ರಾಯಚೂರು | ಹಳೇ ಆಶ್ರಯ ಕಾಲನಿ ನಿವಾಸಿಗಳಿಂದ ಹಕ್ಕುಪತ್ರ ವಿತರಣೆಗೆ ಆಗ್ರಹ
ರಾಯಚೂರು : ನಗರದ ಚಂದ್ರಬಂಡಾ ರಸ್ತೆಗೆ ಹೊಂದಿಕೊಂಡಿರುವ ಹಳೇ ಆಶ್ರಯ ಕಾಲನಿಯಲ್ಲಿನ ಸರ್ವೆ ನಂ.572, 573 ಹಾಗು 574ರಲ್ಲಿನ ವಾಸಿಸುತ್ತಿರುವ ಸುಮಾರು 600 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ನಿವಾಸಿಗಳು ಹೋರಾಟ ನಡೆಸಿದರು.
ಈ ಕುರಿತು ಮಹಾನಗರ ಪಾಲಿಕೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ನಿವಾಸಿಗಳು, ಸುಮಾರು 2,500ಕ್ಕೂ ಅಧಿಕ ಜನ ಇಲ್ಲಿ ವಾಸವಾಗಿದ್ದು, ಯಾರಿಗೂ ಹಕ್ಕು ಪತ್ರಗಳಿಲ್ಲ. 1990-91ನೇ ಸಾಲಿನಲ್ಲಿ ನಗರಸಭೆ ಆಶ್ರಯ ಸಮಿತಿಯಿಂದ ಈ ಬಡಾವಣೆಯಲ್ಲಿ 215 ಆಶ್ರಯ ಮನೆಗಳು, 299 ನಿವೇಶಗಳ ಹಕ್ಕುಪತ್ರಗಳನ್ನು ನಿವೇಶನ ಉಳ್ಳವರಿಗೆ ನೀಡಲಾಗಿದೆ. ಆದರೆ, ಅವರು ಯಾರು ಕೂಡ ಅಲ್ಲಿ ವಾಸವಾಗಿಲ್ಲ. ಹೀಗಾಗಿ ಅಲ್ಲಿನ ಮನೆಗಳ ಕಿಟಕಿ ಬಾಗಿಲುಗಳು ಕಿತ್ತುಕೊಂಡು ಹೋಗಿದ್ದು, ಅಂಥ ಮನೆಗಳಲ್ಲೇ ಸಾಕಷ್ಟು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಅಲ್ಲಿನ ಕನಿಷ್ಠ ರಸ್ತೆ ನೀರು ವಿದ್ಯುತ್ ಸೌಲಭ್ಯಗಳು ಇಲ್ಲದ ಪರಿಸ್ಥಿತಿ ಇದೆ. ಅಂಥ ಸನ್ನಿವೇಶದಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಏರ್ಪಟ್ಟಿದೆ ಎಂದರು.
ನಿರಂತರ ಹೋರಾಟ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಪರಿಣಾಮ ಕೆಲವೊಂದು ಸೌಲಭ್ಯಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಈವರೆಗೂ ಹಕ್ಕುಪತ್ರಗಳನ್ನು ಮಾತ್ರ ಪಡೆಯಲಾಗಿಲ್ಲ. ಆದರೆ, ಈಗ ಹಕ್ಕುಪತ್ರ ಪಡೆದುಕೊಂಡವರು ನಮ್ಮ ಮನೆಗಳನ್ನು ಖಾಲಿ ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಇದರಿಂದ ಆತಂಕದಲ್ಲಿ ಕಾಲದೂಡುವಂತಾಗಿದೆ. ಇನ್ನಾದರೂ ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬಡಾವಣೆ ನಿವಾಸಿಗಳಾದ ಗೋವಿಂದ ನಾಯಕ, ಕೆ.ಬಸವರಾಜ, ಮೊಹಿನುದ್ದೀನ್, ಮದಿನ್ ಸಾಬ್, ಸಲಾವುದ್ದೀನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.