ರಾಯಚೂರು | ಮೋದಿಯಿಂದ ಪ್ರಧಾನಿ ಹುದ್ದೆಗೆ ಅಗೌರವ : ಸಚಿವ ಎನ್.ಎಸ್.ಬೋಸರಾಜು
ಎನ್.ಎಸ್.ಬೋಸರಾಜು
ರಾಯಚೂರು : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ನಡೆಯುವ ಸಣ್ಣ ಸಣ್ಣ ವಿಷಯಗಳನ್ನು ಪ್ರಸ್ತಾಪಿಸಿ ಅಪಪ್ರಚಾರ ಮಾಡುವ ಮೂಲಕ ಪ್ರಧಾನಿ ಹುದ್ದೆಗೆ ಅಗೌರವ ತರುತ್ತಿದ್ದಾರೆ. ತಮ್ಮ ಹುದ್ದೆಯ ಗಂಭೀರತೆಯನ್ನು ಮರೆತಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಟೀಕಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸರಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಹಾಗೂ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಅವರಿಗೆ ಕಣ್ಣು,ಕಿವಿ ಮೂಗು ಇಲ್ಲದಂತಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿವ ಅವರು 40 ಪರ್ಸೆಂಟ್ ಕಮಿಷನ್ ಸರಕಾರ ನಡೆಸಿ ಈಗ ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ. ಬಿ.ವೈ ವಿಜಯೇಂದ್ರ ಸಾವಿರಾರು ಕೋಟಿ ರೂ.ಲೂಟಿ ಮಾಡಿದ್ದಾರೆ. ಬಿಜೆಪಿಯ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಯತ್ನಾಳ್ ಅವರೇ ಬಹಿರಂಗವಾಗಿ ಹೇಳಿದ್ದಾರೆ ಎಂದರು.
ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಸಿ.ಎಂ ಸಿದ್ದರಾಮಯ್ಯನವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ತಾವು ಸಿಎಂ ಅಗಿದ್ದಾಗ 216 ನೋಟೀಸ್ ನೀಡಿ ವಕ್ಫ್ ಆಸ್ತಿ ಸ್ವಾಧೀನಕ್ಕೆ ಸೂಚನೆ ನೀಡಿದ್ದರು. ಈಗ ಸುಖಾ ಸುಮ್ಮನೆ ವಿರೋಧ ಪಕ್ಷದವರು ಗೊಂದಲ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ರಾಯಚೂರು ಜಿಲ್ಲೆಯಲ್ಲಿ ವಕ್ಫ್ ದಾಖಲೆಗಳ ಗೊಂದಲಗಳು ಇಲ್ಲ. ಹಾಗಾನೇದಾರು ಇದ್ದಲ್ಲಿ ಪರಿಶೀಲಿಸಲಾಗುತ್ತದೆ ಎಂದರು.
ಮುಡಾ ಪ್ರಕರಣದಲ್ಲಿ ಲೋಕಾಯಕ್ತರು ನೀಡಿದ್ದ ನೋಟೀಸ್ ಮುಖ್ಯಮಂತ್ರಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯನವ ಪಾತ್ರ ಏನೂ ಇಲ್ಲ ಎಂದರು.
ರಾಜ್ಯ ದಲ್ಲಿ ನಡೆದಿರುವ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಚನ್ನಪಟ್ಟಣದಲ್ಲಿ ತಾತ, ಮಗ, ಮೊಮ್ಮಗೆ ಕಣ್ಣೀರು ಹಾಕಿ ತಿರುಗಾಡುತ್ತಿದ್ದಾರೆ. ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸವಿದೆ. ಶಿಗ್ಗಾಂವದಲ್ಲಿ ಬಸವರಾಜ ಬೊಮ್ಮಾಯಿಯವರಿಂದ ಆಗಿರುವ ಅನ್ಯಾಯದ ಕುರಿತು ಜನರಲ್ಲಿ ಅಸಮಧಾನವಿದೆ. ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಸಾಜೀದ್ ಸಮೀರ್, ಮುಹಮ್ಮದ್ ಶಾಲಂ, ಬಷೀರುದ್ದೀನ್ ಸೇರಿದಂತೆ ಮತ್ತಿತರರಿದ್ದರು