ಕೆನೆ ಪದರ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯ: ನ್ಯಾನಾಗಮೋಹನ್ ದಾಸ್ ವರದಿಗೆ ವಿರೋಧ

ರಾಯಚೂರು: ಸುಪ್ರೀಂ ಕೋರ್ಟ್ ನ ಏಳು ನ್ಯಾಯಾಧೀಶರ ಪೀಠ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡಬಹುದು ಎಂದು ಸಲಹೆ ನೀಡಿ, ಕೆನೆ ಪದರ(ಕ್ರೀಮೀ ಲೇಯರ್)ದ ಪರಿಕಲ್ಪನೆ ಜಾರಿ ಮಾಡಲು ಹೇಳಿದರೂ ತರಾತುರಿಯಲ್ಲಿ ನ್ಯಾ.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ರಚನೆ ಮಾಡಿದೆ. ಆ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ನ್ಯಾಯಾಲಯದ ಸಲಹೆ ಉಲ್ಲಂಘನೆ ಮಾಡಿದೆ ಎಂದು ಡಾ.ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆರೋಪಿಸಿದ್ದಾರೆ
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಭಾರತದ ಸಂವಿಧಾನದ ಅನುಚ್ಛೇದ 338(9) ರ ಪ್ರಕಾರ ಪರಿಶಿಷ್ಟ ಜಾತಿ ಯವರಲ್ಲಿ ಒಳ ಮೀಸಲಾತಿ ಮಾಡಲು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸಲಹೆ ಪಡೆಯದೆ ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣೆ ಆಯೋಗದ ನೇಮಕ ಸಂವಿಧಾನ ಬಾಹೀರವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ನೀಡಲು ಪರಿಶಿಷ್ಟ ಜಾತಿಯರಲ್ಲಿ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳು, ಹೊಲೆಯ, ಅದರ ಸಂಬಂಧಿತ ಜಾತಿಗಳು, ಪರಿಶಿಷ್ಟ ಜಾತಿಯಲ್ಲದ ಲಮಾಣಿ,ಭೋವಿ, ಕೊರಚ,ಕೊರಮ ಜಾತಿಗಳನ್ನು ಹಾಗೂ ಅಲೆಮಾರಿ ಉಪ ಜಾತಿಗಳು ಸೇರಿ ನಾಲ್ಕು ಗುಂಪುಗಳಾಗಿ ಮಾಡಿದೆ. ಇದರ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡಿದರೆ ಸಂವಿಧಾನದ ಅನುಚ್ಛೇದ 19(1) ಜೆ ಉಲ್ಲಂಘನೆ ಯಾಗುತ್ತದೆ ಎಂದು ಆರೋಪಿಸಿದರು.
ನಾನು ಕರ್ನಾಟಕ ಹೈಕೋರ್ಟ್ ನಲ್ಲಿ 2024ರ ಎ.4ರಂದು ಕೊರಮ,ಕೊರಚ,ಭೋವಿ, ಲಮಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿ ಯಿಂದ ಹೊರತೆಗೆಯಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ ನ್ಯಾಯಾಲಯದ ಆದೇಶ ಬಾಕಿ ಇರುವಾಗಲೇ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹುಸೇನ್ ಬಾಷ ಪಲಕನಮರಡಿ, ನರಸಿಂಹಲು ಪೋತಗಲ್ ಉಪಸ್ಥಿತರಿದ್ದರು.