ರಾಯಚೂರು | ಮಕ್ಕಳ ಬದುಕು ರೂಪಿಸುವ ಶಿಕ್ಷಣ ಜಾರಿಯಾಗಬೇಕು : ಬಾಬರ್ ಅಲಿ
ರಾಯಚೂರು : ಮಕ್ಕಳ ಬದುಕು ರೂಪಿಸುವ ಹಾಗೂ ಅನ್ನ ನೀಡುವ ಪ್ರಾಯೋಗಿಕ ಶಿಕ್ಷಣ ನೀಡುವ ವ್ಯವಸ್ಥೆ ಉಂಟಾದರೆ ಮಾತ್ರ ಎಲ್ಲರಿಗೂ ಶಿಕ್ಷಣ ಸಿಗಬಹುದು ಎಂದು ಪ್ರಪಂಚದ ಅತ್ಯಂತ ಕಿರಿಯ ಮುಖ್ಯ ಶಿಕ್ಷಕ ಎಂದು ಖ್ಯಾತಿ ಪಡೆದ ಬಾಬರ ಅಲಿ ಹೇಳಿದ್ದಾರೆ.
ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಗೃಹದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ʼಜಿಲ್ಲೆಯ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮʼದಲ್ಲಿ ಅನೇಕ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಡತನ, ಅನಕ್ಷರಸ್ಥ ತಂದೆತಾಯಿಗಳ ಅಜ್ಞಾನದಿಂದ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು. ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂದರು.
ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ 2009ರಲ್ಲಿ ತನ್ನ ಹದಿನಾರನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಮುಖ್ಯ ಶಿಕ್ಷಕ ಎಂದು ಖ್ಯಾತರಾದ ಬಾಬರ್ ಅಲಿ 8 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ವಿಶ್ವ ಖ್ಯಾತಿ ಪಡೆದಿದ್ದಾರೆ. ಶಿಕ್ಷಕರು ಅವರ ಜೀವನ ಸಾಧನೆಯನ್ನು ಅರಿತು ಪ್ರೇರಣೆ ಪಡೆದು ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ಕಾಳಪ್ಪ ಡಿ.ಬಡಿಗೇರ್, ಶಿಕ್ಷಣಾಧಿಕಾರಿ ಆರ್.ಇಂದಿರಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ವಾಸವಿ ಸೇವಾ ಸಮಿತಿ ಹಾಗೂ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಚಿತ್ರಪಟುಗಳ ಬ್ಯಾನರನ್ನು ಬಿಡುಗಡೆ ಮಾಡಲಾಯಿತು.
ಬಿಇಒ ಚಂದ್ರಶೇಖರ ಭಂಡಾರಿ, ಎನ್ ಬಿ.ರಂಗಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಬಾರಿ ಉಪ ನಿರ್ದೇಶಕ ಸೋಮಶೇಖರ ಹೊಕ್ರಾಣಿ, ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಸಂಚಾಲಕ ಸೈಯದ್ ಹಫಿಜುಲ್ಲಾ ಉಪಸ್ಥಿತರಿದ್ದರು.