ರಾಯಚೂರು | ಮನರೇಗಾದಲ್ಲಿ 5 ಲಕ್ಷ ರೂ. ಅವ್ಯವಹಾರ ; ಮರು ವಸೂಲಿಗೆ ಆದೇಶ
ಮೋಯಿನುದ್ದೀನ್/ವೀರೇಂದ್ರ
ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ಚಾಗಭಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಯಲ್ಲಿ .5.8 ಲಕ್ಷ ರೂ. ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮರು ವಸೂಲಾತಿಗೆ ಆದೇಶ ಮಾಡಲಾಗಿದೆ.
ಚಾಗಭಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಲಾಪೂರ ಕ್ಯಾಂಪಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುತ್ತ ಮತ್ತು ಕ್ಯಾಂಪಿನ ಸ್ಮಶಾನದಲ್ಲಿ ಸಸಿ ನೆಡದೇ ಹಣ ಪಡೆದಿರುವುದು, ಜಾನುವಾರುಗಳಿಗೆ ಕುಡಿಯುವ ನೀರಿನ ಕೆರೆಯ ಹೂಳೆತ್ತಿದೆ ಎಂದು ಸುಳ್ಳು ದಾಖಲೆ ಸೃಷ್ಟಿ, ಶಾಲಾ ಗೇಟ್ ನಿರ್ಮಾಣದಲ್ಲಿ, ಬಿಸಿಯೂಟ ಕೋಣೆ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳ ಬೋಗಸ್ ಬಿಲ್ ಸೃಷ್ಟಿಸಿ ಬಿಲ್ ಭ್ರಷ್ಟಾಷಾರ ನಡೆದಿತ್ತು.
ಓಂಬುಡ್ಸ್ ಮನ್ ಪರ್ಸನ್ ಮೇಲ್ಮನವಿ ಪ್ರಾಧಿಕಾರ ತನಿಖೆ ನಡೆಸಿ, ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ ಪಿಡಿಒ, ಗ್ರಾಮ ಪಂಚಾಯತ್ ಅಧ್ಯಕ್ಷ, ತಾಂತ್ರಿಕ ಸಹಾಯಕರಿಂದ 5.8 ಲಕ್ಷ ರೂ. ಹಣ ಮರು ವಸೂಲಾತಿ ಮಾಡುವಂತೆ ಆದೇಶಿಸಿದೆ.
ಓಂಬುಡ್ಸ್ ಮನ್ ಪರ್ಸನ್ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷ ಸಿ.ಸಿದ್ದರಾಮಯ್ಯ, ಸದಸ್ಯರಾದ ವಿದ್ಯಾವತಿ, ಎಚ್.ಎಲ್.ರಮೇಶ ಅವರ ತ್ರಿಸದಸ್ಯ ಸಮಿತಿಯು ಪಿಡಿಒ ಮೋಯಿನುದ್ದೀನ್, ಚಾಗಭಾವಿ ಗ್ರಾ.ಪಂ.ಅಧ್ಯಕ್ಷ ವೀರೇಂದ್ರ, ತಾಂತ್ರಿಕ ಸಹಾಯಕ ಪುಂಡಲೀಕ ಅವರಿಗೆ ತಲಾ 1.93 ಲಕ್ಷ ರೂ. ನಂತೆ ಒಟ್ಟು 5.8 ಲಕ್ಷ ರೂ. ಗಳ ದಂಡ ವಿಧಿಸಿ ಮರು ವಸೂಲಾತಿ ಆದೇಶಿಸಿದೆ.