ರಾಯಚೂರು | 60 ಲಕ್ಷ ರೂ. ಮೌಲ್ಯದ ಭತ್ತ ಖರೀದಿಸಿ ವಂಚನೆ ಆರೋಪ: ರೈತರಿಂದ ದೂರು

ರಾಯಚೂರು: ರೈತರಿಂದ 60 ಲಕ್ಷ ರೂ. ಮೌಲ್ಯದ ಭತ್ತ ಖರೀದಿಸಿ ಹಣ ಪಾವತಿಸದೇ ವ್ಯಾಪಾರಿ ಪರಾರಿಯಾಗಿದ್ದಾನೆ ಎನ್ನಲಾದ ಘಟನೆ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.
ಸಿಂಧನೂರು ತಾಲೂಜಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರಿಂದ 4,500 ಚೀಲ ಭತ್ತ ಖರೀದಿಸಿದ ವ್ಯಾಪಾರಿಯೊಬ್ಬರು ರೈತರಿಗೆ ರೂ. 60 ಲಕ್ಷ ಪಾವತಿಸದೇ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಕಾರಟಗಿಯಲ್ಲಿ ‘ಮಹಾಮಲ್ಲೇಶ್ವರ ಟ್ರೇಡಿಂಗ್’ ಹೆಸರಿನಲ್ಲಿ ಕಮಿಷನ್ ಏಜೆಂಟ್‍ರಾಗಿ ವ್ಯವಹಾರ ಮಾಡುತ್ತಿದ್ದ ಮಲ್ಲೇಶ ಅವರಿಗೆ ಉಪ್ಪಳ ಗ್ರಾಮದ ಸೂರ್ಯಬಾಬು 460 ಚೀಲ, ಕೆ.ಎಂ.ಬಸವರಾಜ 170 ಚೀಲ, ಬಸವರಾಜ ಸಂಗಟಿಯಿಂದ 200, ರಾಮರಾವ್ 1800 ಚೀಲ, ಜಿ.ಗೋವಿಂದ 250 ಚೀಲ ಇದರಂತೆ 30 ರೈತರು ಡಿಸೆಂಬರ್ ಮೊದಲ ವಾರದಲ್ಲಿ ಆರ್‌ಎನ್‍ಆರ್ ತಳಿಯ ಭತ್ತವನ್ನು ಮಾರಾಟ ಮಾಡಿದ್ದರು. 75 ಕೆಜಿ ಭತ್ತಕ್ಕೆ ರೂ.1800, ಪ್ರತಿ ಕ್ವಿಂಟಲ್‍ಗೆ ರೂ.2400 ಬೆಲೆ ನಿಗದಿ ಪಡಿಸಿ 15 ದಿನಗಳಲ್ಲಿ ಹಣ ಪಾವತಿಸುವುದಾಗಿ ಮಲ್ಲೇಶ ಭರವಸೆ ನೀಡಿದ್ದರು. ಅವಧಿ ಮುಗಿದ ನಂತರ ರೈತರು ಅಂಗಡಿಗೆ ಬಂದಾಗ ಬೀಗ ಹಾಕಲಾಗಿತ್ತು. ಎರಡು ಮೂರು ದಿನಗಳಿಂದ ಅಲೆದಾಡಿದರೂ ಅಂಗಡಿ ಮಾಲೀಕರ ಪತ್ತೆಯಾಗಿಲ್ಲ ಎಂದು ಆರೋಪಿಸಲಾಗಿದೆ.
ವ್ಯಾಪಾರಿ ಮಲ್ಲೇಶ ವಿರುದ್ಧ ರೈತರು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.