ಮಾನ್ವಿ: ಹಿಂಗಾರು ಜೋಳ ಖರೀದಿ ನೋಂದಣಿಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು: ಹಿಂಗಾರು ಜೋಳ ಖರೀದಿ ನೋಂದಣಿಗೆ ಒತ್ತಾಯಿಸಿ ಮಾನ್ವಿ ತಾಲ್ಲೂಕಿನ ಹಿರೇಕೋಟ್ನೆಕಲ್ ಗ್ರಾಮದ ಬಾಗಲವಾಡ ಕ್ರಾಸ್ ಹತ್ತಿರ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.
ರಾಯಚೂರು -ಸಿಂಧನೂರು ಮುಖ್ಯ ರಸ್ತೆಯಲ್ಲಿ ಕೆಲಹೊತ್ತು ರಸ್ತೆ ತಡೆ ಚಳವಳಿ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ್ ಭೀಮರಾಯ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇಬೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ ಪಾಷಾ ದಿದ್ದಿಗಿ ಮಾತನಾಡಿ, ತಾಲ್ಲೂಕಿನಲ್ಲಿ ಮುಂಗಾರಿನ ಬೆಳೆಯಾಗಿ ಜೋಳ ಬೆಳೆದ ರೈತರಿಂದ ನಾಲ್ಕು ತಿಂಗಳು ಕಳೆದರೂ ಕೂಡ ಜೋಳ ಖರೀದಿ ಕೇಂದ್ರಗಳ ಮೂಲಕ ಇದುವರೆಗೂ ಕೂಡ ರೈತರು ಬೆಳೆದ ಜೋಳವನ್ನು ಖರೀದಿ ಮಾಡಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ.' ಎಂದು ದೂರಿದರು.
'ತಾಲ್ಲೂಕಿನಲ್ಲಿ ಮುಂಗಾರು ಜೋಳ ಖರೀದಿಗೆ ನೋಂದಣಿಯಾದ ಎಲ್ಲಾ ರೈತರಿಂದಲೂ ಪೂರ್ಣ ಪ್ರಮಾಣದಲ್ಲಿ ಜೋಳವನ್ನು ಖರೀದಿ ಮಾಡಬೇಕು, ಜೋಳ ಸಾಗಣಿಕೆಗೆ ಹೆಚ್ಚುವರಿ ಲಾರಿಗಳ ವ್ಯವಸ್ಥೆ ಮಾಡಬೇಕು. ಹಾಗೂ ಹಿಂಗಾರು ಜೋಳ ಖರೀದಿ ನೋಂದಣಿಗೆ ಒಂದು ದಿನ ಮಾತ್ರ ಅವಕಾಶ ನೀಡಿದ್ದರಿಂದ ತಾಲ್ಲೂಕಿನ ಎಲ್ಲಾ ರೈತರಿಂದ ಜೋಳ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ತಾಲ್ಲೂಕಿನ ಎಲ್ಲಾ ಜೋಳ ಖರೀದಿ ಕೇಂದ್ರಗಳಲ್ಲಿ ರೈತರಿಗೆ ನೋಂದಣಿಗೆ ಮತ್ತೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ, ಮುಖಂಡರಾದ ಚಂದ್ರಕಲಾಧರ ಸ್ವಾಮಿ,
ವಿರೂಪಾಕ್ಷಗೌಡ, ತಿಮ್ಮಾರೆಡ್ಡಿ ಭೋಗಾವತಿ, ವೀರಭದ್ರಗೌಡ , ಕೆ.ನಾಗನ ಗೌಡ, ಹೊಳೆಯಪ್ಪ ಉಟಕನೂರು, ರವಿಕುಮಾರ, ಶರಣಬಸವ ಪೋತ್ನಾಳ್, ಮುತ್ತಣ್ಣ ನಾಯಕ, ರಾಮಕೃಷ್ಣ ಪೋತ್ನಾಳ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.