ರಾಯಚೂರು | ಮರ್ಚೆಡ್ ಗ್ರಾಮದಲ್ಲಿ ಮೊಸಳೆ ಪ್ರತ್ಯೇಕ್ಷ
ರಾಯಚೂರು : ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಮೊಬ್ಬೆಲ್ಲಮ್ಮ ದೇವಸ್ಥಾನ ಹತ್ತಿರ ಕೆರೆ ನೀರು ಹರಿದು ಹೋಗುವ ಸ್ಥಳದಲ್ಲಿ ದೊಡ್ಡ ಗಾತ್ರದ ಮೊಸಳೆ ಸೋಮವಾರ ಪ್ರತ್ಯೇಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಮರ್ಚೆಡ್ ಗ್ರಾಮದ ಯುವ ಮುಖಂಡ ಮುಜಾಹಿದ್ ಮರ್ಚೆಡ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ವಲಯ ಅರಣ್ಯ ಅಧಿಕಾರಿ ರಾಜೇಶ್ ಕುಮಾರ ನೇತೃತ್ವದ ತಂಡ ಗ್ರಾಮದ ಮೊಸಳೆ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರೊಂದಿಗೆ ಮಾಹಿತಿ ಪಡೆದು ಕೆರೆ ನೀರುವ ಹೋಗುವ ಸ್ಥಳದಲ್ಲಿ ಜಾಗೃತಿ ಬ್ಯಾನರ್ ಅಳವಿಡಿಸಿ ಕೆರೆಯ ಬಳಿ ಸಾರ್ವಜನಿಕರು ಹೋಗಬಾರದು ಎಂದು ಮನವಿ ಮಾಡಿದ ಅರಣ್ಯ ಅಧಿಕಾರಿಗಳು, ಯಾವುದೇ ಕಾರಣಕ್ಕೆ ಭಯಪಡದೇ ಮೊಸಳೆ ಕಂಡ ತಕ್ಷಣ ಅರಣ್ಯ ಇಲಾಖೆಯ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಶೀಘ್ರವೇ ಕಾರ್ಯಾಚರಣೆ ನಡೆಸಿ ಮೊಸಳೆ ಹಿಡಿದು ಬೇರೆಡೆ ಸಾಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಲ್ಲಪ್ಪ ಮರ್ಚೆಡ್ , ವಾಹನ ಚಾಲಕ ವಿಜಯ ಮತ್ತು ಊರಿನ ಮುಖಂಡರಾದ ಮೌನಪ್ಪ ಭಜನೆ, ನರಸಿಂಹಲು ಗಾಣಿಗಿ, ಅಡಿವಪ್ಪ, ರಾಮಸ್ವಾಮಿ ಉಪಸ್ಥಿತರಿದ್ದರು.