ರಾಯಚೂರು | ವಾರ್ತಾ ಇಲಾಖೆಯಿಂದ ಡಾ.ರಾಜ್‌ಕುಮಾರ್ ಅವರ ಜನ್ಮದಿನಾಚರಣೆ

ರಾಯಚೂರು : ರಾಯಚೂರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದ ಆವರಣದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಗಾಯಕರೆಲ್ಲರೂ ಒಗ್ಗೂಡಿ ಡಾ.ರಾಜ್‌ಕುಮಾರ್ ಅವರು ಹಾಡಿದ ಹಲವಾರು ಗೀತೆಗಳಿಗೆ ತಮ್ಮ ಧ್ವನಿಯನ್ನು ಸೇರಿಸಿ ಡಾ.ರಾಜ್‌ಕುಮಾರ್ ಅವರ ಸುಮಧುರ ಕಂಠದ ಹಾಡುಗಳ ಹೊಳೆಯನ್ನೇ ಹರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವು ಎ.24ರಂದು ಅರ್ಥಪೂರ್ಣವಾಗಿ ನಡೆಯಿತು.
ಅತಿಥಿಗಳು, ಗಣ್ಯರು ಮತ್ತು ಅವರ ಅಭಿಮಾನಿಗಳು ಮೊದಲಿಗೆ ಡಾ.ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ತಹಶೀಲ್ದಾರರಾದ ಸುರೇಶ ವರ್ಮಾ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ವರ್ಮಾ ಅವರು, ಡಾ.ರಾಜ್‌ಕುಮಾರ್ ಬರೀ ನಟರಾಗಿರದೇ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕನ್ನಡವನ್ನು ಉಸಿರಾಗಿಸಿಕೊಂಡು ಕನ್ನಡದ ಉಳಿವಿನ ಹೋರಾಟದಲ್ಲಿ ಭಾಗಿಯಾದರು ಎಂದು ಹೇಳಿದರು.
ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಗೌರವ ಕಾರ್ಯದರ್ಶಿಗಳಾದ ಜೆ.ಎಲ್.ಗೋಪಿ ಅವರು ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಈ ನಾಡು ಕಂಡ ಶ್ರೇಷ್ಠ ನಟರಾಗಿದ್ದಾರೆ. ನಾಡು ನುಡಿಯ ಬಗ್ಗೆ ಡಾ.ರಾಜ್‌ಕುಮಾರ್ ಅವರಿಗಿದ್ದ ಬದ್ಧತೆ ಶ್ರದ್ಧೆ ನಮಗೆ ಸದಾಕಾಲ ಆದರ್ಶಪ್ರಾಯವಾಗಿದೆ ಎಂದರು.
ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಡಾ.ರಾಜ್‌ಕುಮಾರ್ ಗೀತೆಗಳ ಗಾಯನ :
ಉದ್ಘಾಟನಾ ಸಮಾರಂಭದ ಬಳಿಕ ಡಾ.ರಾಜ್‌ಕುಮಾರ್ ಅವರ ಹಾಡುಗಳ ಗೀತ ಗಾಯನ ಕಾರ್ಯಕ್ರಮ ನಡೆಯಿತು. ರಾಯಚೂರಿನ ಹಿರಿಯ ಕಲಾವಿದರಾದ ನರೇಂದ್ರಕುಮಾರ, ನಿವೃತ್ತ ಎಲ್‌ಐಸಿ ಅಧಿಕಾರಿಯಾದ ಗುರುರಾಜ್, ಆರೋಗ್ಯ ಇಲಾಖೆಯ ನಾಗರಾಜ ಜಗತಾಪ, ದೂರದರ್ಶನ ಕಲಾವಿದರಾದ ನಬಿಸಾಬ ಬೇಗ್, ಬಸನಗೌಡ ಹೊಕ್ರಾಣಿ, ನಿವೃತ್ತ ಎಲ್‌ಐಸಿ ನೌಕರರಾದ ಹುಲಿಗೆಪ್ಪ ಜಕ್ಕಲಿ, ಕವಿ ತಿಮ್ಮಯ್ಯ, ಯುವ ಗಾಯಕರಾದ ಕೃಷಿ ವಿಶ್ವ ವಿದ್ಯಾಲಯದ ನರಸಿಂಹಲು, ವಿರುಪಾಕ್ಷಿ, ಚಂದ್ರಶೇಖರ, ಸಂಗೀತಾ ವೀರಾಪುರ, ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ ಅವರು ಡಾ.ರಾಜ್‌ಕುಮಾರ್ ಗೀತೆಗಳನ್ನು ಹೇಳಿ ರಂಜಿಸಿದರು. ಹೆಸರಾಂತ ಕಲಾವಿದರಾದ ಜ್ಯೂನಿಯರ್ ಡಾ.ರಾಜ್‌ಕುಮಾರ್ ಎಂದೇ ಹೆಸರಾದ ಗುರು ದೇವರಮನಿ ಅವರು ಡಾ.ರಾಜ್‌ಕುಮಾರ್ ಅವರ ಹಾಡುಗಳನ್ನು ಮತ್ತು ಡಾ.ರಾಜಕುಮಾರ ಅವರ ಸಂಭಾಷಣೆಗಳನ್ನು ಹೇಳಿ ಚಪ್ಪಾಳಿ ಗಿಟ್ಟಿಸಿದರು.
ಸಮಾರಂಭದಲ್ಲಿ ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಬಸವರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕಾರ್ಯದರ್ಶಿಗಳಾದ ರಾವುತ್‌ರಾವ್ ಬರೂರು, ಕನ್ನಡಾಭಿಮಾನಿಗಳಾದ ಹಿರಿಯರಾದ ಅನ್ವರ್, ಅನಿವೀರಯ್ಯ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್, ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ಇನ್ನೀತರ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಲಿಂಗರಾಜ್, ಎ.ಪ್ರಕಾಶ್, ಅಬ್ಬಾಸ್‌ಖಾನ್, ಅಪ್ರೆಂಟಿಸ್ ತರಬೇತುದಾರರಾದ ನವೀನ್, ಹೊರಗುತ್ತಿಗೆ ನೌಕರರಾದ ವೆಂಕಟೇಶ ಹಾಗೂ ಇನ್ನೀತರರು ಇದ್ದರು.
ಕಾರ್ಯಕ್ರಮದಲ್ಲಿ ಎಸ್.ಕೆ.ಪ್ಯಾರಾ ಮೆಡಿಕಲ್ ಕಾಲೇಜು ಸೇರಿದಂತೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಯುವಜನರು ಭಾಗಿಯಾಗಿದ್ದರು.