ʼಮುಡಾ ಪ್ರಕರಣʼಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಸಂಸದ ಜಿ.ಕುಮಾರ್ ನಾಯಕ್

ರಾಯಚೂರು : ಮುಡಾ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೂ ಕೂಡ ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರು ಇದೆ ಎಂಬ ಮಾಹಿತಿ ಮಾಧ್ಯಮಗಳಿಂದ ನನಗೆ ಗೊತ್ತಾಗಿದ್ದು, ಲೋಕಾಯುಕ್ತ ಕಚೇರಿಯಿಂದ ನನಗೆ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ್ ನಾಯಕ್ ಹೇಳಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಡಿನೋಟಿಫಿಕೇಷನ್ ಸಂದರ್ಭದಲ್ಲಿ ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರಲಿಲ್ಲ. ನಾನು ಇನ್ನೂ ಕಿರಿಯ ಅಧಿಕಾರಿ ಆಗಿದ್ದೆ. ಆಗ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದೆ. 1999ರಲ್ಲಿ ನಾನು ರಾಯಚೂರು ಜಿಲ್ಲಾಧಿಕಾರಿಯಾಗಿದ್ದೆ. 2002ರಲ್ಲೂ ನಾನು ರಾಯಚೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದೆ. 2004ರಲ್ಲಿ ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದೆ. 2005ರಲ್ಲಿ ಈ ಪ್ರಕರಣ ನನ್ನ ಗಮನಕ್ಕೆ ಬಂದಿದೆ ಎಂದರು.
ಯಾವುದೇ ಕೃಷಿಕರು, ಖಾಸಗಿಯವರು ಇರಲಿ ಪ್ರಾಧಿಕಾರದಿಂದ ಅವರ ಜಮೀನು ವಶಪಡಿಸಿಕೊಂಡಾಗ ಅವರನ್ನೇ ಭಾಗಿದಾರರನ್ನಾಗಿ ಮಾಡಿಕೊಂಡು ಅವರಿಗೆ ನಿವೇಶನ ಹಂಚಿಕೆ ಮಾಡುವುದು ತಪ್ಪಲ್ಲ. ಇದು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ನೋಟಿಫಿಕೇಶನ್ ಮಾಡಿದ ಮೇಲೆ ಡಿನೋಟಿಫೀಕೇಶನ್ ಮಾಡುವುದು ಯಾವಾಗಲೂ ಜಿಲ್ಲಾಧಿಕಾರಿಗೆ ಅವಕಾಶವಿರುತ್ತದೆ. ವಾಸ್ತತ್ವವಾಗಿ ಎಲ್ಲಾ ನಿಯಮ ಬದ್ಧವಾಗಿದೆ. ನಿಯಮಬಾಹಿರವಾಗಿ ನಿವೇಶನ ಹಂಚಿಕೆ ಮಾಡಿದೆ ಎನ್ನುವುದು ಸರಿಯಲ್ಲ ಎಂದು ವಿವರಿಸಿದರು.
ಯಾವ ರೈತನ ಹೆಸರಿನಲ್ಲಿ ಜಮೀನು ಇತ್ತು. ಆ ರೈತನ ಹೆಸರಿಗೆ ಬರಬಾರದೆಂದು ಪರಿಭಾವಿಸಲಾಗಿದೆ. ಈ ಕುರಿತು ಸಾರ್ವಜನಿಕರು ಯಾರಾದರೂ ಪ್ರಶ್ನೆ ಮಾಡಬಹುದು. ಅಥವಾ ಮುಡಾದಿಂದಲೇ ಡಿನೋಟಿಫಿಕೇಷನ್ ರದ್ದುಗೊಳಿಸಲು ಕ್ರಮ ಕೈಗೊಳ್ಳಬಹುದು. ಇದು ಯಾವುದೂ ಆಗದಂತಹ ಸಂದರ್ಭದಲ್ಲಿ ಜಮೀನಿನ ಮೂಲ ರೈತ ಬಂದು ತಮ್ಮ ಹೆಸರಿಗೆ ಜಮೀನನ್ನು ಪರಭಾರೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ, ಆತನಿಗೆ ಈ ಭೂಮಿ ಯಾವ ರೀತಿ ಬಂತು , ಅದು ಸರ್ಕಾರದಿಂದ ನೀಡಲ್ಪಟ್ಟಿದೆಯೇ, ಈ ಜಮೀನಿನ ಮಾಲೀಕತ್ವ ಈತನಿಗೆ ಸೇರಿದೆಯೇ ಎಂಬ ಸ್ಪಷ್ಟತೆ ಬಂದಾಗ ಅದನ್ನು ಜಿಲ್ಲಾಧಿಕಾರಿಗಳು ಮೂಲ ಜಮೀನಿನ ಮಾಲೀಕನಿಗೆ ಪರಭಾರೆ ಮಾಡುವ ನಿಯಮ ಕರ್ನಾಟಕದಲ್ಲಿದೆ ಎಂದು ತಿಳಿಸಿದರು.
ಯಾವುದೇ ಒಂದು ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಂಡು ಅದನ್ನು ಬಡಾವಣೆ, ನಿವೇಶನ ಯೋಜನೆ ರೂಪಿಸುವುದು ಆಯಾ ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ವಹಿಸುತ್ತವೆ. ಅದರಲ್ಲಿ ಜಿಲ್ಲಾಧಿಕಾರಿಗಳ ಯಾವುದೇ ಪಾತ್ರ ಇರುವುದಿಲ್ಲ ಎಂದು ಕುಮಾರ್ ನಾಯಕ್ ಹೇಳಿದರು.
ನೋಟಿಫಿಕೇಶನ್ ಯಾವ ರೀತಿ ರದ್ದುಗೊಳಿಸಬಹುದು ಅದೇ ರೀತಿ ಡಿನೋಟಿಫಿಕೇಷನ್ ರದ್ದುಗೊಳಿಸಬಹುದು. ಇದು ಬ್ರಹ್ಮ ಬರೆದ ಬರಹವಲ್ಲ ಎಂದರು.
ಪರಭಾರೆ ಮಾಡಿರುವುದು ಸರಿಯಲ್ಲ ಎಂದು ಕಂಡು ಬಂದಾಗ ಮತ್ತೆ ಅದನ್ನು ರದ್ದುಗೊಳಿಸಬಹುದಾಗಿದೆ. ನಾನು ಆ ಸಂದರ್ಭದಲ್ಲಿ ಎಷ್ಟೋ ಪರಭಾರೆ ಮಾಡಿರುವುದನ್ನು ರದ್ದುಗೊಳಿಸಿದ್ದೇನೆ. 2004ರಲ್ಲಿ ಆಗಿರುವ ಪ್ರಕರಣ 2025ರಲ್ಲಿ ಚರ್ಚೆಗೆ ಬಂದಿದೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರು ಇದೆ ಎಂಬುದು ನನಗೆ ಈವರೆಗೂ ಲೋಕಾಯುಕ್ತ ಕಚೇರಿಯಿಂದ ಯಾವುದೇ ಮಾಹಿತಿ ಇಲ್ಲ. ಆ ಬಗ್ಗೆ ಗೊತ್ತಾದರೆ ಸ್ಪಷ್ಟನೆ ಕೊಡುತ್ತೇನೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತರು ಸಲ್ಲಿಸಿರುವ ವರದಿಯಲ್ಲಿ ಏನಿದೆ ಗೊತ್ತಿಲ್ಲ. ಅದನ್ನು ನೋಡಿಲ್ಲ. ನಾನು ಯಾವುದೇ ನಿಯಮ ಬಾಹಿರವಾಗಿ ಕೆಲಸ ಮಾಡಿಲ್ಲ ಎಂದು ಹೇಳಿದರು.
ಮುಡಾ ಪ್ರಕರಣವನ್ನಿಟ್ಟುಕೊಂಡು ಚುನಾಯಿತ ಪ್ರತಿನಿಧಿಯಾದ ನನ್ನ ರಾಜಿನಾಮೆ ಕೇಳುವುದು ತಪ್ಪು, ನಾನು ತಪ್ಪೇ ಮಾಡಿಲ್ಲ. ನಾನು ನನ್ನನ್ನು ಆಯ್ಕೆ ಮಾಡಿದ ಜನರಿಗೆ ದ್ರೋಹ ಮಾಡಿಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ಮುಹಮ್ಮದ್ ಸಲಾಂ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಜಯಂತ್ ರಾವ್ ಪತಂಗೆ, ನರಸಿಂಹಲು ಮಾಡಗಿರಿ, ರಾಮನಗೌಡ ಹಂಚಿನಾಳ ಸೇರಿದಂತೆ ಇನ್ನಿತರರು ಇದ್ದರು.