ಮಾನ್ವಿ ತಹಶೀಲ್ದಾರ್ ಗೆ ಮೂರು ತಿಂಗಳ ಕಡ್ಡಾಯ ರಜೆ

ರಾಜು ಪಿರಂಗಿ
ರಾಯಚೂರು: ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಮಾನ್ವಿ ತಹಶೀಲ್ದಾರ್ ರಾಜು ಪಿರಂಗಿ ಅವರನ್ನು ಮೂರು ತಿಂಗಳ ಮಟ್ಟಿಗೆ ಕಡ್ಡಾಯ ರಜೆ ಮೇಲೆ ಸೇವೆಯಿಂದ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಆರ್.ಆರ್.ಟಿ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿಗೊಳಿಸುವಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂದು ಸಾರ್ವಜನಿಕರು ಹಾಗೂ ವಕೀಲರ ದೂರುಗಳನ್ನು ನೀಡಿದ್ದರು. ತಾಲ್ಲೂಕು ಆಡಳಿತ ನಿರ್ವಹಣೆ ಮತ್ತು ಅಭಿವೃದ್ಧಿ ವಿಷಯದಲ್ಲಿ ಸ್ಥಳೀಯ ಶಾಸಕರೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಶಾಸಕರು ಮೌಖಿಕವಾಗಿ ತಿಳಿಸಿದ್ದರು.
ತಾಲ್ಲೂಕಿನ ಚೀಕಲಪರ್ವಿ ಮತ್ತು ಮದಾಪೂರು ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ ನಡೆಯುತ್ತಿರುವ ಬಗ್ಗೆ ಗಮನದಲ್ಲಿದ್ದರೂ ಕೂಡ ತಡೆಗಟ್ಟುವಲ್ಲಿ ವೈಫಲ್ಯ, ಕೆಳ ಹಂತದ ಸಿಬ್ಬಂದಿಯಾದ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳ ಮೇಲೆ ನಿಯಂತ್ರಣ ಇಲ್ಲದಿರುವುದು, ಮಾನ್ವಿ ಮತ್ತು ಕುರ್ಡಿ ಹೋಬಳಿಯಲ್ಲಿ ಅತಿ ಹೆಚ್ಚಾಗಿ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗುತ್ತಿದ್ದು, ಸರಿಯಾದ ರೀತಿಯಲ್ಲಿ ದೂರುದಾರರಿಗೆ ಸ್ಪಂದಿಸುತ್ತಿಲ್ಲ, ನೀರಮಾನ್ವಿ ಯಲ್ಲಮ್ಮ ಜಾತ್ರೆಯಲ್ಲಿ ಹರಾಜು ಪ್ರಕ್ರಿಯೆ ನಿಯಮನುಸಾರ ನಡೆಸಿರುವುದಿಲ್ಲವೆಂದು ಸಾರ್ವಜನಿಕರಿಂದ ದೂರು ಬಂದಿರುವ ಕಾರಣ ಆಡಳಿತ್ಮಾಕ ಹಿತದೃಷ್ಟಿಯಿಂದ ತಹಶೀಲ್ದಾರ್ ರಾಜು ಪಿರಂಗಿ ಮೇಲೆ ಶಿಸ್ತು ಕ್ರಮ ಜರುಗಿಸಲು ರಾಯಚೂರು ಉಪ ವಿಭಾಗಾಧಿಜಾರಿ ವರದಿ ಸಲ್ಲಿಸಿದ್ದರು.
ವರದಿ ಆಧರಿಸಿ ತಹಶೀಲ್ದಾರ್ ರಾಜು ಪಿರಂಗಿ ಅವರನ್ನು ಮೂರು ತಿಂಗಳ ಮಟ್ಟಿಗೆ ಕಡ್ಡಾಯ ರಜೆಯ ಮೇಲೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಸಿರವಾರ ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ್ ಭೀಮರಾಯ ಅವರಿಗೆ ಹೆಚ್ಚುವರಿಯಾಗಿ ಮಾನ್ವಿ ಪ್ರಭಾರ ತಹಶೀಲ್ದಾರ್ ಹುದ್ದೆಯ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಭೀಮರಾಯ ಅವರು ಪ್ರಭಾರ ತಹಶೀಲ್ದಾರ್ ಹುದ್ದೆಯ ಅಧಿಕಾರ ಸ್ವೀಕರಿಸಿದರು.