ರಾಯಚೂರು | ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ರಾಯಚೂರು : ಕೇಂದ್ರ ಸರ್ಕಾರ ಇಂಧನ ಹಾಗೂ ಎಲ್‍ಪಿಜಿ ಬೆಲೆ ಏರಿಕೆ ಹಾಗೂ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ವತಿಯಿಂದ ಇಂದು ಸಿಲಿಂಡರ್ ಪ್ರದರ್ಶಿಸಿ ಪ್ರತಿಭಟನೆ ಮಾಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಯುವ ಘಟಕದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ ಎರಡು ರೂ. ಗಳಂತೆ ಹೆಚ್ಚಿಸಿರುವುದು, ಪ್ರತಿ ಎಲ್‍ಪಿಜಿ ಸಿಲೆಂಡರ್ ಬೆಲೆಯನ್ನು 50ರೂಪಾಯಿಗೆ ಹೆಚ್ಚಿಸಿರುವುದನ್ನು ಖಂಡಿಸಿದರು.
ರಸ್ತೆಯ ಮೇಲೆ ಕಟ್ಟಿಗೆಯಿಂದ ಅಡುಗೆ ಮಾಡಿ ಹಾಗೂ ಎಲ್‍ಪಿಜಿ ಸಿಲಿಂಡರ್ ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗೆ ಮನವಿ ರವಾನಿಸಿದರು.
ಕೂಡಲೇ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿಸಿರುವ ಅಬಕಾರಿ ಸುಂಕವನ್ನು ಹಿಂಪಡೆಯಬೇಕು, ಎಲ್‍ಪಿಜಿ ಸಿಲೆಂಡರ್ ಹೆಚ್ಚಿರುವ 50 ರೂ. ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಮರಿಸ್ವಾಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸೇನ್ ಭಾಷಾ, ರಾಜ್ಯ ಕಾರ್ಯದರ್ಶಿ ಫೈಸಲ್ ಖಾನ್, ಪದಾಧಿಕಾರಿಗಳಾದ ಪಿ.ಮಧುಕುಮಾರ, ರಶೀದ್, ಮಹ್ಮದ್ ಶಹನಾಜ್, ಸಂತೋಷ ಕುಮಾರ, ಅಬ್ದುಲ್ ಗೌಸ್, ಸಿದ್ಧುನಾಯಕ ಪಾಲ್ಗೊಂಡಿದ್ದರು.