ರಾಯಚೂರು | ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ರಾಯಚೂರು: ರಕ್ತಸ್ರಾವ ಕಾರಣ ಬಾಣಂತಿಯೊಬ್ಬರು ಮೃಪಟ್ಟಿರುವ ಘಟನೆ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.
ರಾಯಚೂರು ತಾಲೂಕಿನ ರಬ್ಬನಕಲ್ ಗ್ರಾಮದ ನಿವಾಸಿ ಈಶ್ವರಿ (32) ಮೃತಪಟ್ಟಿರುವ ಬಾಣಂತಿ. ಮಟಮಾರಿ ಹಾಗೂ ರಿಮ್ಸ್ ಆಸ್ಪತ್ರೆಯ ವೈದ್ಯರು ಸೂಕ್ತ ಸಂದರ್ಭದಲ್ಲಿ ಸ್ಪಂದಿಸದ ಕಾರಣ ಈಶ್ವರಿ ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಟಮಾರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಈಶ್ವರಿ ಸೋಮವಾರ ಬೆಳಗಿನ ಜಾವ ಮಗುವಿಗೆ ಜನ್ಮ ನೀಡಿದ್ದರು. ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಬುಧವಾರ ತೀವ್ರ ಜ್ವರ, ಬಳಲಿಕೆ ಕಂಡುಬಂದಿಲ್ಲದೆ, ಪುನಃ ರಕ್ತಸ್ರಾವ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ಮತ್ತೆ ಮಟಮಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ವೈದ್ಯರು ಇಲ್ಲದೆ ಸಮಸ್ಯೆ ಎದುರಾಯಿತು. ತಕ್ಷಣ ಆ್ಯಂಬುಲೆನ್ಸ್ ಮೂಲಕ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ದಾಖಲಾದಾಗ "ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ, ನಾವು ಏನು ಮಾಡೋಕೆ ಆಗಲ್ಲ'' ಎಂದರಲ್ಲದೆ, ನಮ್ಮಿಂದ ಬರೆಸಿಕೊಂಡು ಚಿಕಿತ್ಸೆ ನೀಡಿದರು. ಅಲ್ಲಿ ಈಶ್ವರಿ ಕೊನೆಯುಸಿರೆಳೆದಿದ್ದಾರೆ. ಈಶ್ವರಿ ಸಾವಿಗೆ ಮಟಮಾರಿ ಹಾಗೂ ರಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸೂಕ್ತ ಸಂದರ್ಭದಲ್ಲಿ ಸ್ಪಂದಿಸದ ಸಿಬ್ಬಂದಿಯೇ ಕಾರಣ ಎಂದು ಮೃತಳ ಸಂಬಂಧಿ ಚರಣರಾಜ್ ಎಂಬವರು ಆರೋಪಿಸಿದ್ದಾರೆ.
ಮೃತಳಿಗೆ ಐದು ದಿನದ ನವಜಾತ ಶಿಶು ಸೇರಿ ಮೂವರು ಮಕ್ಕಳಿದ್ದಾರೆ.
--------------------
ಬಾಣಂತಿ ಮಟಮಾರಿ ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ಆರೋಗ್ಯವಾಗಿದ್ದಳು. ಮನೆಗೆ ಹೋಗಿದ ಒಂದೆರೆಡು ದಿನಗಳಲ್ಲಿ ತೀವ್ರ ಆಯಾಸ,ದಮ್ಮು, ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಸಾವಿನ ಸುದ್ದಿ ಆಘಾತ ಮೂಡಿಸಿದೆ.
- ಡಾ.ಸುರೇಂದ್ರ ಬಾಬು, ಜಿಲ್ಲಾ ಆರೋಗ್ಯ ಅಧಿಕಾರಿ ರಾಯಚೂರು.