ರಾಯಚೂರು | ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಡಾ.ಅಶೋಕ ದಳವಾಯಿ ಭೇಟಿ
ರಾಯಚೂರು : ಜಿಲ್ಲೆ ಸೇರಿ ರಾಜ್ಯದಲ್ಲಿ ಕೃಷಿಯಲ್ಲಿ ಆಗುವ ಹವಮಾನ ಬದಲಾವಣೆ ಕುರಿತು ಸಂಬಂಧಿಸಿ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ರೈತರೊಂದಿಗೆ ನಿರಂತರ ಚರ್ಚೆ ಮಾಡಲಾಗುತ್ತಿದ್ದು, ರೈತರು ವಿಜ್ಞಾನಿಗಳ ಸಲಹೆ ಪಡೆದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ ಎಂ.ದಳವಾಯಿ ತಿಳಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇಂದು ಭೇಟಿ ನೀಡಿ ಟ್ರೇಡರ್ಸ್, ಕಮಿಷನ್ ಏಜೆಂಟರ್ಸಗಳು ಹಾಗೂ ಪ್ರಗತಿಪರ ರೈತರೊಂದಿಗೆ ಚರ್ಚಿಸಿ ವಿವಿಧ ಬೆಳೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಅವರು, ಡಿ.27ರಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ನಂತರ ಮೊದಲ ಪ್ರವಾಸವೇ ರಾಯಚೂರಿನಿಂದ ಆರಂಭಿಸಲಾಗಿದ್ದು, ರೈತರಿಗೆ ಬೇಕಾಗುವ ಅಗತ್ಯ ನೆರವನ್ನು ಆಯೋಗದಿಂದ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಹವಾಮಾನ ವೈಪರೀತ್ಯಗಳಿಂದ ರೈತರಿಗೆ ಏನು ಮಾಡಬಹುದು ಅದನ್ನು ಕಂಡುಕೊಳ್ಳಲು ಆಯೋಗದಿಂದ ನಿರಂತರ ಪ್ರಯತ್ನ ನಡೆಯುತ್ತದೆ ಎಂದು ಹೇಳಿದರು.
ರೈತರಿಂದ ಕಾಲಕಾಲಕ್ಕೆ ಸಲಹೆ ಪಡೆಯರಿ :
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ಸುಧಾರಣೆಯಾಗಬೇಕು. ಅಲ್ಲದೆ ರೈತರಿಂದ ಸಲಹೆ ಸೂಚನೆಗಳನ್ನು ಪಡೆಯಬೇಕು. ರೈತರಿಗೆ ವಾಹನದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಟ್ರೇಡರ್ಸ್ಗಳು ಭಾಗವಹಿಸುವಂತೆ ನೋಡಿಕೊಂಡು ರೈತರಿಗೆ ಉತ್ತಮ ದರ ದೊರಕಿಸಿಕೊಡಬೇಕೆಂದು ಸಂಬಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಮ್ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಕಾರ್ಯದರ್ಶಿ ಆದಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಯ ಪ್ರಕಾಶ್, ಎಪಿಎಮ್ ಸಿ ಸಹಾಯಕ ಕಾರ್ಯದರ್ಶಿ ಕೃಷ್ಣ ಸೇರಿದಂತೆ ಇತರರು ಇದ್ದರು.