ಬಲಾಢ್ಯ ಜನಾಂಗ ಮೀಸಲಾತಿ ಕೇಳುವುದು ಸಂವಿಧಾನಕ್ಕೆ ಮಾಡುವ ಅಪಚಾರ : ಕುಂ.ವೀರಭದ್ರಪ್ಪ
ಕುಂ.ವೀರಭದ್ರಪ್ಪ
ರಾಯಚೂರು: ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಗತಿ ಸಾಧಿಸಿರುವ ಬಲಾಢ್ಯ ಜನಾಂಗದವರು ಈಗ ಮೀಸಲಾತಿಗೆ ಬೇಡಿಕೆ ಹುಟ್ಟುಹಾಕಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವೇ ಸರಿ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ಹಿಂದುಳಿದ ಸಮುದಾಯಗಳಿಗಾಗಿ ಶ್ರಮಿಸಿದ್ದಾರೆ. ಅವರನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಲ್ಲದೇ ಮೀಸಲಾತಿ ಬೇಡಿಕೆಗೆ ಹಿಂಸೆಯನ್ನು ಪ್ರಚೋದಿಸಬಾರದು ಎಂದು ಅವರು ಹೇಳಿದರು.
ಜಯಮೃತ್ಯುಂಜಯ ಸ್ವಾಮೀಜಿಯೂ ಪೂರ್ಣ ಪ್ರಮಾಣದ ಸ್ವಾಮೀಜಿ ಅಲ್ಲ, ಅವರು ಸಹ ರಾಜಕಾರಣಿಯ ಒಂದು ಮುಖ. ಆ ಸಮುದಾಯದ ಚುಕ್ಕಾಣಿ ಹಿಡಿಯಲಿಕ್ಕೆ, ಪ್ರಸಿದ್ದಿಯಾಗಲಿಕ್ಕೆ ದುರುಪಯೋಗ ಮಾಡಿಕೊಳ್ಳಬಾರದು. ಪಂಚಮಸಾಲಿ ಸಮುದಾಯ ಅತ್ಯಂತ ನಿರುಪದ್ರವಿ ಸಮುದಾಯವಾಗಿದ್ದು, ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಸ್ವಾಮೀಜಿ ಮಾಡಬಾರದು ಎಂದು ಅವರು ತಿಳಿಸಿದರು.
ಜಯಮೃತ್ಯಂಜಯ ಸ್ವಾಮಿ ಕೂಡಲಸಂಗಮ ಹೆಸರು ಬಳಸಬಾರದು, ಬಸವಣ್ಣ ಅವರ ಹೆಸರು ಹೇಳುವ ಹಕ್ಕಿಲ್ಲ. ತಮ್ಮ ಖುರ್ಚಿಗಾಗಿ ಸ್ವಾಮೀಜಿ ಅವಾಂತರಗಳನ್ನು ಸೃಷ್ಟಿಸಬಾರದು. ವಚನಾನಂದ ಸ್ವಾಮಿ ಸೇರಿ ಸಮುದಾಯದ ಎರಡು ಸ್ವಾಮೀಜಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿರುವುದು ಸರಿಯಲ್ಲ ಎಂದೂ ಅವರು ಉಲ್ಲೇಖಿಸಿದರು.
ಅವರು ಯಾರೇ ಆಗಿರಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಕ, ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಬಾರದು. ಅವರನ್ನು ಕ್ಷಮಿಸುವುದು ಸಮಾಜದ ದೊಡ್ಡ ದೌರ್ಬಲ್ಯ ಹಾಗೂ ತಪ್ಪು. ಲಿಂಗಾಯತ ಸಮುದಾಯ ಒಂದು ಜಾತಿಗೆ ಸೀಮಿತವಾದುದ್ದಲ್ಲ, ಹಿಂದುಳಿದ ಸಮುದಾಯಗಳ ಒಕ್ಕೂಟ ಲಿಂಗಾಯತ ಆಗಿದೆ. ಹಿಂದುಳಿದ ಸಮುದಾಯಗಳ ಒಕ್ಕೂಟದ ಸ್ವಾಯತ್ತತೆಯನ್ನು ಕಾಪಾಡುವ ಕೆಲಸವನ್ನು ಸ್ವಾಮೀಜಿಗಳು ರಾಜಕಾರಣಿಗಳು ಮಾಡಬೇಕು ಅವರು ಕರೆ ನೀಡಿದರು.