ರಾಯಚೂರು | ಸಿ.ಎಂ ಕುರ್ಚಿಗಾಗಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಜಟಾಪಟಿ : ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ
ರಾಯಚೂರು : ರಾಜ್ಯದಲ್ಲಿಸಿ.ಎಂ ಕುರ್ಚಿಗಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲಿ ಜಟಾಪಟಿ ನಡೆಯುತ್ತಿದೆ. ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಆಗುವುದು ಇದು ಕಾಂಗ್ರೆಸ್ ಸಂಸ್ಕೃತಿನಾ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಸೋಮವಾರ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಯ ಆಧಾರದ ಮೇಲೆ ಮುಖ್ಯಮಂತ್ರಿ ಆಗಲು ಸ್ಪರ್ಧೆ ಮಾಡ್ತಿದ್ದರಲ್ಲಾ ಇದು ಕಾಂಗ್ರೆಸ್ ಸಂಸ್ಕೃತಿನಾ, ಮಾಹಾತ್ಮಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿರೋರು ಯಾವತ್ತು ಜಾತಿ ತಂದಿಲ್ಲ. ಚುನಾವಣೆ ವೇಳೆ ಜಾತಿ ವಿಷ ಬೀಜ ಬಿತ್ತಿ ಹಿಂದು ಸಮಾಜವನ್ನು ಒಡೆದು, ಬಡವರಿಗೆ ಹೆಂಡ ಕೊಟ್ಟು, ಹಣ ಕೊಟ್ಟು ಓಟು ತೆಗೆದುಕೊಂಡು ಈಗ ಮುಖ್ಯಮಂತ್ರಿ ಸ್ಥಾನಕ್ಕೂ ಜಾತಿ ರೂಪವಾಗಿ ಬೆಳೆಯುತ್ತಿರೋದು ನೋಡಿದರೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ನಾಚಿಕೆ ಪಡಬೇಕಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲೂ ಗುಂಪುಗಾರಿಗೆ ಇದೆ. ಈಗ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣ ಇದೆ.ಎಲ್ಲಾ ಪಾರ್ಟಿಯಲ್ಲೂ ಇದು ಬಂದು ಹೋಗಿದೆ. ಬಿಜೆಪಿ ಹಿಂದೂ ಸಂಸ್ಕೃತಿ ಮೇಲೆ ಬೆಳೆದಿದೆ.ಇದರಲ್ಲಿ ತಮ್ಮ ಜೀವನವನ್ನೇ ತಪ್ಪಸ್ಸು ಮಾಡಿರುವವರು ಇದ್ದಾರೆ. ಇದು ಮುಂದೆ ಸರಿ ಹೋಗತ್ತೆ. ಆದರೆ ಕಾಂಗ್ರೆಸ್ ನಲ್ಲಿ ಇರುವುದನ್ನು ಸರಿ ಮಾಡೋರು ಯಾರು ? ಅದು ಸರಿ ಹೋಗಲ್ಲ ಎಂದರು.
ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಕುರುಬ ಸಮಾಜದ ಪೂಜಾರಿಗಳಿಗೆ ಉದ್ಯೋಗ, ತರಬೇತಿ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗುತ್ತಿಲ್ಲ ಎಂದು ಸಮಾಜದ ಸ್ವಾಮೀಜಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.