ಹಟ್ಟಿ: ರಾಜ್ಯ ಹೆದ್ದಾರಿ ಬಂದ್ ಮಾಡಿ ಎತ್ತುಗಳೊಂದಿಗೆ ರೈತರ ಪ್ರತಿಭಟನೆ; ಕಾಲುವೆಗೆ ನೀರು ಹರಿಸಲು ಆಗ್ರಹ

ರಾಯಚೂರು: ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಬಳಿಯ ಗುರಗುಂಟಾ ಗ್ರಾಮದ ರಾಜ್ಯ ಹೆದ್ದಾರಿ ತಡೆದು ಎತ್ತುಗಳ ಸಮೇತ ಪ್ರತಿಭಟನೆ ನಡೆಸಿದರು.
ರೈತರ ಬೆಳೆಗಳಿಗ ನೀರು ಹರಿಸದಿದ್ದರೆ ರೈತರು ಸಂಕಷ್ಟ ಅನುಭವಿಸುತ್ತಾರೆ. ರೈತರ ನೋವು ಅಧಿಕಾರಿಗಳಿಗೆ ಅರ್ಥ ಆಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಬಸವರಾಜ ಕೋಡಿಹಾಳ ಹೇಳಿದರು.
ಹಟ್ಟಿ ಸಮೀಪದ ಗುರುಗುಂಟಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಲಿಂಗಸುಗೂರು ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ವಾರಬಂದಿಯಂತೆ ನಾಲೆಗೆ ನೀರು ಹರಿಸಲು ಅಧಿಕಾರಿಗಳಿಗೆ ತಿಳಿಸಿದರು. ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ, ಶಾಸಕ ಮಾನಪ್ಪ ವಜ್ಜಲ್ ರೈತರು ಹೋರಾಟ ಮಾಡಿದರು ಇತ್ತ ಕಡೆ ಸುಳಿಯುತ್ತಿಲ್ಲ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು. ಸಂಸದರ, ಸಚಿವರ ಗಮನಕ್ಕೆ ತಂದರು ಇದುವರೆಗೂ ಸಮಸ್ಯೆ ಸಮಸ್ಯೆಯಾಗಿದೆ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸಂಚಾರ ಸ್ಧಗಿತವಾಗಿತ್ತು. ಲಾರಿ, ಬಸ್ ಸೇರಿದಂತೆ ಸರಕು ವಾಹನಗಳು ರಸ್ತೆ ಮಧ್ಯದಲ್ಲೆ ನಿಂತುಕೊಂಡಿದ್ದವು, ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಹಟ್ಟಿ ಠಾಣೆಯ ಪಿಐ ಹೊಸಕೇರಪ್ಪ ಹಾಗೂ ಡಿವೈಎಸ್ ಪಿ ದತ್ತಾತ್ರೆಯ ಬಂದೋಬಸ್ತ್ ಒದಗಿಸಿದ್ದರು.
ರೈತರು ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟದ ಸ್ಧಳಕ್ಕೆ ಕೃಷ್ಣ ಬಲದಂಡೆ ನೀರಾವರಿ ಕಾಲುವೆ ಅಧಿಕಾರಿ ಎಸ್ ಇಒ ರಮೇಶ ರಾಠೋಡ್ ಆಗಮಿಸಿ ರೈತರ ಮನವೊಲಿಸುವಲ್ಲಿ ವಿಫಲರಾದರು.
ನಾಲೆಗೆ ನೀರು ಬಂದರೆ ಮಾತ್ರ ಹೋರಾಟ ನಿಲ್ಲಿಸುತ್ತೇವೆ ನೀರು ಬರದೆ ಇದ್ದರೆ ಹೋರಾಟ ಮುಂದುವರೆಯಲಿದೆ ಎಂದು ರೈತರು ಪಟ್ಟು ಹಿಡಿದರು.
ಮುಂಗಾರು ಬೆಳಗೆ 80.ಟಿಎಂಸಿ,ಹಿಂಗಾರು ಬೆಳೆಗೆ 60.ಟಿಎಂಸಿ ನೀರು ಹರಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ರೈತರು ದಾಖಲೆ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಮನವಿ ಪತ್ರ ಪಡೆದು ಅಲ್ಲಿಂದ ಹೋದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಪ್ರಸಾದರೆಡ್ಡಿ ಸಿಂಧಾನೂರು ಅಧ್ಯಕ್ಷ ನೀರುಪಾಧಿ, ಕಾರ್ಯಧ್ಯಕ್ಷ ಆನಂದ, ರಾಮಣ್ಣ ಮೌಲಸಾಬ, ಬಸಣ್ಣ ಹನುಮಂತ, ಬಸವರಾಜ ಅಂಗಡಿ, ಗುರುಗುಂಟಾ ಹಾಗೂ ವಿವಿಧ ಗ್ರಾಮದ ರೈತರು ಪಾಲ್ಗೊಂಡಿದ್ದರು.