ರಾಯಚೂರು | ನೀರಾವರಿ ಕಾಲುವೆಗಳಿಗೆ ಏಪ್ರಿಲ್ 20ರವರೆಗೆ ನೀರು ಹರಿಸಲು ರೈತ ಸಂಘ ಆಗ್ರಹ

ರಾಯಚೂರು : ನಾರಾಯಣಪುರ ಬಲದಂಡೆ ಕಾಲುವೆ, ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ಮಾ.23 ರಿಂದ ನೀರು ನಿಲ್ಲಿಸುವುದಾಗಿ ನೀರಾವರಿ ಇಲಾಖೆ ಪ್ರಕಟಣೆಯನ್ನು ಕೂಡಲೇ ವಾಪಸ್ಸು ತೆಗೆದುಕೊಂಡು ಏಪ್ರಿಲ್ 20 ರ ತನಕ ನೀರು ಹರಿಸಬೇಕು. ಲಕ್ಷಾಂತರ ಎಕರೆ ಭತ್ತ ಮತ್ತು ಇನ್ನಿತರೆ ಬೆಳೆಗಳನ್ನು ಉಳಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆ ಹಾಕುವ ಸಂದರ್ಭದಲ್ಲಿ ಅಣೆಕಟ್ಟಿನಲ್ಲಿ ಸಮೃದ್ಧ ನೀರು ಇದ್ದು ಎರಡು ಬೆಳೆಗಳಿಗೆ ತೊಂದರೆ ಆಗದಂತೆ ನೀರು ನೀಡುವುದಾಗಿ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಭರವಸೆ ನೀಡಿತ್ತು. ಆದರೆ ಈಗ ಬೇಸಿಗೆಯಲ್ಲಿ ಕುಡಿಯುವ ನೀರು ನೆಪ ಹೇಳಿ ನೀರು ನಿಲ್ಲಿಸುವುದಾಗಿ ಹೇಳುತ್ತಿರುವುದು ಒಪ್ಪುವಂತಹದ್ದಲ್ಲ. ಸಾಲ ಸೋಲ ಮಾಡಿ ಬೆಳೆ ಹಾಕಿರುವ ರೈತರಿಗೆ ಬೆಳೆ ಸಿಗದಂತೆ ಆದರೆ ದೊಡ್ಡ ಪ್ರಮಾಣದ ಸಾಲಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ನಾರಾಯಣಪುರ ಬಲದಂಡೆ ಹಾಗೂ ತುಂಗಭದ್ರಾ ಎಡದಂಡೆ ಮುಖ್ಯ ನಾಲೆ ಹಾಗೂ ಉಪ ನಾಲೆಗಳಲ್ಲಿ ಗೇಟ್ ಗಳು ಇಲ್ಲದೇ ಇರುವುದರಿಂದ ನೀರು ವೃಥಾ ವ್ಯರ್ಥವಾಗುತ್ತಿದೆ. ಈ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಈ ಎರಡು ನಾಲಾ ಗೇಟ್ ಗಳ ದುರಸ್ತಿಗೆ ಅಗತ್ಯ ಅನುದಾನ ಒದಗಿಸಬೇಕು. ಬಜೆಟ್ ನಲ್ಲಿ ಈ ಪ್ರಸ್ತಾಪ ಕೈ ಬಿಟ್ಟಿದ್ದರೆ ಬಜೆಟ್ ಮೇಲಿನ ಚರ್ಚೆಯಲ್ಲಿ ರಾಯಚೂರು ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಮಂತ್ರಿಗಳು ಭಾಗವಹಿಸಿ ಈ ಪ್ರಸ್ತಾಪವನ್ನು ಒಳಗೊಳ್ಳುವಂತೆ ಕ್ರಮ ವಹಿಸಬೇಕು ಇಲ್ಲವಾದರೆ ರೈತರ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಟಿ ಯಶವಂತ ಎಚ್ಚರಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರ ಬಜೆಟ್ ಪ್ರಸ್ತಾಪಗಳನ್ನು ಖಂಡಿಸಿ ,ರೈತ ಕಾರ್ಮಿಕ ಮುಂತಾದ ದುಡಿಯುವ ವರ್ಗದ ಕಲ್ಯಾಣಕ್ಕೆ ಸಹಾಯ ಆಗುವ ಪರ್ಯಾಯ ಬಜೆಟ್ ಮಂಡಿಸಲು ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಮಾ.12 ,13 ರಂದು ಎರಡು ದಿನಗಳ ಕಾಲ ಜನ ಚಳುವಳಿಗಳ ಪರ್ಯಾಯ ಬಜೆಟ್ ಅಧಿವೇಶನ ಸಂಘಟಿಸಲಾಗುತ್ತಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ತನ್ನ ಚುನಾವಣಾ ಭರವಸೆಯಂತೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿಲ್ಲ ,ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ವಿಫಲವಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿ ಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಭಾಕರ್ ಪಾಟೀಲ , ಖಾಜಾ ಅಸ್ಲಂ, ಕೆ.ಜಿ ವೀರೇಶ ಮತ್ತಿತರರು ಇದ್ದರು