ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಯ ಸಂಶೋಧನೆ ನಡೆದಲ್ಲಿ ರೈತ ಕಲ್ಯಾಣ ಸಾಧ್ಯ: ಡಾ.ಅಶೋಕ್ ದಳವಾಯಿ
ರಾಯಚೂರು: ಕೃಷಿ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಯಾವ ರೀತಿಯಲ್ಲಿ ಬಳಕೆಯಾಗಬೇಕು ಎನ್ನುವ ಕುರಿತು ವಿಶ್ವವಿದ್ಯಾಲಯಗಳು ಸಂಶೋಧನೆ ಕೈಗೊಂಡಾಗ ರೈತ ಕಲ್ಯಾಣ ಹಾಗೂ ಕೃಷಿ ಸಮೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಅಶೋಕ್ ಎಂ.ದಳವಾಯಿ ಅವರು ಪ್ರತಿಪಾದಿಸಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶ್ರೀಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ದಕ್ಷಿಣ ವಲಯ ಭಾರತೀಯ ವಿಸ್ತರಣಾ, ಶಿಕ್ಷಣ ಸಂಘ, ಬೆಂಗಳೂರು ಹಾಗೂ ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಸ್ಥಿತ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕ ವರ್ಗಾವಣೆ ಸಂಸ್ಥೆಗಳ ಸಹಯೋಗದೊಂದಿಗೆ ಜನವರಿ 10ರ ಏರ್ಪಡಿಸಿದ್ದ ಕೃಷಿ ಮತ್ತು ಕೃಷಿ ಅವಲಂಬಿತ ವಿಸ್ತರಣಾ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಎಲ್ಲಾ ಕಲ್ಯಾಣ ಇಲಾಖೆಗಳಿವೆ. ಆದರೆ, ರೈತ ಕಲ್ಯಾಣಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಇದು ಅತ್ಯಂತ ಕಳವಳಕಾರಿ ಸಂಗತಿ. ದೇಶದಲ್ಲಿ 2015ರಿಂದ ಕೃಷಿ ಕ್ಷೇತ್ರದಲ್ಲಿ ಈ ಪ್ರಮುಖ ಸವಾಲುಗಳು ತಲೆ ಎತ್ತುವಂತೆ ಮಾಡಿದೆ. ಕೃಷಿ ಕ್ಷೇತ್ರದ ಮೇಲೆ ಅಪಾರ ಆವಲಂಬನೆ ಮತ್ತು ಪರಿಸರ ಸಂರಕ್ಷಣೆ ನಮ್ಮ ಮುಂದಿನ ಬಹುದೊಡ್ಡ ಸವಾಲುಗಳಾಗಿವೆ. ದೇಶದಲ್ಲಿ ಶೇ.45ರಷ್ಟು ಕಾರ್ಮಿಕ ಬಲವಿದೆ. ಇವರಿಗೆ ಉದ್ಯೋಗ ಒದಗಿಸುವ ವ್ಯವಸ್ಥೆ ಹೇಗೆ ಅನ್ನುವ ಸವಾಲು ನಮ್ಮ ಮುಂದಿದೆ ಎಂದರು.
ಕೃಷಿಯ ತಾಂತ್ರಿಕತೆ ಮತ್ತು ಹೆಚ್ಚಿನ ಲಾಭದ ಒತ್ತಡದ ಪರಿಣಾಮ ಕೃಷಿ ಪರಿಸರ ಸಂರಕ್ಷಣೆಯು ಮುಖ್ಯವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೃಷಿ ಜಿಡಿಪಿ ಕಡಿಮೆಯಾಗಿವುದು ನಾವು ಗಮನಿಸಬಹುದಾಗಿದೆ. ಜಾಗತಿಕ ಈ ಕುಸಿತ ದೇಶದ ಕೃಷಿಯ ಮೇಲು ಪರಿಣಾಮ ಬೀರಿರುವುದನ್ನು ಅಲ್ಲಗಳೆಯಲಾಗದು. ಕೃಷಿ ಮತ್ತು ಮಾರುಕಟ್ಟೆ ಆದ್ಯತೆ ಮಧ್ಯೆ ಇಂದು ದೇಶವು ರೈತರ ಕಲ್ಯಾಣ, ಉದ್ಯೋಗ ಸೃಷ್ಟಿ ಸೇರಿದಂತೆ ಪರಿಸರ ಆರೋಗ್ಯ ಸಂರಕ್ಷಣೆಯ ಸವಾಲು ಎದುರಿಸುವಂತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಡಿ.ಮಲ್ಲಿಕಾರ್ಜುನ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಬಿ. ಗೌಡಪ್ಪ, ಡಾ. ಸಿ. ನಾರಾಯಣ ಸ್ವಾಮಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರು, ಅಧಿಕಾರಿಗಳು, ದೇಶದಾದ್ಯಂತ ಆಗಮಿಸಿದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳನ್ನೊಳಗೊಂಡಂತೆ 300ಕ್ಕೂ ಹೆಚ್ಚು ಗಣ್ಯರು ಮತ್ತು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.