ರಾಯಚೂರು | ವಸತಿ ನಿಲಯದ ವಿದ್ಯಾರ್ಥಿನಿಯರ ಖಾಸಗಿ ವೀಡಿಯೊ ಚಿತ್ರೀಕರಣಕ್ಕೆ ಯತ್ನ : ದೂರು ದಾಖಲು
ಸಾಂದರ್ಭಿಕ ಚಿತ್ರ (credit: Meta AI)
ರಾಯಚೂರು : ಜಿಲ್ಲೆಯ ಮಾನ್ವಿ ತಾಲ್ಲೂಕಿನ ರಾಜಲಬಂಡಾ ಮೂರಾರ್ಜಿ ದೇಸಾಯಿ ಹಿಂದುಳಿದ ವರ್ಗ ವಸತಿ ನಿಲಯದ ವಿದ್ಯಾರ್ಥಿನಿಯರ ಶೌಚಾಲಯದ ಹಿಂಭಾಗದಲ್ಲಿ ಯುವಕನೊಬ್ಬ ಮೊಬೈಲ್ ನಿಂದ ವಿದ್ಯಾರ್ಥಿನಿಯರ ಖಾಸಗಿ ವೀಡಿಯೊವನ್ನು ಚಿತ್ರೀಕರಣಕ್ಕೆ ಯತ್ನಿಸಿದ ಘಟನೆ ನಡೆದಿರುವುದು ವರದಿಯಾಗಿದೆ.
ಡಿ.19 ರಂದು ರಾತ್ರಿ 10 ಗಂಟೆಗೆ ವಿದ್ಯಾರ್ಥಿನಿಯರ ಖಾಸಗಿ ವೀಡಿಯೊವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಯತ್ನಿಸಿದ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಪಟ್ಟಣದ ಕರಡ್ಡಿಗುಡ್ಡ ರಸ್ತೆಯಲ್ಲಿರುವ ಮೂರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಬಾಲಕಿಯರು ಹಾಗೂ ಬಾಲಕರು ಇರುವಂತಹ ಹಾಸ್ಟೆಲ್ ನಲ್ಲಿ ಎಂದಿನಂತೆ ಬಾಲಕಿಯರು ಶೌಚಾಲಯಕ್ಕೆ ಹೋದಾಗ ಶೌಚಾಲಯದ ಕಿಟಕಿಯ ಮೇಲೆ ಮೊಬೈಲ್ ಇಟ್ಟಿರುವುದನ್ನು ಗಮನಿಸಿದ ವಿದ್ಯಾರ್ಥಿನಿ ತಕ್ಷಣ ತರಗತಿ ವಿದ್ಯಾರ್ಥಿನಿಯರಿಗೆ ಹಾಗೂ ಬಾಲಕರಿಗೆ ವಿಷಯ ತಿಳಿಸಿದಾಗ ಸ್ಥಳದಲ್ಲಿದ್ದ ವಾರ್ಡನ್ ಶಂಕ್ರಪ್ಪ, ಪ್ರಾಂಶುಪಾಲರು ಹಾಗೂ ಬಾಲಕರು ಹಾಸ್ಟೆಲ್ ಕೌಂಪೌಂಡ್ ಹೊರಗಡೆ ತೆರಳಿ ಯುವಕನ್ನು ಹಿಡಿಯುವ ಪ್ರಯತ್ನ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ವಾರ್ಡನ್ ಶಂಕ್ರಪ್ಪ ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅಲ್ಲಿ ಇರುವಂತಹ ಜನರಿಗೆ ಹಾಗೂ ಯುವಕರಿಗೆ ಮಹಿಳೆಯರ ವಸತಿ ನಿಲಯದ ಕಡೆಗೆ ಯಾರು ಬರುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ರಾತ್ರಿ ಮೂರಾರ್ಜಿ ದೇಸಾಯ ವಸತಿ ನಿಲಯಕ್ಕೆ ಪಿಐ ವೀರಭದ್ರಯ್ಯ ಹಿರೇಮಠ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ವಾರ್ಡನ್ ಶಂಕ್ರಪ್ಪ ನೀಡಿದ ದೂರಿನ ಆಧಾರದ ಮೇಲೆ ಅನುಮಾನಾಸ್ಪದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಿಗೊಂಡು ತನಿಖೆ ಕೈಗೊಂಡಿದ್ದಾರೆ.