ಮುನಿರತ್ನ ಮೇಲೆ ಮೊಟ್ಟೆ ಎಸೆತ; ಶಾಸಕರ ಧ್ವನಿ ಅಡಗಿಸುವ ಕೆಲಸ : ಶಾಸಕ ಡಾ.ಶಿವರಾಜ್ ಪಾಟೀಲ್ ಆಕ್ರೋಶ
ರಾಯಚೂರು | ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣವು, ಶಾಸಕರ ಧ್ವನಿ ಹತ್ತಿಕ್ಕುವ ಕಾರ್ಯವಾಗಿದ್ದು ಇದು ಖಂಡನೀಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರಿಂದು ತಮಗೆ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದ ವ್ಯಕ್ತಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಎಂದು ತಿಳಿದು ಬಂದಿದ್ದು ಅಘಾತಕಾರಿಯಾಗಿದೆ. ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡದ ಮುಖಂಡರು ಅವರ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಿರುವುದು ದುರಾದೃಷ್ಠಕರ ಸಂಗತಿ ಎಂದರು.
ಮುನಿರತ್ನ ವಿರುದ್ಧ ಸೋತು ಹತಾಶರಾದ ಕಾಂಗ್ರೆಸ್ ಪಕ್ಷದ ನಾಯಕರು ಇಂತಹ ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿರುವುದು ಸ್ಪಷ್ಟವಾಗುತ್ತಿದೆ. ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ವಿರೋಧ ಪಕ್ಷದ ಶಾಸಕರ, ನಾಯಕರ ಮೇಲೆ ಹಲ್ಲೆ, ದೌರ್ಜನ್ಯ ಮಾಡುತ್ತಿರುವ ಬಗ್ಗೆ ನೋಡಿದರೆ ಸ್ವಪಕ್ಷದ ನಾಯಕರೇ ಸರ್ಕಾರದಿಂದ ಅಸಮಾಧಾನಗೊಂಡು ಅಶಾಂತಿ ಸೃಷ್ಠಿಸುವ ಅನುಮಾನ ಮೂಡುತ್ತಿದೆ. ರಾಜಕೀಯ ಏನೇ ಇದ್ದರೂ ಜನರ ಪ್ರತಿನಿಧಿಯಾದ ಶಾಸಕರ ಧ್ವನಿ ಅಡಗಿಸುವ ಕೆಲಸ ಮಾಡುವುದು ಸಲ್ಲದು ಎಂದು ಕಿಡಿಕಾರಿದರು.