ಬಿಸಿಲೂರಿನಲ್ಲಿ ಚಳಿಯ ಅಬ್ಬರ: ಹೈರಾಣಾದ ಜನ
ರಾಯಚೂರು: ಬಿಸಿಲೂರು ಎಂದು ಖ್ಯಾತಿ ಪಡೆದ ಭತ್ತದ ನಾಡು ರಾಯಚೂರು ಜಿಲ್ಲೆಯಲ್ಲಿ ಕಳೆದ ಎರೆಡು ಮೂರು ದಿನಗಳಿಂದ ಚಳಿ ಹೆಚ್ಚಾಗಿದ್ದು, ಜನ ಕತ್ತಲಾಗುತ್ತಿದ್ದಂತೆ ಮನೆ ಸೇರಿಕೊಳ್ಳುವಂತಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ 4, 5 ದಿನಗಳ ವರೆಗೆ ರಾತ್ರಿ ವೇಳೆಯಲ್ಲಿ ಕನಿಷ್ಠ ತಾಪಮಾನ 4ರಿಂದ 5 ಡಿಗ್ರಿ ಸೆಲ್ಸಿಯಸ್ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.
ರಾಯಚೂರಿನಲ್ಲಿ ಕಳೆದ ವಾರ ಕನಿಷ್ಠ ತಾಪಮಾನ 19, 20 ರಷ್ಟಿದ್ದ ತಾಪಮಾನ ಎರೆಡು ದಿನಗಳಿಂದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರಿಂದ ಇಲ್ಲಿನ ಜನ ಮೈಕೊರೆಯುವ ಚಳಿಗೆ ಗಡಗಡ ನಡುಗುತ್ತಿದ್ದಾರೆ.
ಚಳಿಗೆ ಬೆದರಿದ ಕೃಷಿ ಕಾರ್ಮಿಕರು, ರೈತರು ಬೆಳಗಿನ ಜಾವ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಚಳಿಯಲ್ಲಿ ಕೆಲಸಕ್ಕೆ ಹೋಗಲು ಕೊಂಚ ಹಿಂದೇಟು ಹಾಕುತ್ತಿದ್ದಾರೆ.
ಮಾರುಕಟ್ಟೆ ಪ್ರದೇಶ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಬೆಳಿಗ್ಗೆ ಜನ ಬೆಂಕಿ ಕಾಯಿಸಿಕೊಳ್ಳುವುದು ಕಂಡು ಬರುತ್ತಿದ್ದಾರೆ. ಚಹಾ ಅಂಗಡಿಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಗ್ರಾಹಕರು ಹೆಚ್ಚು ಬಿಸಿ ಇರುವ ಚಹಾ ಕೊಡುವಂತೆ ಕೇಳಿ ಪಡೆದುಕೊಳ್ಳುತ್ತಿದ್ದಾರೆ.
ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲವರು ಸ್ವೆಟರ್ ಹಾಗೂ ತಲೆಗೆ ಟೊಪ್ಪಿಗೆ ಧರಿಸಿಕೊಂಡು ಸ್ವಲ್ಪ ಹೊತ್ತು ನಡೆದು ಬೇಗ ಮನೆ ಸೇರಿಕೊಳ್ಳುತ್ತಿದ್ದಾರೆ. ಮಕ್ಕಳು ಸಹ ಸ್ವೆಟರ್ ಧರಿಸಿ ಶಾಲೆಗಳಿಗೆ ಹೋಗುತ್ತಿದ್ದಾರೆ.
ವಿಪರೀತ ಚಳಿಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಗಂಟಲು ಕೆರೆತ ಹಾಗೂ ನೆಗಡಿ ಶುರುವಾಗಿದೆ. ಜನ ಮನೆಮದ್ದು ಮಾಡಿ ಕಷಾಯ ಕುಡಿತು ಮೈ ಬೆಚ್ಚಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಶೀತ, ಕೆಮ್ಮು ನೆಗಡಿ ರೋಗಿಗಳ ಸಂಖ್ಯೆ ಅಧಿಕವಾಗಿದೆ. ವೈದ್ಯರು ಔಷಧ ಬರೆದುಕೊಟ್ಟು ಚಳಿ ಮುಗಿಯುವ ವರೆಗೂ ಬಿಸಿ ನೀರು ಕುಡಿಯುವಂತೆ ಸಲಹೆ ಕೊಟ್ಟು ಕಳಿಸುತ್ತಿದ್ದಾರೆ.