ರಾಯಚೂರು | ಟಿಎಲ್‌ಬಿಸಿ ನಾಲೆಗೆ ಏ.20 ರವರೆಗೆ ನೀರು ಹರಿಸಲು ಆಗ್ರಹ

ರಾಯಚೂರು : ತುಂಗಭದ್ರಾ ಎಡದಂಡೆ ನಾಲೆಗೆ ಏ.20 ರವರೆಗೆ ನೀರು ಹರಿಸಬೇಕು. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಶಾಸಕರು ಕ್ರಮ ವಹಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದರು.
ಮಾನ್ವಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ನಾಲೆಯ ಅಸಮರ್ಪಕ ನೀರು ನಿರ್ವಹಣೆಯಿಂದ ಮಾನ್ವಿ ಹಾಗೂ ಸಿರವಾರ ತಾಲೂಕಿನ ಕೆಳ ಭಾಗದ ರೈತರು ತೊಂದರೆ ಅನುಭವಿಸುವಂತಾಗಿದೆ. ಎಡದಂಡೆ ನಾಲೆಯ ಮೈಲ್ 69ರಲ್ಲಿ ಸರಿಯಾದ ಗೇಜ್ ನಿರ್ವಹಣೆಯಾಗದ ಕಾರಣ ಕಾಲುವೆಯಲ್ಲಿ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಾರಿ ರೈತರು ಭತ್ತ ನಾಟಿ ಮಾಡಲು ವಿಳಂಬವಾಗಿದ್ದು, ಈಗ ಭತ್ತದ ಬೇಳೆ ಕಾಳು ಕಟ್ಟುವ ಹಂತದಲ್ಲಿದೆ. ಇನ್ನೂ ಎರಡು ಬಾರಿ ನೀರನ್ನು ಭತ್ತದ ಬೆಳೆಗೆ ನೀರು ಹರಿಸಬೇಕಾಗಿದೆ. ತುಂಗಭದ್ರಾ ಜಲಾಶಯದಲ್ಲಿ 23.786 ಟಿಎಂಸಿ ನೀರಿನ ಸಂಗ್ರಹವಿದ್ದು, ಏ.20 ರವರೆಗೆ ಕಾಲುವೆಗೆ ನೀರು ಹರಿಸಬೇಕು. ಎಲ್ಲಾ ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕಾಧ್ಯಕ್ಷ ಈರಣ್ಣ ಮರ್ಲಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.