ಮಕ್ಕಳಿಗೆ ಸ್ವಾತಂತ್ರ್ಯ, ಭಾತೃತ್ವದ ಸಂದೇಶ ನೀಡುವುದು ಪಾಲಕರ, ಶಿಕ್ಷಕರ ಕರ್ತವ್ಯ: ಡಾ.ಶರಣಪ್ರಕಾಶ್ ಪಾಟೀಲ್

ರಾಯಚೂರು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಯ ಹಾಗೂ ಪತ್ರಿಕಾ ರಂಗ ತಮ್ಮ ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನೆರವೇರಿಸಬೇಕು. ಚುನಾವಣಾ ಆಯೋಗ, ಸಿಬಿಐ ಸೇರಿ ಇತರೆ ಸರ್ಕಾರಿ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಯಾರ ಹಂಗಿಲ್ಲದೇ ಕೆಲಸ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಹೇಳಿದರು.
76ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಇಂದು ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನ. ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭಾವೈಕ್ಯತೆಯನ್ನು ಪ್ರಕಟಿಸುವ ಸಂದರ್ಭವಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಯೂರಲು ನಮ್ಮ ಸಂವಿಧಾನ ಕಾರಣ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ವಿಶ್ವಕ್ಕೆ ಮಾದರಿಯಾದ ಸಂವಿಧಾನ ರಚನೆ ಮಾಡಿದ್ದಾರೆ. ಹಿರಿಯರ ಆಶಯದಂತೆ ನಾವೆಲ್ಲರೂ ದೇಶ ಪ್ರೇಮ ಮೈಗೂಡಿಸಿಕೊಂಡು ಮಕ್ಕಳಿಗೆ ಸಂವಿಧಾನದ ಅರಿವು ಮೂಡಿಸಬೇಕು. ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ಭಾತೃತ್ವದ ಸಂದೇಶ ನೀಡಿ ಒಳ್ಳೆಯ ಸಂಸ್ಕಾರ,ಸಂಸ್ಕೃತಿ ಮಕ್ಕಳಿಗೆ ತಿಳಿಸಬೇಕು ಇದು ಪಾಲಕರ ಹಾಗೂ ಶಿಕ್ಷಕರು ಮನವರಿಕೆ ಮಾಡುವ ಕರ್ತವ್ಯ ಹೊಂದಿದ್ದಾರೆ ಎಂದರು.
ದೇಶದ ನಾಗರಿಕರೇ ನಿಜವಾದ ಮಾಲೀಕರು, ಅವರೇ ಆಸ್ತಿ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಜನರ ಆಶಯ ಈಡೇರಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯ ಅಧಿಕಾರಿಗಳ, ಗೃಹ ರಕ್ಷಕ ದಳ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿ.ಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಬಸವರಾಜ ಪಾಟೀಲ್ ಇಟಗಿ, ಎಸ್.ಪಿ ಎಂ.ಪುಟ್ಟಮಾದಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನುರಿತ ವೈದ್ಯರನ್ನು ಒಳಗೊಂಡ ಚಿಕಿತ್ಸಾ ಆಂಬುಲೆನ್ಸ್, ಅಗ್ನಿಶಾಮಕ ವಾಹನ, ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.
ಬಳಿಕ ಪಥ ಸಂಚಲನದಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.