ರಾಯಚೂರು | ಒಳಮೀಸಲಾತಿ ಜಾರಿಯಾಗುವರೆಗೆ ಸರಕಾರಿ ಹುದ್ದೆಗಳ ನೇಮಕಾತಿ ಆದೇಶ ರದ್ದುಪಡಿಸಿ : ಎಸ್.ಮಾರೆಪ್ಪ ಆಗ್ರಹ
ರಾಯಚೂರು : ಒಳಮೀಸಲಾತಿ ಜಾರಿಯಾಗುವವರೆಗೆ ಸರಕಾರಿ ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಎಲ್ಲಾ ಅಧಿಸೂಚನೆ ರದ್ದುಪಡಿಸಬೇಕು ಎಂದು ಒಳಮೀಸಲಾತಿ ಹೋರಾಟಗಾರ ಎಸ್.ಮಾರೆಪ್ಪ ವಕೀಲ ಆಗ್ರಹಿಸಿದರು.
ಗುರುವಾರ ಪತ್ರಿಕಾ ಭವನದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಮೂರು ತಿಂಗಳು ಕಳೆದರೂ ರಾಜ್ಯ ಸರಕಾರ ಒಳಮೀಸಲಾತಿ ಜಾರಿಗೊಳಿಸದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರ 12-11-2024ರಂದು ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನದಾಸ್ ಅಧ್ಯಕ್ಷತೆಯ ಆಯೋಗ ಮಾಡಿದೆ. ಅದರೆ ಇದಯವರೆಗೆ ಟೆರ್ಮ್ಸ್ ಆಫ್ ರೆಫರೆನ್ಸ್ ನೀಡಿಲ್ಲ. ಈ ಅವಧಿಯಲ್ಲಿ ಸರಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಆರಂಭಿಸಿದೆ ಎಂದು ದೂರಿದರು.
ನ.16ರಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಗೃಹ, ಶಿಕ್ಷಣ, ಆರೋಗ್ಯ ಇಲಾಖೆ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟದ ನಿರ್ಧಾರದ ನಿರ್ಬಂಧ ಸಡಿಲಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ವರದಿಯಾಗಿದೆ, ಇದು ಖಂಡನೀಯ. ಇದು ಸಚಿವ ಸಂಪುಟದ ತೀರ್ಮಾನಕ್ಕೆ ವಿರುದ್ಧವಾಗಿದೆ ಇದನ್ನು ಅಂಗೀಕರಿಸಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಆಂಜನೇಯ ಕುರುಬ ದೊಡ್ಡಿ, ಶ್ರೀನಿವಾಸ ಕೊಪ್ಪರ, ನರಸಿಂಹಲು, ತಾಯಪ್ಪ ಗಧಾರ ಉಪಸ್ಥಿತರಿದ್ದರು.