ಫಾರಂ ನಂಬರ್ 9,11 ಪಡೆಯಲು ಮಹಾನಗರ ಪಾಲಿಕೆಯಿಂದ ಸಮಸ್ಯೆ: ಉದ್ದಿಮೆದಾರರಿಂದ ಆರೋಪ

ರಾಯಚೂರು: ರಾಯಚೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಫಾರಂ ನಂಬರ್ 9 ಹಾಗೂ 11 ಪಡೆಯಲು ಪಂಚಾಯತ್ ಗಳಲ್ಲಿ ಅವೈಜ್ಞಾನಿಕವಾಗಿ ತೆರಿಗೆ ವಿಧಿಸಲಾಗುತ್ತಿದ್ದು, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆದೇಶದಂತೆ ಕೂಡಲೇ ಸಮಸ್ಯೆ ಬಗೆಹರಿಸಿ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮೀ ರೆಡ್ಡಿ ಒತ್ತಾಯಿಸಿದರು.
ಅವರಿಂದು ನಗರದ ದಿ.ಗಂಜ್ ಮಾರ್ಚೆಂಟ್ ಅಸೋಸಿಯೇಷನ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಸೇಲ್ ಡೀಡ್ ಮಾಡುವಾಗ ಫಾರಂ ನಂಬರ್ 9 ಹಾಗೂ 1 ಪಡೆಯಲಾಗುತ್ತಿತ್ತು, ಈಗ ಲೀಸ್ ಕಂ ಸೇಲ್ ಹಾಗೂ ಬ್ಯಾಂಕಿನಲ್ಲಿ ಅಡವಿಡುವ ಸಂದರ್ಭದಲ್ಲಿಯೂ ಕೇಳಲಾಗುತ್ತಿದೆ ಇದರಿಂದ ಉದ್ದಿಮೆದಾರರಿಗೆ ಸಮಸ್ಯೆಯಾಗಿದೆ. ಸರ್ಕಾರ ಖಾಲಿ ನಿವೇಶನಗಳಿಗೆ ಪ್ರತಿ ಸಾವಿರ ಚದರ ಅಡಿಗೆ ಅವೈಜ್ಞಾನಿಕ ತೆರಗೆ ವಿಧಿಸಲಾಗುತ್ತಿದೆ. ಸಚಿವ ಎನ್ ಎಸ್ ಬೋಸರಾಜು ಅವರ ಒತ್ತಾಯದ ಮೇರೆಗೆ ಕೈಗಾರಿಕಾ ಸಚಿವ ಎಂ.ಬಿ ಪಾಟಿಲ್ ಹಾಗೂ ಕಂದಾಯ ಸಚಿವ ಕೃಷ್ಣೆ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಮಸ್ಯೆ ಬಗ್ಗೆ ಚರ್ಚಿಸಿದ್ದು ಜಿಲ್ಲಾಧಿಕಾರಿ ಯವರಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿ ನಿತಿಶ್ ಕೆ ಉದ್ದಿಮೆಗಳ ಮಾಲೀಕರ ಜೊತೆ ಏಕಗವಾಕ್ಷಿ ಸಭೆ ನಡೆಸಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಸಬ್ ರಿಜಿಸ್ಟರ್ ಕಚೇರಿ ಇ-ಖಾತಾ ಇಲ್ಲದೆ ರಿಜಿಸ್ಟ್ರೇಷನ್ ಮಾಡಯವಲ್ಲಿ ವಿಳಂಬ ಮಾಡಲಾಗುತ್ತಿದೆ. ಸರ್ಕಾರ ಏಕಾಏಕಿ ನೋಂದಣಿ ಮಾಡದಂತೆ ಆದೇಶ ಹೊರಡಿಸಿದ್ದು, ಉದ್ದಿಮೆದಾರರಿಗೆ ಸಮಸ್ಯೆಯಾಗಿದೆ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲೆಯರಿಗೇ ಉಸ್ತುವಾರಿ ನೀಡಲಿ; ಜಿಲ್ಲೆಯ ಜನರ ಬಹು ದಿನದ ಬೇಡಿಕೆಯಾದ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಕೇಂದ್ರ ಸರ್ಕಾರ ಕಲಬುರಗಿ ಜಿಲ್ಲೆಗೆ ನೀಡಿ ನಮಗೆ ಅನ್ಯಾಯ ಮಾಡಿದೆ. ಜಿಲ್ಲೆಯಲ್ಲಿ ಹೆಚ್ಚು ಕಾಟನ್ ಫ್ಯಾಕ್ಟರಿ ಇರುವುದರಿಂದ ವೈಜ್ಞಾನಿಕ ವಾಗಿ ನಮಗೆ ಸಿಗಬೇಕಿತ್ತು.ರಾಜಕೀಯ ನಾಯಕರ ಒಗ್ವಟ್ಟಿನ ಕೊರತೆ ಹಾಗೂ ಹೊರಗಿನ ಜಿಲ್ಲೆಯವರಾದ ಶರಣಪ್ರಕಾಶ ಪಾಟೀಲರುಗೆ ಉಸ್ತುವಾರಿ ನೀಡಿದ್ದರಿಂದ ಜಿಲ್ಲೆಗೆ ಕೈತಪ್ಪಿದೆ. ಅನೇಕ ದೊಡ್ಡ ಯೋಜನೆಗಳಿಂದ ಜಿಲ್ಲೆ ವಂಚಿತವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲೆಯವರಾದ ಎನ್ ಎಸ್ ಬೋಸರಾಜು ಅವರಿಗೆ ಉಸ್ತುವಾರಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಕಲಬುರಗಿಯಲ್ಲಿ ಈಗಾಲೇ ಟೆಕ್ಸ್ಟ್ ಟೈಲ್ ಪಾರ್ಕ್ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಅಲ್ಲಿನಅನೇಕ ತಾಂತ್ರಿಕ ಸಮಸ್ಯೆ ತಲೆದೂರಿದ್ದು ಈಗಾಗಲೇ ಕೆಲ ಉದ್ದಿಮೆದಾರರು ಅಪಸ್ವರ ಎತ್ತಿದ್ದಾರೆ. ಕರ್ನಾಟಕದಿಂದ ಎರಡನೇ ಜಿಲ್ಲೆಯ ಆದ್ಯತೆಯ ಮೆರೆಗೆ ರಾಯಚೂರಿಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ನೀಡಬೇಕಿದೆ ಎಂದರು.
ರಾಯಚೂರು ಕೈಗಾರಿಕಾ ಅಭಿವೃದ್ಧಿಗೆ ತಾಲೂಕಿನ ಸಿಂಗನೋಡಿ, ಚಂದ್ರಬಂಡಾ, ಕುರುಬದೊಡ್ಡಿ ಗ್ರಾಮಗಳಲ್ಲಿ 693 ಎಕರೆ ಭೂ ಸ್ವಾಧೀನಕ್ಕೆ ಹಿಂದಿನ ಹಾಗೂ ಇಂದಿನ ಸರ್ಕಾರಕ್ಕೆ ಮನವಿ ಮಾಡಿದರೂ ಅಧಿಕಾರಗಳು ಭೂಸ್ವಾಧೀನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಶ್ರೇಣಿಕ್ ರಾಜ್ ಮೂಥಾ, ಗೌರವಾಧ್ಯಕ್ಷ ಶೈಲೇಶ್ ಕುಮಾರ ಧೋಕ ಉಪಸ್ಥಿತರಿದ್ದರು.