ಚೊಚ್ಚಲ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಭದ್ರ ಕೋಟೆಯಾದ ವಯನಾಡ್ | 4.10 ಲಕ್ಷ ಮತಗಳ ಮುನ್ನಡೆ
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ | PC : PTI
ವಯನಾಡ್ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದಾರೆ.
ತನ್ನ ಚೊಚ್ಚಲ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು 4,10,910 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಆ ಮೂಲಕ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರು ಗಳಿಸಿದ ಮತಕ್ಕಿಂತ 46488 ಮತ ಹೆಚ್ಚು ಗಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಿಯಾಂಕಾ ಗಾಂಧಿ ಅವರು ಅವರು ವಯನಾಡ್ ಲೋಕಸಭಾ ಉಪಚುನಾವಣೆಯ ಮತ ಎಣಿಕೆಯಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡರು. ಈ ಮುನ್ನಡೆಯು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಲ್ಲಿ ಹುರುಪು ಮೂಡಿಸಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಪಡೆದ ಮತಕ್ಕಿಂತ ಪ್ರಿಯಾಂಕಾಗೆ ಹೆಚ್ಚಿನ ಮತಗಳು ಬರಲಿದೆ. ದಾಖಲೆಯ ಅಂತರದಿಂದ ಅವರು ಗೆಲ್ಲುತ್ತಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡರು. ಇದೇ ಮಾತನ್ನು ಇಂಡಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಕೆ ಕುನ್ಹಾಲಿಕುಟ್ಟಿ ಹೇಳಿದರು.
ಫಲಿತಾಂಶದ ಹಿಂದಿನ ದಿನ ಬಿಜೆಪಿ ನಾಯಕ ಅನಿಲ್ ಕೆ ಆಂಟನಿ, ಪ್ರಿಯಾಂಕಾ ಗಾಂಧಿ ಅವರ ಗೆಲುವಿನ ಅಂತರವು 2024 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಳಿಸಿದ್ದಕ್ಕಿಂತ ಕಡಿಮೆಯಿರುತ್ತದೆ ಎಂದು ಹೇಳಿದ್ದರು. ಆದರೆ ಅಂತಿಮ ಫಲಿತಾಂಶ ಬಂದಾಗ ಪ್ರಿಯಾಂಕಾ ಅದೆಲ್ಲವನ್ನೂ ಬುಡಮೇಲು ಮಾಡಿದರು.
ಇತ್ತೀಚಿನ ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಪ್ರಿಯಾಂಕಾ 6,22,338 ಮತಗಳೊಂದಿಗೆ 4,10,910 ಮತಗಳ ಮುನ್ನಡೆ ಸಾಧಿಸಿದ್ದಾರೆ. ಎಲ್ಡಿಎಫ್ನ ಸತ್ಯನ್ ಮೊಕೇರಿ 2,11,407 ಮತಗಳನ್ನು ಗಳಿಸಿ ಅವರಿಗಿಂತ ಹಿಂದಿದ್ದು, ಎನ್ಡಿಎಯ ನವ್ಯಾ ಹರಿದಾಸ್ 1,09,939 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಅವರು 6,47,445 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಅನ್ನಿ ರಾಜಾ ವಿರುದ್ಧ 3,64,422 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2019ರಲ್ಲಿ ಅವರು 7,06,367 ಮತಗಳನ್ನು ಪಡೆದು 4,31,770 ಮತಗಳ ಅಂತರದಿಂದ ಗೆದ್ದಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಗೆದ್ದ ನಂತರ ಉತ್ತರ ಪ್ರದೇಶದ ರಾಯ್ ಬರೇಲಿಯನ್ನು ಉಳಿಸಿಕೊಂಡು ರಾಹುಲ್ ಗಾಂಧಿ ವಯನಾಡ್ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ್ದರು. ಆ ಬಳಿಕ ಪಕ್ಷವು ಅವರ ಸಹೋದರಿ ಪ್ರಿಯಾಂಕಾ ಅವರನ್ನು ನಾಮನಿರ್ದೇಶನ ಮಾಡಿತು.
14 ಲಕ್ಷಕ್ಕೂ ಹೆಚ್ಚು ನೋಂದಾಯಿತ ಮತದಾರರನ್ನು ಹೊಂದಿರುವ ವಯನಾಡ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಶೇಕಡಾ 65 ರಷ್ಟು ಮತ ಚಲಾವಣೆಯಾಗಿತ್ತು. ಈ ವರ್ಷದ ಏಪ್ರಿಲ್ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 74ರಷ್ಟು ಮತದಾನ ನಡೆದಿತ್ತು.