ಲಿಂಗಸುಗೂರಿನಲ್ಲಿ ನೂತನ ನ್ಯಾಯಾಲಯದ ಕಟ್ಟಡ ಲೋಕಾರ್ಪಣೆ
ಇ-ಸೇವಾ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ

ರಾಯಚೂರು : ಲಿಂಗಸುಗೂರು ಐತಿಹಾಸಿಕ ಪಟ್ಟಣವಾಗಿದ್ದು, ರಾಷ್ಟ್ರಕೂಟರು, ಚಾಲುಕ್ಯರು ಹಾಗೂ ಮೌರ್ಯ ವಂಶಸ್ಥರು ಆಳ್ವಿಕೆ ಮಾಡಿದ ನೆಲ ಇದಾಗಿದೆ. ಇಲ್ಲಿನ ಜನರಿಗೆ ಉತ್ತಮ ರೀತಿಯಲ್ಲಿ ನ್ಯಾಯ ನೀಡುವ ನಿಟ್ಟಿನಲ್ಲಿ ವಕೀಲರು ಶ್ರಮಿಸಬೇಕೆಂದು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ ಅವರು ಹೇಳಿದರು.
ಮಾ.1ರ ಶನಿವಾರ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯದ ಕಟ್ಟಡ, ವಕೀಲರ ಭವನ, ನ್ಯಾಯಾದೀಶರ ವಸತಿಗೃಹ ಲೋಕಾರ್ಪಣೆ ಹಾಗೂ ಇ-ಸೇವಾ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಅಶೋಕನ ಶಿಲಾಶಾಸನ ದೊರಕಿರುವುದು ಇದೇ ಮಸ್ಕಿಯಲ್ಲಿ. ಬ್ರಿಟಿಷ್ ಆಳ್ವಿಕೆಯಲ್ಲಿ ಲಿಂಗಸುಗೂರು ಪಟ್ಟಣವು ಆಡಳಿತ ಹಾಗೂ ಕಾನೂನು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿತ್ತು. ಈ ಐತಿಹಾಸಿಕ ಹಿನ್ನೆಲೆ ಹೊಂದಿದ ಇಲ್ಲಿನ ಈ ಹೊಸ ನ್ಯಾಯಾಂಗ ಸಂಕೀರ್ಣ ಪ್ರಜಾಪ್ರಭುತ್ವ ಮತ್ತು ನ್ಯಾಯದ ತತ್ವಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಸಂಕೀರ್ಣ ಅತ್ಯಾಧುನಿಕ ನ್ಯಾಯಾಂಗ ಕೊಠಡಿಗಳು, ಡಿಜಿಟಲ್ ಮೂಲ ಸೌಕರ್ಯಗಳು, ಇ-ನ್ಯಾಯಾಲಯಗಳು, ವೀಡಿಯೋ ಕಾನ್ಫರೆನ್ಸ್ ಹಾಗೂ ವಿವಿಧ ನ್ಯಾಯಾಂಗ ಕಾರ್ಯ ವಿಧಾನಗಳನ್ನು ಸುಗಮಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ತ್ವರಿತವಾಗಿ ನ್ಯಾಯ ಒದಗಿಸಲು ಅನುವಾಗಲಿದೆ ಎಂದರು.
ಈ ವೇಳೆ ಸುಪ್ರಿಂಕೋರ್ಟನ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾ.ಡಾ.ಶಿವರಾಜ ವಿ.ಪಾಟೀಲ್ ಅವರು ಮಾತನಾಡಿ, ಆಸ್ಪತ್ರೆ ಮತ್ತು ಕೋರ್ಟ್‌ಗಳು ಪ್ರೇಕ್ಷಣೀಯ ಸ್ಥಳಗಳಲ್ಲ. ಬದಲಿಗೆ ನೋವು ಮತ್ತು ಸಮಸ್ಯೆಗಳನ್ನು ಹೊತ್ತು ಬಂದವರಿಗೆ ಸ್ಪಂದನೆ ನೀಡಲಿವೆ. ಕಕ್ಷಿದಾರರ ಹಿತ ಕಾಪಾಡುವಲ್ಲಿ ಬದ್ಧತೆ, ಅನುಕಂಪ ಇರಬೇಕು. ನೋವಿನಿಂದ ಬಂದವರು ನಗುವಿನಂದ ಹೋಗುಬೇಕು. ಸೋತವರು ಸಮಾಧಾನದಿಂದ, ಗೆದ್ದವರು ಸಂತೋಷದಿಂದ ಹೋಗುವಂತೆ ವಕೀಲರು ಕಾರ್ಯನಿರ್ವಹಿಸಬೇಕು. ಉತ್ತಮ ನ್ಯಾಯಾಧೀಶರಾಗಲು ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ವಕೀಲರಿಗೆ ಕಿವಿಮಾತು ಹೇಳಿದರು.
ಈ ವೇಳೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್.ಪಾಟೀಲ್ ಅವರು ಮಾತನಾಡಿ, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗಗಳು ಪ್ರಜಾಪ್ರಭುತ್ವದ ಹೃದಯವಾಗಿ ಕಾರ್ಯನಿರ್ವಹಿಸುತ್ತಿವೆ. ಸಂವಿಧಾನದ ಹಕ್ಕುಗಳನ್ನು ರಕ್ಷಿಸುವ ಮೂಲಕ ನ್ಯಾಯಾಂಗವು ಅದರ ಕಿರೀಟವಾಗಿ ನಿಂತಿದ್ದು, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗ ಪ್ರಮುಖವಾಗಿದೆ ಎಂದರು.
ಜನಸ್ನೇಹಿ ಮತ್ತು ಜನಪರವಾದ ಆಡಳಿತ ವ್ಯವಸ್ಥೆಯನ್ನು ಖಾತ್ರಿಪಡಿಸುವಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಕಾರ್ಯವು ಮಹತ್ವದ್ದಾಗಿದೆ. ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿದ್ದು, 371(ಜೆ) ಜಾರಿಯಿಂದ ಕಲ್ಯಾಣ ಕರ್ನಾಟಕ್ಕಕ್ಕೆ ವಿಶೇಷ ಸೌಲಭ್ಯಗಳನ್ನು ಕೊಡುವಂತ ಅವಕಾಶವನ್ನು ಒದಗಿಸಿಕೊಡಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರ ಸತತ ಪ್ರಯತ್ನದಿಂದ 371 (ಜೆ) ಜಾರಿ ಆಯಿತು ಎಂದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಎಮ್.ಜಿ.ಉಮಾ, ಹೈಕೋರ್ಟ್ ರಿಜಿಸ್ಟರ್ ಜನರಲ್ ಭರತ ಕುಮಾರ, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾರುತಿ ಬಗಾಡೆ, ನ್ಯಾಯಾಧೀಶರಾದ ಮಂಜುಳಾ, ಲಿಂಗಸೂಗೂರ ವಕೀಲರ ಸಂಘದ ಅಧ್ಯಕ್ಷರಾದ ಭೂಪನಗೌಡ ವಿ.ಪಾಟೀಲ್, ಲಿಂಗಸಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ.ವಜ್ಜಲ್, ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸೇರಿದಂತೆ ವಿವಿಧ ನ್ಯಾಯಾಧೀಶರು, ವಕೀಲರು ಸೇರಿ ಇತರರು ಇದ್ದರು.