ರಾಯಚೂರು | ತೋರಣದಿನ್ನಿ ಗ್ರಾಪಂ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು: ಜಿಲ್ಲೆಯ ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಗ್ರಾಮ ಪಂಚಾಯತ್‌ನ 15ನೇ ಹಣಕಾಸು ಯೋಜನೆ, ಪಂಚವಾರ್ಷಿಕ ಯೋಜನೆಯ ಅನುದಾನ, ಕರವಸೂಲಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಮ್ಮಪ್ಪ ಅವರು ಅವ್ಯವಹಾರ ನಡೆಸಿದ್ದಾರೆ ಎಂದು ಗ್ರಾಪಂ ಸದಸ್ಯೆ ಚಂದಮ್ಮ ಜೋಸೆಫ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋರಣದಿನ್ನಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಸರ್ಕಾರದ ವಿವಿಧ ಲೆಕ್ಕ ಶಿರ್ಷಿಕೆ ಅನುದಾನ ಸಂಪೂರ್ಣವಾಗಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಮಸ್ಕಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಇದುವರೆಗೂ ಯಾವುದೇ ತನಿಖೆ ನಡೆಸಿಲ್ಲ. ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಅಲ್ಲದೇ ಗ್ರಾಮ ಪಂಚಾಯತ್ ಸದಸ್ಯರು ಸಭೆಯಲ್ಲಿ ವಾರ್ಡ್‍ನ ಸಮಸ್ಯೆಗಳ ಕುರಿತು ಗಮನ ಸೆಳೆದಾಗ ಸದಸ್ಯರೊಂದಿಗೆ ಪಿಡಿಒ ಅವರು ಅಗೌರವದೊಂದಿಗೆ ನಡೆದುಕೊಳ್ಳುತ್ತಾರೆ. ಸದಸ್ಯರ ಗಮನಕ್ಕೆ ತರದೇ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಾರೆ ಎಂದು ಆಪಾದಿಸಿದರು.
ತೋರಣದಿನ್ನಿ ಗ್ರಾಪಂಯಲ್ಲಿನ ವಿವಿಧ ಯೋಜನೆಗಳಲ್ಲಿ ನಡೆದಿರುವ ಅವ್ಯಹಾರಕ್ಕೆ ಸಂಬಂಧಿಸಿದಂತೆ ಸಾಮಾಗ್ರಿಗಳ ಖರೀದಿಗೆ ಸರ್ಕಾರ ಮಾರ್ಗಸೂಚಿ ಪಾಲಿಸಿಲ್ಲ. ಲೆಕ್ಕ ಪರಿಶೋಧನಾ ವರದಿಯ ಬಗ್ಗೆ ಪರಿಶೀಲನೆ ಮಾಡಬೇಕು, ತೆರಿಗೆ ಹಣ ಸಂಗ್ರಹಣೆ ಹಾಗೂ ಬಳಕೆಗೆ ಮಾಡಲು ಸಿದ್ಧಪಡಿಸಿದ ಕ್ರಿಯಾಯೋಜನೆ ಹಾಗೂ ಯಾರ ಹೆಸರಿನಲ್ಲಿ ಹಣ ಪಾವತಿಸಲಾಗಿದೆ ಎಂಬುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ತೋರಣದಿನ್ನಿ ಗ್ರಾಪಂ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದರೆ, ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಸದಸ್ಯರಾದ ಯಲ್ಲಮ್ಮ, ಮಲ್ಲಮ್ಮ, ಜೋಸೆಫ್, ಬಸವಲಿಂಗಮ್ಮ ಹಾಗೂ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿದ್ದರು.