ರಾಯಚೂರು | ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ; ಕೆಆರ್ಎಸ್ ಆರೋಪ

ರಾಯಚೂರು : ಅರೋಲಿ ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲದಿರುವ ಬಗ್ಗೆ ತಾಲೂಕು ಪಂಚಾಯತ್ ಇ.ಒ ಹಾಗೂ ಪಿಡಿಒಗೆ ಕೇಳಲು ಹೋದಾಗ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು ಕೆ.ಆರ್ ಎಸ್ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ವಿ ತಾಲೂಕಿನ ಅರೋಲಿ ಗ್ರಾಮದಲ್ಲಿ ಕಳೆದ ಅನೇಕ ದಿನಗಳಿಂದ ಕುಡಿಯುವ ನೀರು ಹಾಗೂ ಸ್ವಚ್ಚತೆ ಮೂಲಭೂತ ಸೌಕರ್ಯ ಸಮರ್ಪಕವಾಗಿ ಇಲ್ಲದಿರುವ ಬಗ್ಗೆ ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಮಾ.11 ರಂದು ರಾಮಸ್ವಾಮಿ ಅವರು ಇ.ಒ ಖಾಲಿದ್ ಅಹ್ನದ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿದಾಗ ಮಾಧ್ಯಮಗಳಿಗೆ ಹೇಳಿಕೆ ಯಾಕೆ ಕೊಟ್ಟಿದ್ದೀರಿ ಎಂದು ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಪಿಡಿಒ ನಾಗಭೂಷಣ್ ಅವರೂ ಇದ್ದು ಪ್ರಶ್ನೆ ಮಾಡಿದ್ದನ್ನೇ ನೆಪ ಮಾಡಿಕೊಂಡು ಗ್ರಾಮ ಪಂಚಾಯತ್ ಅಧ್ಯಕ್ಷ ವೀರಾರೆಡ್ಡಿ ಹಾಗೂ ಸದಸ್ಯರು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಇ.ಒ ಅವರೇ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿದರು.
ಮಾ.13 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಇ.ಒ ಹಾಗೂ ಪಿಡಿಒ ಹೆಸರು ದೂರಿನಲ್ಲಿ ಸೇರಿಸಲು ನಿರಾಕರಿಸಿದ್ದಾರೆ. ಸಾಕಷ್ಟು ಒತ್ತಾಯದ ಬಳಿಕ ದೂರು ಸ್ವೀಕರಿಸಿದ್ದಾರೆ. ಅದೇ ರಾತ್ರಿ ರಾಮಸ್ವಾಮಿ ಅವರ ಮೇಲೆ ಎಸ್ ಸಿ,ಎಸ್ ಟಿ ದೌರ್ಜನ್ಯ ಸುಳ್ಖು ಪ್ರಕರಣ( ಅಟ್ರಾಸಿಟಿ) ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಶ್ನೆ ಮಾಡಿದರೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದ್ದು, ಜಿಲ್ಲಾಡಳಿತ ತಕ್ಷಣವೇ ಘಟನೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ಅಧ್ಯಕ್ಷರ ದೂರಿನ ಮೇರೆಗೆ ತನಿಖೆ ನಡೆಸಿ ಸುಳ್ಳು ಪ್ರಕರಣ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಈ ವೇಳೆ ರಾಜ್ಯ ಘಟಕದ ಅಧ್ಯಕ್ಷೆ ಆಶಾ ವೀರೇಶ, ವಿಜಯರಾಜ್, ಮತ್ತಿತರರು ಇದ್ದರು