ರಾಯಚೂರು | ದಲಿತ ಸಿಬ್ಬಂದಿಯ ಮೇಲೆ ದೌರ್ಜನ್ಯ ಆರೋಪ : ದೂರು ಸ್ವೀಕರಿಸದ ಪಿಎಸ್ ಐ ವಿರುದ್ಧ ಕ್ರಮಕ್ಕೆ ಮನವಿ
ರಾಯಚೂರು : ನಗರದ ರಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಮೇಶ ಬಿ. ಅವರು ದಲಿತ ಸಿಬ್ಬಂದಿ ಪಿ.ಅನಿಲ್ ಕುಮಾರ್ ಅವರಿಗೆ ಜಾತಿ ನಿಂದನೆ ಮಾಡಿ ಸೇವೆಯಿಂದ ಅಮಾನತುಗೊಳಿಸಿರುವ ಬಗ್ಗೆ ದೂರು ಸ್ವೀಕರಿಸದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಐ ವಿರುದ್ಧ ಬಳ್ಳಾರಿ ವಲಯದ ಪೊಲೀಸ್ ಮಹಾನಿರ್ದೇಶಕರಿಗೆ ಮೂಲ ನಿವಾಸಿ ಅಂಬೇಡ್ಕರ್ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಅನಿಲ್ ಕುಮಾರ ರಿಮ್ಸ್ ಆಸ್ಪತ್ರೆ ಯಲ್ಲಿ ಈಗಾಗಲೇ ಸುಮಾರು 10ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಮೇಲೆ ನಿರಂತರವಾಗಿ ಜಾತಿ, ನಿಂದನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಮೂಲಕ ದೌರ್ಜನ್ಯ ನಡೆಸಿದ್ದಾರೆ. ಈ ಕುರಿತು ಅನಿಲ್ ಕುಮಾರ ದೂರು ನೀಡಿ 35ದಿನಗಳು ಕಳೆದರೂ ಪಿಎಸ್ಐ ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೇ ದೂರು ಸ್ವೀಕರಿಸಲು ಬರುವುದಿಲ್ಲ ಎಂದು ಕಾಲಾಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನೊಂದ ಅನಿಲ್ ಕುಮಾರ್ ಆತ್ಮಹತ್ಯೆಗೂ ಯತ್ನಿಸಿದ್ದಾನೆ. ಕೂಡಲೇ ದೂರು ಸ್ವೀಕರಿಸಲು ಕಾಲಾಹರಣ ಮಾಡುತ್ತಿರುವ ಮಾರ್ಕೆಟ್ ಯಾರ್ಡ್ ಪಿಎಸ್ ಐ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೂಲ ನಿವಾಸಿ ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಭರತ್ ಕುಮಾರ್ ಸೇರಿದಂತೆ ಸಂಘಟನೆಯ ಮುಖಂಡರು ಪೊಲೀಸ್ ಮಹಾನಿರ್ದೇಶಕ ಲೋಕೇಶ ಕುಮಾರ ಅವರಿಗೆ ಮನವಿ ಮಾಡಿದರು.