ರಾಯಚೂರು | ಜಿಲ್ಲಾಧಿಕಾರಿಗಳಿಂದ ವಿಶೇಷಚೇತನರಿಗೆ ಅವಮಾನ ಆರೋಪ; ಕ್ಷಮೆಯಾಚಿಸಲು ಆಗ್ರಹ
ರಾಯಚೂರು : ಡಿ.3ರಂದು ಇಲ್ಲಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹತ್ತಲು ಅಂಗವಿಕಲರಿಗೆ ಕೃತಕ ರ್ಯಾಂಪ್ ಅಳವಡಿಸದೇ ವೇದಿಕೆಯ ಕೆಳಭಾಗದಲ್ಲಿ ಸನ್ಮಾನ ಮಾಡಿ ಅವಮಾನ ಮಾಡಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಿತಿಶ್ ಕೆ. ಕೂಡಲೇ ವಿಶೇಷಚೇತನರಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಗ್ಯಾನಿ ಅತ್ತನೂರು ಒತ್ತಾಯಿಸಿದ್ದಾರೆ.
ಗುರುವಾರ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ನಡೆದಿದ್ದ ಪೂರ್ವಭಾವಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ವಿಶೇಷಚೇತನರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ವೇದಿಕೆ ಹತ್ತಲು ಆಗದವರಿಗೆ ರ್ಯಾಂಪ್, ಬ್ರೈಲ್ ಲಿಪಿ ಸೇರಿದಂತೆ ವಿವಿಧ ಸಲಕರಣೆ ಇಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೂ ಕೃತಕ ರ್ಯಾಂಪ್ ಅಳವಡಿಸದೇ ಸಾಧಕರಿಗೆ ವೇದಿಕೆಯ ಕೆಳಗಡೆ ಕೂರಿಸಿದ್ದಾರೆ ಹಾಗೂ ಅಲ್ಲಿಯೇ ಸನ್ಮಾನ ಮಾಡಿ ವಿಶೇಷಚೇತನರ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.
ವಿಶೇಷಚೇತನರಿಗೆ ಆದ ಅವಮಾನವನ್ನು ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿಗೆ ಹೇಳಲು ಮುಂದಾದ ವೇಳೆ ಮತ್ತೊಂದು ದ್ವಾರದಿಂದ ಹೊರ ಹೋಗಿದ್ದಾರೆ. ವಿಶೇಷಚೇತನರ ಕಲ್ಯಾಣ ಅಧಿಕಾರಿ ಶ್ರೀದೇವಿಗೆ ಹೇಳಿದರೂ, ಉಡಾಫೆಯ ಉತ್ತರ ನೀಡಿದ್ದಾರೆ ಎಂದು ದೂರಿದರು.
ಕೂಡಲೇ ಕಾರ್ಯಕ್ರಮ ಆಯೋಜಿಸಿದ್ದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಂಡು ಜಿಲ್ಲಾಧಿಕಾರಿ ಕ್ಷಮೆಯಾಚಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡ ಶಿವಶಂಕರ್ ಬಾಳೆ ಉಪಸ್ಥಿತರಿದ್ದರು.