ರಾಯಚೂರು ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿಸಲು ಸೂಚನೆ
ರಾಯಚೂರು : ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ / ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ 2024-25ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದ ಆಸ್ತಿ ತೆರಿಗೆಯನ್ನು ಪಾವತಿಸಿ ಆಸ್ತಿಯನ್ನು ಗಣಕೀಕರಿಸಿಕೊಂಡು ನಮೂನೆ-2 ಮತ್ತು ನಮೂನೆ-2ಎ ಗಳನ್ನು ಪಡೆದುಕೊಳ್ಳಬೇಕೆಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬೀನ್ ಮೊಹೊಪಾತ್ರ ಅವರು ತಿಳಿಸಿದ್ದಾರೆ.
ನಮೂನೆ-2 ಅಧಿಕೃತ ಖಾತೆ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ / ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳು ನೀಡಲಾದ ಹಕ್ಕು ಪತ್ರಗಳು / ಮಂಜುರಾತಿ ಪತ್ರಗಳು/ ಕಂದಾಯ ಇಲಾಖೆಯಿಂದ 94ರ ಅಡಿ ಯಲ್ಲಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣ ಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲಕರ ಗುರುತಿನ ದಾಖಲೆ ಪತ್ರದ ದಾಖಲೆಗಳು ಹೊಂದಿರಬೇಕು.
ನಮೂನೆ-2ಎ ಅಧಿಕೃತ ಖಾತೆ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲಕತ್ವ ಸಾಬೀತುಪಡಿಸುವ ದಿನಾಂಕ : 10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನಪತ್ರ ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು, ಪ್ರಶಸ್ತಿ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪತ್ರದ ದಾಖಲೆಗಳು ಹೊಂದಿರಬೇಕು.
ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಬರುವ ಸರ್ಕಾರಿ ಜಾಗ / ಅರೆಸರ್ಕಾರಿ / ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ ಇನ್ನುಳಿದ ಕಟ್ಟಡಗಳ / ನಿವೇಶನಗಳ ಮಾಲೀಕರು ತಮ್ಮ ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ರಾಯಚೂರು ಮಹಾನಗರ ಪಾಲಿಕೆ ಕಚೇರಿಗೆ ಸಲ್ಲಿಸಿ ಸ್ವತ್ತಿನ ಸಂಬಂಧಪಟ್ಟ ಆಸ್ತಿ ತೆರಿಗೆಯನ್ನು ಪಾವತಿಸಿ ಆಸ್ತಿಯನ್ನು ಗಣಕೀಕರಿಸಿಕೊಂಡು ನಮೂನೆ-2 ಮತ್ತು ನಮೂನೆ-2Aಗಳನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ರಾಯಚೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.