ಎಂಎಲ್ ಸಿ ನಾರಾಯಣ ಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ವಾಗ್ದಾಳಿ
"ಸಿ. ಟಿ ರವಿ ಅಸಂವಿಧಾನಿಕ ಭಾಷೆ ಬಳಸಿರುವುದಕ್ಕೆ ನಾನೇ ಸಾಕ್ಷಿ"
ರಾಯಚೂರು: ಎಂಎಲ್ ಸಿ ನಾರಾಯಣ ಸ್ವಾಮಿ ಪ್ರಬುದ್ಧತೆ ಕಳೆದುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇಲ್ಲಸಲ್ಲದ ಮಾತನಾಡಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಮೊದಲು ಅವರು ಮೆದುಳು ಮತ್ತು ನಾಲಗೆ ಚಿಕಿತ್ಸೆ ಪಡೆದುಕೊಳ್ಳಲಿ. ನಂತರ ಇನ್ನೊಬ್ಬರ ಬಗ್ಗೆ ಟೀಕೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಹೇಳಿಕೆ ನೀಡುವಾಗ ಈ ರೀತಿ ತೇಜೊವಧೆ ಮಾಡುತ್ತಿದ್ದಾರೆ. ಡೆತ್ ನೋಟ್ ನಲ್ಲಿ ಕೆಲವರ ಹೆಸರು ಉಲ್ಲೇಖಿಸಿದ್ದಾರೆ. ಅದರಲ್ಲಿ ಪ್ರಿಯಾಂಕ್ ಖರ್ಗೆ ಆಪ್ತರು ಕೂಡ ಇದ್ದಾರೆ ಎಂದು ಬರೆದಿದ್ದಾರೆ. ಇದರಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಏನು ಇಲ್ಲ. ಇದು ವೈಯಕ್ತಿಕ ವ್ಯಕ್ತಿಗಳ ನಡುವೆ ನಡೆದ ಹಣಕಾಸಿನ ವ್ಯವಹಾರವಷ್ಟೇ ಎಂದು ಸ್ಪಷ್ಟ ಪಡಿಸಿದರು.
ಈಗಾಗಲೇ ರಾಜು ಕಮನೂರು ಸ್ಪಷ್ಟನೆ ನೀಡಿ 60 ಲಕ್ಷ ರೂ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು, 15 ಲಕ್ಷ ನಗದು ಕೊಟ್ಟಿದ್ದೇನೆ. ಹಣ ಮರಳಿ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ಎರಡು ಕಡೆ ಹೇಳಿಕೆ ಗಮನಿಸಿದಾಗ ಗೊಂದಲದ ವಾತಾವರಣವಿದೆ. ಇಲ್ಲಿ ನಿಜವಾದ ತಪ್ಪಿತಸ್ಥರು ಯಾರು ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ ಎಂದರು.
ಪ್ರಿಯಾಂಕ್ ಖರ್ಗೆ ಅನುಭವಿ ರಾಜಕಾರಣಿ. ರಾಜಕೀಯದಲ್ಲಿ ಬೆಂಬಲಿಗರು ಇರುವುದು ಸಹಜ. ಈ ಪ್ರಕರಣ ವೈಯುಕ್ತಿಕ . ಅದಕ್ಕೆ ಪ್ರಿಯಾಂಕ್ ಖರ್ಗೆ ಹೊಣೆಗಾರರಲ್ಲ. ಇವರು ತಮ್ಮ ಪಕ್ಷ ನಿಷ್ಠೆ ತೋರಿಸಲು ಕಾಂಗ್ರೆಸ್ ನಾಯಕರ ಬಗ್ಗೆ ಮನಬದಂತೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ತಿರುಚಿ ಹೇಳುವ ಮೂಲಕ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಅವರು ನಿಜವಾದ ಅಂಬೇಡ್ಕರ್ ಅನುಯಾಯಿ ಆಗಿದ್ದರೆ ಅಮಿತ್ ಶಾ ಹೇಳಿಕೆ ಖಂಡಿಸಬೇಕಿತ್ತು. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಅವರ ನಾಲಗೆ ಲಯವನ್ನು ಕಳೆದುಕೊಂಡಿದೆ. ಮಾಧ್ಯಮದವರನ್ನು ಕಂಡಾಕ್ಷಣ ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಸಿ. ಟಿ ರವಿ ಅಸಂವಿಧಾನಿಕ ಭಾಷೆ ಬಳಸಿರುವುದಕ್ಕೆ ನಾನೇ ಸಾಕ್ಷಿ. ಕೆಟ್ಟ ಪದ ಬಳಸಿದ ಕೂಡಲೇ ಪ್ರತಿಭಟನೆ ನಡೆಸಲು ಮುಂದಾದಾಗ ಸದನ ಬಿಟ್ಟು ಹೊರ ಹೋದರು. ತಳ್ಳಾಟ ನೂಕಾಟದ ವೇಳೆ ತರಚಿದ ಗಾಯವಾಯಿತು. ಅಷ್ಟಕ್ಕೆ ಇವತ್ತಿಗೂ ತಲೆಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದ ಜನರ ಗಮನ ಸೆಳೆಯಲು ಅನುಕಂಪ ಗಿಟ್ಟಿಸಿಕೊಳ್ಳಲು ಹೈಡ್ರಾಮಾ ಮಾಡುತ್ತಿದ್ದಾರೆ. ಇಂಥ ನೀಚ, ನಿರ್ಲಜ್ಜ , ನಿಕೃಷ್ಟ ರಾಜಕಾರಣಿಗಳ ಪರವಾಗಿ ನಾರಾಯಣ ಸ್ವಾಮಿ ಹೋರಾಟಕ್ಕಿಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಮುಖಂಡರಾದ ಪಾಮಯ್ಯ ಮುರಾರಿ, ಕೆ.ಶಾಂತಪ್ಪ, ಡಾ.ರಜಾಕ್ ಉಸ್ತಾದ್, ಮಹ್ಮದ್ ಶಾಲಂ, ರಾಜಶೇಖರ ರಾಮಸ್ವಾಮಿ, ಅಬ್ದುಲ್ ಕರೀಂ, ಅಮರೇಗೌಡ ಹಂಚಿನಾಳ, ಶಿವಮೂರ್ತಿ, ಅಸ್ಲಂ ಪಾಶ ಉಪಸ್ಥಿತರಿದ್ದರು.