ಮಾ. 10ರಂದು ಬೆಂಗಳೂರಿನಲ್ಲಿ ರೈತ-ಕೃಷಿ ಕಾರ್ಮಿಕರಿಂದ ಧರಣಿ

ರಾಯಚೂರು: ರೈತ-ಕೃಷಿ ಕಾರ್ಮಿಕರ ಹೋರಾಟ ಸಂಘಟನೆಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿಧಾನಸೌಧ ಚಲೋ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ಶಶಿಧರ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು, ಉದ್ಯೋಗ ಖಾತ್ರಿ ಕೆಲಸಗಾರರಿಗೆ ದಿನಕ್ಕೆ 600 ರೂ. ವೇತನ ನೀಡಬೇಕು, ವಿದ್ಯುತ್ ಕಾಯ್ದೆ 2023ನ್ನು ರದ್ದು ಮಾಡಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡಲು ಹಾಗೂ ಹೊಸ ಕೃಷಿ ಮಾರುಕಟ್ಟೆ ನೀತಿಯನ್ನು ಹಿಂದೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದರು
ರೈತರಿಗೆ ಸುಸ್ಥಿರ ಬದುಕು ಕೊಡುತ್ತೇವೆ, ದುಪ್ಪಟ್ಟು ಅದಾಯ ಮಾಡುತ್ತೇವೆ ಎಂದು ಭರವಸೆಗಳ ಮಳೆ ಸುರಿಸಿದ ಸರ್ಕಾರ ಹೊಸ ಕೃಷಿ ನೀತಿಗಳನ್ನು ಅಂದು ರೈತರ ಬದುಕನ್ನು ಬರಡಾಗಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನೀತಿಗಳ ಪರಿಣಾಮವಾಗಿಯೇ ಇಂದು ದೇಶದಲ್ಲಿ 10 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಬೀಜ, ಗೊಬ್ಬರ, ಕೀಟನಾಶಕಗಳಂತಹ ಕೃತಿ ಒಳಸುರಿಗಳ ಬೆಲೆ ಗಗನಕ್ಕೇರಿದೆ. ಇನ್ನೊಂದು ಕಡೆ, ರೈತ ಬೆಳೆಯುವ ಬೆಳೆಯ ಬೆಲೆ ಪಾತಾಳ ಸೇರುತ್ತಿದೆ. ರೈತ ದೇಶದ ಬೆನ್ನೆಲುಬು ಎನ್ನುತ್ತಾ ಸರಕಾರಗಳೇ ರೈತನ ಬೆನ್ನೆಲುಬನ್ನು ಮುರಿಯುತ್ತಿದೆ ಎಂದು ದೂರಿದರು.
ಸಾಲದೆಂಬಂತೆ ಅತಿವೃಷ್ಟಿ, ಅನಾವೃಷ್ಟಿ, ವಾತಾವರಣ ವೈಪರಿತ್ಯ, ರೋಗ, ಪ್ರವಾಹಗಳಿಗೆ ಬಲಿಯಾಗಿ ಪ್ರತಿ ವರ್ಷವೂ ಬೆಳೆ ನಷ್ಟಕ್ಕೆ ಒಳಗಾಗುತ್ತಿದ್ದಾನೆ. ಇಂತಹ ನಕ್ಷಕ್ಕೆ ಬೆಳಗಾಗಿರುವ ರೈತನಿಗೆ ಪರಿಹಾರ ನೀಡಲು ಹಣವಿಲ್ಲವೆನ್ನುವ ಸರಕಾರಗಳು ಅಗರ್ಭ ಶ್ರೀಮಂತ ಕಾರ್ಪೊರೇಟ್ ಮನೆತನಗಳಿಗೆ ಕೊರೋನ ನಂತರ 15 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿವೆ. 'ಕಾರ್ಪೊರೇಟ್ ಪರ ಸರಕಾರಗಳು' ಎನಿಸಿಕೊಂಡಿವೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲನಗೌಡ, ವೀರೇಶ ಕಲ್ಲೂರು, ಹನುಮಯ್ಯ, ವೀರೇಶ ಜಕ್ಕಲದಿನ್ನಿ, ಮುಹಮ್ಮದ್ ಗೌಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.