ಕಲಾಂ ಆಝಾದ್ ಅವರಂಥ ಮತ್ತು ಅವರ ಒಡನಾಡಿಗಳು ಅತ್ಯಂತ ಎಚ್ಚರದಿಂದ ಕಟ್ಟಿದ ಭಾರತದ ಜನತಂತ್ರ ವ್ಯವಸ್ಥೆ ಅಪಾಯದ ಅಂಚಿಗೆ ಬಂದು ನಿಂತಿದೆ. ಕಾರ್ಯಾಂಗ ಮತ್ತು ಶಾಸಕಾಂಗಗಳು ದಾರಿ ತಪ್ಪಿದಾಗ, ಕಿವಿ ಹಿಂಡಿ ದಾರಿಗೆ ತರುತ್ತಿದ್ದ ಪ್ರಜಾಪ್ರಭುತ್ವದ ಜೀವ ಸೆಲೆಯನ್ನು ಉಳಿಸುತ್ತಿದ್ದ ನ್ಯಾಯದ ಬೆಳಕನ್ನು ನೀಡುತ್ತಿದ್ದ ನ್ಯಾಯಾಂಗದ ಬಗೆಗೂ ಅಪನಂಬಿಕೆ ಉಂಟಾಗುತ್ತಿರುವ ಕೆಲ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಇಂಥ ದುರಿತ ಕಾಲದಲ್ಲೇ ಸೀತಾರಾಮ ಯೆಚೂರಿ ಅವರಂಥ ಬೆಳಕಿನ ಕಿರಣಗಳು ಮಾಯವಾಗುತ್ತಿವೆ. ಫ್ಯಾಶಿಸಮ್ ಕರಾಳ ಛಾಯೆ ಕವಿಯುತ್ತಿರುವಾಗ ಒಕ್ಕೂಟ ದೇಶದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ.
ವಿಶ್ವ ಹಿಂದೂ ಪರಿಷತ್‌ನ ಉನ್ನತ ಮಟ್ಟದ ಸಭೆಯಲ್ಲಿ ಸುಪ್ರೀಂ ಕೋರ್ಟಿನ ಮೂವತ್ತು ಮಂದಿ ನಿವೃತ್ತ ನ್ಯಾಯಮೂರ್ತಿಗಳು ಪಾಲ್ಗೊಂಡು ಅದರ ಕಾರ್ಯಸೂಚಿಗೆ ಬೆಂಬಲವನ್ನು ವ್ಯಕ್ತಪಡಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಅದೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ .
ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡು ಆರತಿ ಬೆಳಗಿರುವುದು ವಿವಾದದ ಅಲೆ ಎಬ್ಬಿಸಿದೆ. ನ್ಯಾಯಾಂಗ ಮತ್ತು ಕಾರ್ಯಾಂಗಗಳ ನಡುವಿನ ಗೆರೆಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಅಳಿಸಿ ಹಾಕಿದ್ದಾರೆ ಎಂಬ ಕಳವಳ ಉಂಟಾಗಿದೆ.
ಪ್ರಧಾನಿಯವರು ಪೂಜೆಯಲ್ಲಿ ಭಾಗವಹಿಸಿರುವುದು ದೇಶಕ್ಕೆ ಅತ್ಯಂತ ಕೆಟ್ಟ ಸಂದೇಶ ನೀಡುತ್ತದೆ ಎಂಬ ಆಕ್ಷೇಪದಲ್ಲಿ ಅತಿಶಯೋಕ್ತಿ ಇಲ್ಲ. ಗಣಪತಿ ಪೂಜೆ ಯಾವುದೇ ಮನೆಯಲ್ಲಿ ನಡೆಯಲಿ ಅದು ಅತ್ಯಂತ ಖಾಸಗಿ ವಿಷಯ. ಮೋದಿಯವರು ಅಲ್ಲಿ ಯಾವ ಪ್ರಚಾರವಿಲ್ಲದೇ ಸುಮ್ಮನೆ ಹೋಗಿಬಂದಿದ್ದರೆ, ಇಷ್ಟು ಕೋಲಾಹಲ ಉಂಟಾಗುತ್ತಿರಲಿಲ್ಲ. ಆದರೆ, ಅವರು ಹೋಗಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ಪಡೆದುದರಿಂದ ಕಟು ಟೀಕೆಗಳು ವ್ಯಕ್ತವಾಗುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರ ಸಮೇತ ಹಂಚಿಕೊಂಡಿದ್ದಾರೆ.ಭಾರತ ಎಂಬುದು ಜಾತ್ಯತೀತ ,ಜನತಾಂತ್ರಿಕ ವ್ಯವಸ್ಥೆಯನ್ನು ಒಪ್ಪಿಕೊಂಡ ದೇಶ.ಈ ವ್ಯವಸ್ಥೆಯಲ್ಲಿ ನ್ಯಾಯಾಂಗವು ಕಾರ್ಯಾಂಗ, ಶಾಸಕಾಂಗಗಳ ಅಂತರ ಕಾಪಾ ಡಿಕೊಳ್ಳುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ. ಭಾರತವನ್ನು ಒಕ್ಕೂಟ ದೇಶ ಎಂಬುದನ್ನು ಒಪ್ಪದ ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿಯ ಹೆಸರಿನಲ್ಲಿ ಭಾರತದ ಅನೇಕತೆಯ ಚಟ್ಟ ಕಟ್ಟಲು ಹೊರಟಿರುವ ಸಿದ್ಧಾಂತವನ್ನು ಜಾರಿಗೆ ತರಲು ಬದ್ಧವಾಗಿರುವ ಪಕ್ಷ ಅಧಿಕಾರದಲ್ಲಿರುವಾಗ ಸಹಜವಾಗಿ ಆಘಾತ ಉಂಟಾಗುತ್ತದೆ. ಭಾರತದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ರಾಜ್ಯಗಳು ಕೇಂದ್ರದಲ್ಲಿರುವ ಸರಕಾರದ ತಾರತಮ್ಯ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟುತ್ತಿರುವಾಗ ಮಖ್ಯ ನ್ಯಾಯಮೂರ್ತಿಯವರ ಮನೆಯ ಗಣಪತಿ ಪೂಜೆಗೆ ಹೋದ ಪ್ರಧಾನಿ ಮೋದಿಯವರ ನಡೆ ದೇಶಕ್ಕೆ ಯಾವ ಸಂದೇಶ ನೀಡುತ್ತದೆ? ಈಗ ಜನಸಾಮಾನ್ಯರಲ್ಲಿ ಮೂಡುವ ಪ್ರಶ್ನೆಗಳಿಗೆ ಮುಖ್ಯ ನ್ಯಾಯಮೂರ್ತಿಯವರು ಯಾವ ಸಮಜಾಯಿಷಿ ನೀಡುತ್ತಾರೆ?
2014ರಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಒಕ್ಕೂಟ ತತ್ವಗಳಿಗೆ ಮಾರಕವಾದ ಕೆಲ ವಿದ್ಯಮಾನಗಳು ನಡೆಯುತ್ತಿವೆ. ಸದನದಲ್ಲಿ ಚರ್ಚೆಯಾಗದೇ ವಿಧೇಯಕಗಳು ಪಾಸಾಗುವುದು, ರಾಜ್ಯಗಳ ತೆರಿಗೆ ಪಾಲನ್ನು ಕೊಡದೇ ಸತಾಯಿಸುವುದು ಹೀಗೆ ಸಂವಿಧಾನದ ಮೂಲಭೂತ ತತ್ವಗಳನ್ನು ಹಂತಹಂತವಾಗಿ ನಾಶ ಮಾಡಲಾಗುತ್ತಿದೆ. ಕೆಲ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಅಧಿಕಾರದಲ್ಲಿ ಇರುವವರ ಕಿವಿ ಹಿಂಡಿದೆ. ಇದರಿಂದ ಅಸಮಾಧಾನಗೊಂಡ ಕೇಂದ್ರ ಸರಕಾರ ಅನೇಕ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮೇಲೆ ಸವಾರಿ ಮಾಡಲು ಯತ್ನಿಸಿದ್ದು ಸುಳ್ಳಲ್ಲ. ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಮೂವರ ಸಮಿತಿಯಲ್ಲಿ ಈ ಹಿಂದೆ ಇದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಕೈ ಬಿಟ್ಟಿದೆ.
ಮಹಾರಾಷ್ಟ್ರ ಮೂಲದ ಮುಖ್ಯ ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್ ಅವರು ಅವರ ತಂದೆಯವರಂತೆ ಪ್ರಾಮಾಣಿಕ ವ್ಯಕ್ತಿ ಎಂಬುದರಲ್ಲಿ ಸಂಶಯವಿಲ್ಲ. ಇವರ ಕೆಲವು ತೀರ್ಪುಗಳು ವಿವಾದಾತೀತವಾಗಿವೆ. ಇಂಥವರು ಅತ್ಯಂತ ಖಾಸಗಿ ಕಾರ್ಯಕ್ರಮವಾದ ತಮ್ಮ ಮನೆಯ ಗಣಪತಿ ಪೂಜೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಪೂಜೆಗೆ ಹೋದರೂ ಎಕ್ಸ್ ಖಾತೆಯಲ್ಲಿ ಫೋಟೊ ಹಂಚಿಕೊಳ್ಳಬಾರದಿತ್ತು. ಇಂಥ ಖಾಸಗಿ ಕಾರ್ಯಕ್ರಮಕ್ಕೆ ಕ್ಯಾಮರಾ ಜೊತೆ ಹೋಗುವುದು ಅಗತ್ಯವಿರಲಿಲ್ಲ. ಈ ಪೂಜಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ತಲೆ ಮೇಲೆ ಗಾಂಧಿ ಟೋಪಿ ಹಾಕಿಕೊಂಡಿದ್ದಾರೆ. ಸಾಮಾನ್ಯವಾಗಿ ಜನರು ಪೂಜೆ, ಲಗ್ನ ಮುಂತಾದ ಕಾರ್ಯಕ್ರಮಗಳಲ್ಲಿ ತಲೆಗೆ ಟೋಪಿ ಧರಿಸುತ್ತಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಟೋಪಿಯನ್ನು ಹಾಕಿದ್ದು, ಯಾರಿಗೆ ಟೋಪಿ ಹಾಕಲು ಎಂಬುದು ನಿಗೂಢ ಪ್ರಶ್ನೆಯಾಗಿದೆ.
ಇಂಥ ಸಂದರ್ಭಗಳಲ್ಲೇ ಕಮ್ಯುನಿಸ್ಟ್ ನಾಯಕ ಸೀತಾರಾಮ ಯೆಚೂರಿ ನೆನಪಾಗುತ್ತಾರೆ. ನಿರಂಕುಶ ಫ್ಯಾಶಿಸ್ಟ್ ಶಕ್ತಿಗಳು ಜಾತ್ಯಾತೀತ ಜನತಾಂತ್ರಿಕ ಭಾರತದ ಮೇಲೆ ನಿಯಂತ್ರಣ ಸಾಧಿಸುತ್ತಿರುವ ನಿರ್ಣಾಯಕ ಸನ್ನಿವೇಶದಲ್ಲಿ ಕಾಂಗ್ರೆಸ್ ಸಹಿತ ಸಂಯುಕ್ತ ರಂಗದ ಪ್ರಸ್ತಾವ ಮಾಡುತ್ತಲೇ ಬಂದರು. ಅದಕ್ಕೆ ತಕ್ಕಂತೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ನೇಹಪರ ಮನೋಭಾವ ಅವರಿಗಿತ್ತು. ಆದರೆ, ಪಕ್ಷದ ಒಳಗೆ ಇದಕ್ಕೆ ಪ್ರಕಾಶ್ ಕಾರಟ್ ಮತ್ತು ಅವರ ಬೆಂಬಲಿಗರು ವಿರೋಧಿಸುತ್ತಲೇ ಬಂದರು. ಸಂಸತ್ತಿನಲ್ಲಿ ಅತ್ಯುತ್ತಮ ವಾಕ್ಪಟು ಎಂದು ಹೆಸರಾಗಿದ್ದ ಯೆಚೂರಿ ಅವರಿಗೆ ಮೂರನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಲು ಪಕ್ಷ ಅವಕಾಶ ನೀಡಲಿಲ್ಲ. ಪಕ್ಷದ ಕೇಂದ್ರ ಸಮಿತಿಯಲ್ಲಿ ವಿರೋಧವಿದ್ದರೂ ಯೆಚೂರಿ 2015 ಮತ್ತು 2018 ಹೀಗೆ ಎರಡು ಬಾರಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು ಪಕ್ಷದ ಮಹಾಧಿವೇಶನದಲ್ಲಿ ಸಾಮಾನ್ಯ ಪ್ರತಿನಿಧಿಗಳು ನೀಡಿದ ಬೆಂಬಲದಿಂದ. ಕಮ್ಯುನಿಸ್ಟ್ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವಕ್ಕೆ ಇದು ಉದಾಹರಣೆ.
ಮೂರನೇ ಬಾರಿ ರಾಜ್ಯಸಭೆಯ ಸದಸ್ಯರಾಗಲು ಪಕ್ಷದ ಪಾಲಿಟ್ ಬ್ಯುರೋ ಮತ್ತು ಕೇಂದ್ರ ಸಮಿತಿ ವಿರೋಧಿಸಿದಾಗ ಪಕ್ಷದ ಬಹುಮತದ ತೀರ್ಮಾನವನ್ನು ಯೆಚೂರಿ ಒಪ್ಪಿ ಪಕ್ಷದ ಶಿಸ್ತಿಗೆ ಬದ್ಧರಾಗಿ ನಡೆದರು.ಅದೇ ರೀತಿ ಯೆಚೂರಿ ಮೂರನೇ ಅವಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಬಾರದು ಎಂದು ಕೇಂದ್ರ ಸಮಿತಿಯಲ್ಲಿ ಕೈಗೊಂಡ ನಿರ್ಣಯವನ್ನು ಸಿಪಿಎಂ ಮಹಾಧೀಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಸಾಮಾನ್ಯ ಪ್ರತಿನಿಧಿಗಳು ವಿರೋಧಿಸಿದಾಗ ಪ್ರಕಾಶ್ ಕಾರಟ್ ಮತ್ತು ಕೇಂದ್ರ ಸಮಿತಿಗಳ ಸದಸ್ಯರು ಪ್ರತಿನಿಧಿಗಳ ನಿಲುವಿಗೆ ಸ್ಪಂದಿಸಿ ಯೆಚೂರಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಸಮ್ಮತಿ ನೀಡಿದರು. ಇದು ಕಮ್ಯುನಿಸ್ಟ್ ಪಕ್ಷದ ಶಿಸ್ತು ಮತ್ತು ಆಂತರಿಕ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಿದೆ.
ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಹರಿಕಿಶನ್ ಸಿಂಗ್ ಸುರ್ಜಿತ್ ಅವರು ಬದುಕಿರುವವರೆಗೆ ಫ್ಯಾಶಿಸ್ಟ್
ಕೋಮುವಾದಿ ಶಕ್ತಿಗಳು ಅಧಿಕಾರವನ್ನು ಕಬಳಿಸಲು ಬಿಡಲಿಲ್ಲ. ಅತ್ಯಂತ ನಿರ್ಣಾಯಕ ಸಂದರ್ಭಗಳಲ್ಲಿ ಕೋಮುವಾದದ ವಿರುದ್ಧ ಸಮಾನ ಮನಸ್ಕ ಪಕ್ಷಗಳನ್ನು ಒಂದುಗೂಡಿಸುವ ಚಾಣಾಕ್ಷತೆ ಅವರಿಗಿತ್ತು.ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್, ಶರದ್ ಪವಾರ್, ಚಂದ್ರಬಾಬು ನಾಯ್ಡುರಂಥವರು ಸುರ್ಜಿತ್ ಹಾಕಿದ ಗೆರೆ ದಾಟುತ್ತಿರಲಿಲ್ಲ. ಅದೇ ರೀತಿ ಸೀತಾರಾಮ ಯೆಚೂರಿ ಅವರು ಕೂಡ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಸಮಾನ ಮನಸ್ಕ ಪಕ್ಷಗಳನ್ನು, ವ್ಯಕ್ತಿಗಳನ್ನು ಒಂದುಗೂಡಿಸುವ ಚಾಣಾಕ್ಷತೆ ಹೊಂದಿದ್ದರು.
ದಲಿತರು ಮತ್ತು ಕಮ್ಯುನಿಸ್ಟರ ಏಕತೆ ಮಾತ್ರ ಬಹುತ್ವ ಭಾರತವನ್ನು ಫ್ಯಾಶಿಸ್ಟ್ ಸರ್ವಾಧಿಕಾರದಿಂದ ಕಾಪಾಡಲು ಸಾಧ್ಯವೆಂದು ಯೆಚೂರಿ ಅವರು ಪ್ರತಿಪಾದಿಸುತ್ತಿದ್ದರು. ‘ನೀಲ್ ಸಲಾಮ್, ಲಾಲ್ ಸಲಾಮ್’ ಎಂದು ಘೋಷ ವಾಕ್ಯ ನೀಡಿದ ಯೆಚೂರಿ 2014ರ ಚುನಾವಣೆ ನಂತರ ‘ಭಾರತದ ಸಂವಿಧಾನ ಅಪಾಯದಲ್ಲಿದೆ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು.
ರಾಜ್ಯಸಭೆಯ ಸದಸ್ಯರಾಗಿ ತಮ್ಮ ಪ್ರಖರ ಮಾತುಗಳ ಮೂಲಕ ಬಿಜೆಪಿ ಸರಕಾರದ ನಿದ್ದೆಗೆಡಿಸಿದ ಯೆಚೂರಿ ಮಾತಾಡಲು ನಿಂತರೆ,ಇಡೀ ಸದನ ಸ್ತಬ್ಧವಾಗುತ್ತಿತ್ತು. ಹಲವಾರು ಅಂಕಿ ಅಂಶಗಳು ಹಾಗೂ ಸಾಕ್ಷಾಧಾರಗಳ ಮೂಲಕ ಓತಪ್ರೋತವಾಗಿ ಮಾತನಾಡುತ್ತಿದ್ದ ಅವರಿಗೆ ಬಿಜೆಪಿ ಮತ್ತು ಸಂಘಪರಿವಾರದವರು ಸೈದ್ಧಾಂತಿಕ ಎದುರಾಳಿಗಳಾದರೂ ವೈಯಕ್ತಿಕ ಸ್ನೇಹ ಸಂಬಂಧ ಕ್ಕೆ ಧಕ್ಕೆಯಾಗಲಿಲ್ಲ.
ಒಮ್ಮೆ ರಾಜ್ಯಸಭೆಯಲ್ಲಿ ಬಿಜೆಪಿ ಜಾತಿ, ಮತದ ಬಗ್ಗೆ ಪ್ರಚೋದನಕಾರಿ ಮಾತುಗಳನ್ನಾಡಿದಾಗ ಎದ್ದು ನಿಂತ ಕಾಮ್ರೇಡ್ ಯೆಚೂರಿ, ‘ಹುಟ್ಟು ಆಕಸ್ಮಿಕ. ಜಾತಿ, ಮತಗಳು ನಂತರ ಅಂಟಿಕೊಂಡವು. ಉದಾಹರಣೆಗೆ ನಾನು ಆಂಧ್ರಪ್ರದೇಶದ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಆಕಸ್ಮಿಕವಾಗಿ ಜನಿಸಿದೆ. ನನ್ನ ಅಜ್ಜ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದರು. ಮದ್ರಾಸ್‌ನಲ್ಲಿ 1952ರಲ್ಲಿ ಜನಿಸಿದ ನಾನು 1956ರಲ್ಲಿ ವ್ಯಾಸಂಗಕ್ಕೆ ಹೈದರಾಬಾದ್‌ಗೆ
ಬಂದೆ. ನಂತರ ದಿಲ್ಲಿಯ ಜೆ ಎನ್ ಯು ಸೇರಿದೆ. ನನ್ನ ಹೆಂಡತಿ ಮೈಸೂರಿನ ರಜಪೂತ ಕುಟುಂಬದವಳು. ಆಕೆಯ ತಂದೆ ಸೂಫಿ ಮುಸ್ಲಿಮ್. ಹಾಗಾದರೆ ನನ್ನ ಮಕ್ಕಳಿಗೆ ಯಾವ ಜಾತಿ,ಯಾವ ಧರ್ಮ. ಅವರು ಭಾರತೀಯರು ಮಾತ್ರ’ ಎಂದರು. ಆಗ ಅವರನ್ನು ಲೇವಡಿ ಮಾಡಿದವರು ಸೇರಿ ಸದನದ ಎಲ್ಲಾ ಸದಸ್ಯರು ಕರತಾಡನ ಮಾಡಿದರು.
ಈ ಕೆಟ್ಟ ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಏಕತೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಸೀತಾರಾಮ ಯೆಚೂರಿ ಅವರು, ‘ಕಮ್ಯುನಿಸ್ಟ್ ಪಕ್ಷಗಳ ಏಕತೆಗೆ ರಿಯಲ್ ಕಾರಣ ಎಂದು ಕೆಲವು ಸಂಗಾತಿಗಳು ಕೇಳಿದರೆ, ಬೇರೆ ಕಾರಣವೇನಿಲ್ಲ ರಿಯಲ್ ಎಸ್ಟೇಟ್ ಕಾರಣ’ ಎಂದು ತಮಾಷೆಗಾಗಿ ಹೇಳುತ್ತಿದ್ದರು. ಇದರರ್ಥ ಎರಡೂ ಕಮ್ಯುನಿಸ್ಟ್ ಪಕ್ಷಗಳ ಒಡೆತನದಲ್ಲಿರುವ ಆಸ್ತಿಯ ಒಡೆತನ ಪ್ರಶ್ನೆ ಎಂಬುದಾಗಿತ್ತು.
ಕೇಂದ್ರದಲ್ಲಿ ಯುಪಿಎ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವಲ್ಲಿ ಸೀತಾರಾಮ ಯೆಚೂರಿ ಮುಖ್ಯ ಪಾತ್ರ ವಹಿಸಿದ್ದರು. ವಿಶೇಷವಾಗಿ ಜವಾಹರ್ ರೋಜ್‌ಗಾರ್‌ಯೋಜನೆ, ಮಾಹಿತಿ ಹಕ್ಕು ಕಾಯ್ದೆ ಮುಂತಾದವುಗಳು ಯೆಚೂರಿ ಕಲ್ಪನೆಯಿಂದ ಮೂಡಿ ಬಂದವು. ಎಲ್ಲಾ ಪ್ರತಿಪಕ್ಷಗಳನ್ನು ಒಂದು ಗೂಡಿಸುವುದು ಸುಲಭದ ಸಂಗತಿಯಲ್ಲ.ಅದು ಕಪ್ಪೆಯನ್ನು ತಕ್ಕಡಿಯಲ್ಲಿ ಒಟ್ಟು ತೂಗಿದಂತೆ. ಆದರೆ, ಸಮಾನ ಮನಸ್ಕ ಪಕ್ಷಗಳನ್ನು ಒಂದುಗೂಡಿಸುವಲ್ಲಿ ಯೆಚೂರಿ ಪಾತ್ರ ನಿರ್ಣಾಯಕವಾದದ್ದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟ ರಚಿಸಿ ಕೋಮುವಾದಿ ಬಿಜೆಪಿಗೆ ಸವಾಲು ಹಾಕುವಲ್ಲಿ ಕೂಡ ಯೆಚೂರಿ ಪ್ರಮುಖ ಪಾತ್ರ ವಹಿಸಿದರು.
ಭಾರತದ ಪ್ರಭುತ್ವವನ್ನು ಕೋಮುವಾದಿ ಫ್ಯಾಶಿಸ್ಟ್
ಶಕ್ತಿಗಳು ವಶಪಡಿಸಿಕೊಂಡಿರುವಾಗ, ಸಂವಿಧಾನಕ್ಕೆ ಅಪಾಯ ಎದುರಾದಾಗ, ಬಹುತ್ವ ಭಾರತ ಬಿಕ್ಕಟ್ಟಿನಲ್ಲಿರುವಾಗ ಎಲ್ಲ ಸಮಾನ ಮನಸ್ಕ ಶಕ್ತಿಗಳು, ಪ್ರಜಾಪ್ರಭುತ್ವ ವಾದಿಗಳು, ಜಾತ್ಯತೀತ ಸಂಘಟನೆಗಳನ್ನು ಒಂದುಗೂಡಿಸುವ, ಪರಸ್ಪರ ವಿಶ್ವಾಸ ಕುದುರಿಸುವ, ಸದಾ ನಗುಮುಖದ ಸೀತಾರಾಮ ಯೆಚೂರಿಯಂಥ ಅಜಾತಶತ್ರುಗಳು ಎಲ್ಲಿ ಸಿಗುತ್ತಾರೆ?. ಬಹುತ್ವ ಭಾರತದ ಪ್ರಜಾಪ್ರಭುತ್ವ ಯೆಚೂರಿ ಅವರಂಥ ನೂರಾರು ಯೆಚೂರಿಗಳನ್ನು ಸೃಷ್ಟಿಸುತ್ತದೆ ಎಂಬ ಭರವಸೆಯ ಜೊತೆಗೆ ಮುನ್ನಡೆಯೋಣ.
ಕೊನೆಯದಾಗಿ ಚಿಕ್ಕಬಳ್ಳಾಪುರದಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ಕರ್ನಾಟಕ ರಾಜ್ಯ ಮಹಾಧಿವೇಶನಕ್ಕೆ ಯೆಚೂರಿ ಅವರು ಬಂದಾಗ ರಾಹುಲ ಬೆಳಗಲಿ ವರದಿಗಾರನಾಗಿ ಹೋಗಿದ್ದ. ಆಗ ಜಿ.ವಿ.ಶ್ರೀರಾಮರೆಡ್ಡಿ ಅವರು ಯೆಚೂರಿ ಅವರಿಗೆ ರಾಹುಲನನ್ನು ಪರಿಚಯಿಸುತ್ತ, ‘ಇವರದು ಕಮ್ಯುನಿಸ್ಟ್ ಕುಟುಂಬ’ ಎಂದು ಹೇಳಿದಾಗ ಯೆಚೂರಿ ಖುಷಿಪಟ್ಟರು. ಯೆಚೂರಿ ಅವರನ್ನು ಏಳೆಂಟು ಸಲ ಭೇಟಿಯಾಗಿರಬಹುದು. ಆದರೆ, ಪ್ರತೀಸಲ ಯೆಚೂರಿ ನನ್ನನ್ನು ಗುರುತು ಹಿಡಿದು ಮಾತಾಡಿಸುತ್ತಿದ್ದರು.