ರಾಂಪುರ ಕೆರೆ ಪ್ರದೇಶಕ್ಕೆ ಸಚಿವ ಎನ್ ಎಸ್ ಬೋಸರಾಜು ಭೇಟಿ; ಪರಿಶೀಲನೆ

ರಾಯಚೂರು: ಜಿಲ್ಲೆಯ ಪ್ರವಾಸಲ್ಲಿರುವ ಸಚಿವರಾದ ಎನ್ ಎಸ್ ಬೋಸರಾಜು ಅವರು ಪೂರ್ವನಿಗದಿಯಂತೆ ಫೆ.18ರಂದು ರಾಯಚೂರ ನಗರ ಪ್ರದೇಶದಲ್ಲಿ ಸಂಚರಿಸಿದರು.
ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್. ಶಿವರಾಜ ಪಾಟೀಲ ಅವರೊಂದಿಗೆ ಬೆಳಗ್ಗೆ ರಾಯಚೂರು ನಗರದ ಹೊರ ವಲಯದಲ್ಲಿನ ರಾಂಪುರ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ನಗರಸಭೆಯ ಅಧೀನದಲ್ಲಿನ ಅಂದಾಜು 32 ಎಕರೆಯ ಹೊಸ ಕೆರೆ ಮತ್ತು 10 ಎಕರೆಯ ಹಳೆಯ ಕೆರೆಗಳ ವೀಕ್ಷಣೆ ನಡೆಸಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಕೆಎನ್ ಎಲ್ ಎಲ್ ದ ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತ ಮತ್ತು ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳ ಮೂಲಕ ಗಣೇಕಲ್ ನೀರು ಸಂಗ್ರಹ ಕೇಂದ್ರದಿಂದ ಬರುವ ನೀರನ್ನು ಕೆರೆಗಳಿಗೆ ತುಂಬಿಸುವುದರ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಗ್ರ್ಯಾವಿಟಿ ನಿರ್ಮಾಣಕ್ಕೆ ಕ್ರಮ: ಗಣೇಕಲ್ ನೀರು ಸಂಗ್ರಹ ಕೇಂದ್ರದಿಂದ ಪ್ರತಿ ಬಾರಿ ಕೆನಾಲ್ ಗೆ ನೀರು ಬಂದಾಗ ಕೆರೆಗಳನ್ನು ತುಂಬಿಸುವ ಬದಲಾಗಿ ಗ್ರ್ಯಾವಿಟಿ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು ಉತ್ತಮ. ಹೀಗಾಗಿ ಈ ಪ್ರದೇಶದಲ್ಲಿ ಹೊಸದಾಗಿ ಗ್ರ್ಯಾವಿಟಿ ರಿಸರ್ವರ್ ನಿರ್ಮಾಣ ಮಾಡುವುದರ ಬಗ್ಗೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ಹೂಳೆತ್ತಲು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ಹಳೆಯ ಕೆರೆಯಲ್ಲಿನ ಹೂಳು ಎತ್ತಿ ಅಲ್ಲಿನ ಮಣ್ಣನ್ನು ಪರೀಕ್ಷೆಗೊಳಪಡಿಸಿ ತಜ್ಞರ ವರದಿ ಪಡೆದು ನೀರು ಶೇಖರಣೆ ಮಾಡಿದಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯ ಸಮಯದಲ್ಲಿ 13 ವಾರ್ಡ್ ಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತದೆ. ಅದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು. ಹೆಚ್ಚುವರಿ ಪಂಪ್ ಅಳವಡಿಸಿ ನೀರಿನ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಲ್ಯಾಬ್ ಪರೀಕ್ಷೆ ನಡೆಸಬೇಕು ಎಂದು ಸಚಿವರು ನಗರಸಭೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಲಶುದ್ದೀಕರಣ ಘಟಕಕ್ಕೆ ಭೇಟಿ: ಸಚಿವರು ಹಾಗೂ ಶಾಸಕರು ಕೆರೆ ಪ್ರದೇಶದಲ್ಲಿನ ಜಲಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಪ್ರಯೋಗಾಲಯ, ಕ್ಲ್ಯಾರಿಫೈರ್, ಕೆಮಿಕಲ್ ಹೌಸ್, ನೀರು ಶುದ್ದೀಕರಣ ಘಟಕದ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪತ್ರ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಗುರುಸಿದ್ದಯ್ಯ ಹಿರೇಮಠ, ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ಜಿ ಶಿವಮೂರ್ತಿ, ಮಾಡಗೇರಿ ನರಸಿಂಹಯ್ಯ, ಗುಡಸಿ ತಿಮ್ಮಾರೆಡ್ಡಿ, ಬಿ ರಮೇಶ, ಬಸವರಾಜ ಪಾಟೀಲ ಅತನೂರ ಹಾಗೂ ಇತರರು ಇದ್ದರು.