ರಾಯಚೂರು | ಸಿ.ಟಿ.ರವಿ ಕ್ಷಮೆಯಾಚಿಸದಿದ್ದಲ್ಲಿ ಅವರ ನಿವಾಸದ ಮುಂದೆ ಧರಣಿ : ನಿರ್ಮಲಾ ಬೆಣ್ಣೆ ಎಚ್ಚರಿಕೆ
ರಾಯಚೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ನಲ್ಲಿ ಅಸಾಂವಿಧಾನಿಕ ಪದ ಬಳಸಿ ನಿಂದಿಸಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಅವರ ನಿವಾಸದ ಬಳಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಎಚ್ಚರಿಸಿದರು.
ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಸಿ.ಟಿ ರವಿ ಹೇಳಿಕೆಯಿಂದ ರಾಜ್ಯದ ಮಹಿಳೆಯರಿಗೆ ಕೆಟ್ಟ ಸಂದೇಶ ರವಾನೆಯಾಗಿದೆ. ದೇಗುಲ ಎಂದೇ ಭಾವಿಸುವ ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿರುವುದು ಸಭ್ಯತೆ ಅಲ್ಲ. ಸಿ.ಟಿ ರವಿ ಅವರ ನಡೆ ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಮಹಿಳೆಯರ ವಿರುದ್ಧ ಅವಾಚ್ಯ ಪದ ಬಳಸಿದ್ದರು. ಈಗ ಸಿ.ಟಿ ರವಿ, ಬಿಜೆಪಿ ನಾಯಕರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಇದು ಅವರ ಮನಸ್ಥಿತಿ ಏನೆಂದು ತಿಳಿಸುತ್ತದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಎಸ್ ಪ್ರತಿಭಾ ರೆಡ್ಡಿ, ಜ್ಯೋತಿ, ಭಾರತಿ, ವಂದನಾ ಶಿವುಕುಮಾರ ಉಪಸ್ಥಿತರಿದ್ದರು.