ಫಾತಿಮಾ ಶೇಕ್ ಜನ್ಮದಿನದಂದೇ ಸರಕಾರಿ ಶಾಲೆಗೆ 25 ಲಕ್ಷ ಬೆಲೆ ಬಾಳುವ ನಿವೇಶನ ದಾನ ಮಾಡಿದ ಅಕ್ಬರ್ ಪಾಷಾ
ಸೈಯದ್ ಅಕ್ಬರ್ ಪಾಷಾ
ರಾಯಚೂರು: ಅನೇಕ ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಖಾಸಗಿ ಜಾಗದಲ್ಲಿ ನಡೆಯುತ್ತಿದ್ದ ಸರಕಾರಿ ಶಾಲೆಗೆ ಮಾನ್ವಿಯ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಸಮಾಜ ಸೇವಕ ಸೈಯದ್ ಅಕ್ಬರ್ ಪಾಷಾ ಅವರು 25 ಲಕ್ಷ ರೂಪಾಯಿ ವೆಚ್ಚದ ನಿವೇಶನ ನೀಡಿ ನೂರಾರು ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕಿ ಮಾದರಿಯಾಗಿದ್ದಾರೆ.
ಮಾನ್ವಿ ಪಟ್ಟಣದ ನಮಾಜಗೇರಿಗುಡ್ಡದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಸ್ವಂತ ಕಟ್ಟಡವಿಲ್ಲದೇ ಖಾಸಗಿ ಕೋಣೆಗಳಲ್ಲಿ ಬೋಧನೆ ನಡೆಯುತ್ತಿತ್ತು. ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಸ್ವಂತ ಕಟ್ಟಡಕ್ಕಾಗಿ ಅನೇಕ ಹೋರಾಟಗಳು ಮಾಡಿ ಅಲೆದಾಡಿದರೂ ಸ್ವಂತ ಕಟ್ಟಡ ಒದಗಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಮಾನ್ವಿ ಪಟ್ಟಣದ ಸೈಯದ್ ಅಕ್ಬರ್ ಪಾಷಾ ಅವರು ಈ ಶಾಲೆಯ ಕಟ್ಟಡ ನಿರ್ಮಾಣಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿದ 25 ಲಕ್ಷ ಬೆಲೆ ಬಾಳುವ ನಿವೇಶನ ನೀಡಿದ್ದಾರೆ.
ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ, ಸಮಾಜದ ಸುಧಾರಕಿ ಫಾತಿಮಾ ಶೇಖ್ ಜನ್ಮದಿನದಂದೇ ಇಂದು ಶಾಲೆ ನಿರ್ಮಾಣಕ್ಕೆ ನಿವೇಶನ ನೀಡಿ ಫಾತಿಮಾ ಶೇಖ್ ಅವರ ಅಕ್ಷರ ಕ್ರಾಂತಿಗೆ ಕೈ ಜೋಡಿಸಿದ್ದು ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಗತ್ತನ್ನು ಬದಲಿಸಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಪ್ರಭಲವಾದ ಅಸ್ತ್ರವಾಗಿದೆ. ಶಾಲೆಯ ಕಾರ್ಯಗಳಿಗೆ ಹಾಗೂ ಶಿಕ್ಷಣದಲ್ಲಿ ಆರ್ಥಿಕ ನೆರವು ನೀಡುವುದು ವಿರಳ. ಸರ್ಕಾರಿ ಜಾಗವನ್ನೇ ಲೂಟಿ ಮಾಡುವ ಇಂತಹ ದಿನಮಾನಗಳಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ತಮ್ಮ ಸ್ವಂತ ನಿವೇಶನ ನೀಡಿರುವುದು ಫಾತಿಮಾ ಶೇಖ್ ಅವರಿಗೆ ಗೌರವ ಸಲ್ಲಿಸಿದ್ದಾರೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾನ್ವಿ ತಾಲೂಕು ಘಟಕದ ಅಧ್ಯಕ್ಷ ಸಂಗಮೇಶ ಮುಧೋಳ ಹಾಗೂ ಪ್ರಧಾನ ಕಾರ್ಯದರ್ಶಿ ಪದ್ಮ ಹರೀಶ್ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸೈಯದ್ ಅಕ್ಬರ್ ಪಾಷಾ ಅವರು ವೃದ್ಧರು ಹಾಗೂ ದುಡಿಯಲು ಶಕ್ತಿ ಇಲ್ಲದ ಅಶಕ್ತರಿಗೆ ವೈಯಕ್ತಿಕವಾಗಿ ಪ್ರತಿ ತಿಂಗಳು ರೂ 400 ಸಹಾಯ ಧನವನ್ನು ಪಿಂಚಣಿ ರೂಪದಲ್ಲಿ ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಅವರ ಈ ಸೇವೆಯಿಂದ ನೂರಾರು ಬಡ ವ್ಯಕ್ತಿಗಳಿಗೆ ಅನುಕೂಲವಾಗಿದ್ದಾರೆ.
ದಶಕಗಳಿಂದ ಸಿವಿಲ್ ಗುತ್ತಿಗೆದಾರಾಗಿರುವ ಸೈಯದ್ ಅಕ್ಬರ್ ಪಾಷಾ ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾಸಂಸ್ಥೆಗಳ ಮೂಲಕ ಸ್ಥಳೀಯವಾಗಿ ಕೊಡುಗೈ ದಾನಿ ಎಂದು ಚಿರಪರಿಚಿತರಾಗಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಡವರ ಚಿಕಿತ್ಸೆಗೆ ನೆರವು, ಬಡ ಕುಟುಂಬಗಳಿಗೆ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸಾವಿರಾರು ಸಂಖ್ಯೆಯಲ್ಲಿ ಆಹಾರದ ಪದಾರ್ಥಗಳ ಕಿಟ್ಗಳನ್ನು ವಿತರಿಸಿದ್ದಾರೆ.
ಸೈಯದ್ ಅಕ್ಬರ್ ಪಾಷಾ ಅವರ ಮಾನವೀಯ, ಸಾಮಾಜಿಕ ಸೇವೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.