ರಾಯಚೂರು | ಸಿಎಂ ಪತ್ನಿ ವಿರುದ್ದ ಈಡಿ ದಾಳಿ ರಾಜಕೀಯ ಪ್ರೇರಿತ : ಸಚಿವ ಈಶ್ವರ್ ಖಂಡ್ರೆ

ಈಶ್ವರ್ ಖಂಡ್ರೆ
ರಾಯಚೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಈಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಈಗಾಗಲೇ ಲೋಕಾಯುಕ್ತ ತನಿಖೆ ನಡೆಸಿದಾಗ ಅರೋಪ ಮುಕ್ತವಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಸಿಎಂಗಳ ವಿರುದ್ದ ಈಡಿ ಕೆಲಸ ಮಾಡುತ್ತಿದೆ ಎಂದು ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದರು.
ಅವರಿಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿ, ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಇತರೆ ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರ ದುರುಪಯೋಗ ಬಹಳ ದಿನ ಮಾಡಲು ಆಗುವುದಿಲ್ಲ ಎಂದರು.
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದ ಆಭಿವೃದ್ದಿಗೆ ನೂರು ಕೋಟಿ ರೂ. ಗಳ ಯೋಜನೆ ರೂಪಿಸಲಾಗಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶವಿಲ್ಲ. ಗಿಡಗಳನ್ನು ನೆಟ್ಟು ಅರಣ್ಯ ಪ್ರದೇಶದ ಬೆಳವಣಿಗೆಗೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ನೂರುಕೋಟಿ ರೂ. ಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಮಂಜೂರು ಮಾಡಲು ಉದ್ದೇಶಿಸಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಶಿಸ್ತು ಮತ್ತು ಸಿದ್ದಾಂತ, ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಬರುವವರೆಗೆ ಸ್ವಾಗತವಿದೆ. ಶ್ರೀರಾಮಲು ಸಹ ಬರಬಹುದು. ಯಾರದೇ ವಿರೋಧವಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಿಎಂ ಸ್ಥಾನಗಳು ಖಾಲಿಯಿಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.