ಪ್ರೊ.ನಂಜುಂಡಸ್ವಾಮಿ ಜಯಂತಿ ಪ್ರಯುಕ್ತ ಫೆ.13ರಂದು ಮೈಸೂರಿನಲ್ಲಿ ಜಿಲ್ಲಾ ರೈತ ಸಮಾವೇಶ: ಚಾಮರಸ ಮಾಲಿಪಾಟೀಲ್

ರಾಯಚೂರು: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 89ನೇ ಜಯಂತಿ ಅಂಗವಾಗಿ ಮೈಸೂರಿನಲ್ಲಿ ಫೆ.13ರಂದು ಜಿಲ್ಲಾ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೈಸೂರಿನ ಟೌನ್ ಹಾಲ್ ನಲ್ಲಿ 12 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು 11 ಗಂಟೆಗೆ ಅದ್ಧೂರಿ ಮೆರವಣಿಗೆಯನ್ನು ನಡೆಯಲಿದೆ. ಶಾಸಕ ದರ್ಶನ ಪುಟ್ಟಯ್ಯ ಚಾಲನೆ ನೀಡಲಿದ್ದಾರೆ.
ಪೂರ್ವಾಹ್ನ 11:55ಕ್ಕೆ ಮಹಿಳಾ ಘಟಕದ ಕಾರ್ಯಾಧ್ಯಕ್ಷ ಯಧುಶೈಲ ಸಂಪತ್ ಸಂಘದ ಧ್ವಜಾರೋಹಣ ಮಾಡಲಿದ್ದಾರೆ. 12 ಗಂಟೆಗೆ ಸಮಾವೇಶದ ಉದ್ಘಾಟನೆಯನ್ನು ಮಾಜಿ ಶಾಸಕ, ಸಂಯುಕ್ತ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಹಾಗೂ ಸಮಾಜವಾದಿ ಚಿಂತಕ ಡಾ. ಸುನೀಲಂ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ವಹಿಸಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಹಾಗೂ ಮುಖ್ಯಮಂತ್ರಿ ಸಲಹೆಗಾರ ಹಾಗೂ ಸಮಾಜವಾದಿ ಚಿಂತಕ ಬಿ.ಆರ್.ಪಾಟೀಲ್, ಜಾಗೃತ ಕರ್ನಾಟಕ ಡಾ. ವಿ. ವಾಸ್, ಕೃಷಿ ವಿಜ್ಞಾನ ಹಾಗೂ ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ ಕಮ್ಮರಡಿ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನರಸಿಂಗರಾವ್ ಕುಲಕರ್ಣಿ, ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ಪ್ರಭಾಕರ್ ರಾವ್ ಉಪಸ್ಥಿತರಿದ್ದರು.