ಪಂಜಾಬ್: ಬಡತನದಿಂದ ಬೇಸತ್ತು ಮೂವರು ಹೆಣ್ಣು ಮಕ್ಕಳ ಹತ್ಯೆ; ದಂಪತಿಯ ಬಂಧನ
ಸಾಂದರ್ಭಿಕ ಚಿತ್ರ
ಚಂಡಿಗಡ : ಬಡತನದಿಂದ ಬೇಸತ್ತು ಮೂವರು ಹೆಣ್ಣು ಮಕ್ಕಳನ್ನು ಹತ್ಯೆಗೈದು ಪೆಟ್ಟಿಗೆಯಲ್ಲಿ ತುಂಬಿಸಿದ ಆರೋಪದಲ್ಲಿ ವಲಸೆ ಕಾರ್ಮಿಕ ದಂಪತಿಯನ್ನು ಪಂಜಾಬ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಜಲಾಂಧರ್ನ ಮುಖ್ಸುದನ್ ಪ್ರದೇಶದಲ್ಲಿ ರವಿವಾರ ಬಡತನದಿಂದ ಬೇಸತ್ತ ವಲಸೆ ಕಾರ್ಮಿಕ ಸುಶೀಲ್ ಮಂಡಲ್ ಹಾಗೂ ಆತನ ಪತ್ನಿ ಮೀನು ತಮ್ಮ ಮೂವರು ಪುತ್ರಿಯರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸುಶೀಲ್ ಮಂಡಲ್ ಹಾಗೂ ಮೀನು ದಂಪತಿಗೆ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಐದು ಮಂದಿ ಮಕ್ಕಳು. ಇವರಲ್ಲಿ ಮೂವರು ಹೆಣ್ಣು ಮಕ್ಕಳನ್ನು ಹತ್ಯೆಗೈದು ಪೆಟ್ಟಿಗೆಯಲ್ಲಿ ತುಂಬಿಸಿ ಮನೆಯಲ್ಲಿರಿಸಿದ್ದರು. ಎರಡು ವರ್ಷದ ಪುತ್ರ ಹಾಗೂ 1 ವರ್ಷದ ಪುತ್ರಿಯನ್ನು ಕರೆದುಕೊಂಡು ಕೆಲಸಕ್ಕೆ ತೆರಳಿದ್ದರು. ಅನಂತರ ತಮ್ಮ ಪುತ್ರಿಯರಾದ ಅಮೃತ ಕುಮಾರಿ (9), ಶಕ್ತಿ ಕುಮಾರಿ (7), ಕಾಂಚನ ಕುಮಾರಿ (4) ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ದಂಪತಿಯ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ 4 ಹಾಗೂ 9 ವರ್ಷಗಳ ನಡುವಿನ ಪ್ರಾಯದ ಮೂವರು ಹೆಣ್ಣು ಮಕ್ಕಳ ಮೃತದೇಹ ಪೆಟ್ಟಿಗೆಯಲ್ಲಿ ಪತ್ತೆಯಾಗಿದೆ.
ತಮ್ಮ ಮೂರು ಮಕ್ಕಳಿಗೆ ವಿಷ ನೀಡಿ ಹತ್ಯೆಗೈದು, ಪೆಟ್ಟಿಗೆಯಲ್ಲಿ ತುಂಬಿಸಿ ಇರಿಸಿರುವುದನ್ನು ಒಪ್ಪಿಕೊಂಡ ಬಳಿಕ ಸುಶೀಲ್ ಮಂಡಲ್ ಹಾಗೂ ಮೀನುವನ್ನು ಜಲಾಂಧರ್ ನಿಂದ ಸೋಮವಾರ ಬಂಧಿಸಲಾಗಿದೆ ಅವರು ಪೊಲೀಸರು ತಿಳಿಸಿದ್ದಾರೆ.